ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾವಳಿ ಅವ್ಯಾಹತ!

00
Published on

ಕೋಲಾರ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ನಿಯಮಕ್ಕಿಲ್ಲ ಒತ್ತು | ಸ್ಥಳೀಯ ಸಂಸ್ಥೆಗಳಿಗೆ ಆದಾಯ ಖೋತಾ

ಕಿರುವಾರ ಎಸ್.ಸುದರ್ಶನ್ ಕೋಲಾರ

ಜಿಲ್ಲಾದ್ಯಂತ ಅನಧಿಕೃತ ಫ್ಲೆಕ್ಸ್ ಬ್ಯಾನರ್‌ಗಳ ಹಾವಳಿ ದಿನೇದಿನೆ ಹೆಚ್ಚಾಗುತ್ತಿದ್ದು, ನಗರದ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತಿದೆ. ಜತೆಗೆ ಸ್ಥಳೀಯ ಸಂಸ್ಥೆಗಳಿಗೆ ಆದಾಯ ನಷ್ಟ ಸಹ ಉಂಟಾಗುತ್ತಿದೆ. ಹಬ್ಬ, ಜನ್ಮದಿನ, ಗಣ್ಯರ ಆಗಮನ, ರಾಜಕೀಯ ಸಭೆ-ಸಮಾರಂಭ, ಜಯಂತಿ, ಮಹೋತ್ಸವ ಹೀಗೆ ನಾನಾ ರೀತಿ ಕಾರ್ಯಕ್ರಮಗಳ ಪ್ರಯುಕ್ತ ಸ್ಥಳೀಯ ಸಂಸ್ಥೆಗಳ ಅನುಮತಿ ಇಲ್ಲದೆಯೇ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಹಾಕಿ ತೆರಿಗೆ ವಂಚನೆ ಮಾಡಲಾಗುತ್ತಿದೆ. ಇದು ಅಧಿಕಾರಿಗಳ ತಲೆ ಬಿಸಿಗೆ ಕಾರಣವಾಗಿದೆ.

ಕೋಲಾರದ ನಗರ ಬಸ್ ನಿಲ್ದಾಣ, ಮೆಕ್ಕೆ ವೃತ್ತ, ನ್ಯಾಯಾಲಯ ವೃತ್ತ, ಬಂಗಾರಪೇಟೆ ವೃತ್ತ, ಕ್ಲಾಕ್ ಟವರ್, ಡೂಂ ಲೈಟ್ ವೃತ್ತದಲ್ಲಿ ಬ್ಯಾನರ್‌ಗಳ ಅಳವಡಿಕೆ ಹೆಚ್ಚಾಗಿದೆ. ಅಲ್ಲದೆ ಕೆಜಿಎಫ್, ಮುಳಬಾಗಿಲು, ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರು ತಾಲೂಕು ಕೆಂದ್ರಗಳಲ್ಲೂ ಸಮಸ್ಯೆ ಹೊರತಾಗಿಲ್ಲ.

ನಗರ, ಪಟ್ಟಣ, ಗ್ರಾಮೀಣ ಪ್ರದೇಶ ಹಾಗೂ ಪುರಸಭೆ ವ್ಯಾಪ್ತಿಯಲ್ಲಿಫ್ಲೆಕ್ಸ್, ಬ್ಯಾನರ್ ಅಳವಡಿಸುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ. ಆದೇಶವು ಕಾಗದ ಪತ್ರಕ್ಕೆ ಸಿಮೀತವಾಗಿದ್ದು, ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ಹಾವಳಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ.

ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ಅಳವಡಿಕೆ ವಿಷಯ ಸಾಕಷ್ಟು ಜಟಾಪಟಿಗೆ ಕಾರಣವಾಗಿತ್ತು. ಪಕ್ಷದ ಮುಖಂಡರು ಕೆಲ ಸ್ಥಳಗಳಲ್ಲಿ ಸ್ಪಾಟ್‌ನಲ್ಲಿ ಬ್ಯಾನರ್ ಅಳವಡಿಸಲು ನಾ ಮುಂದು ತಾ ಮುಂದು ಎನ್ನುತ್ತಾರೆ. ನಗರ ಬಸ್ ನಿಲ್ದಾಣದಲ್ಲಿ ಈ ಹಿಂದೆ ಬ್ಯಾನರ್, ಫ್ಲೆಕ್ಸ್ ಅಳವಡಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಸಹ ಆಗಿತ್ತು.

ಅಧಿಕಾರಿಗಳು ಅನಧಿಕೃತ ಬ್ಯಾನರ್‌ಗಳನ್ನು ತೆರವುಗೊಳಿಸಲು ಮುಂದಾದರೆ ರಾಜಕೀಯ ಒತ್ತಡ ಬರುತ್ತದೆ. ಇದರಿಂದಾಗಿ ಅವರು ಏನೂ ಕ್ರಮಕೈಗೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಸಿನಿಮಾ ಥಿಯೆಟರ್, ಬಟ್ಟೆ ಅಂಗಡಿ, ಹೋಟೆಲ್, ದ್ವಿಚಕ್ರವಾಹನ, ಕಾರು ಶೋರೂಂ ಹೀಗೆ ವಿವಿಧ ರೀತಿಯ ಅಂಗಡಿ ಮಳಿಗೆಯವರು ನಾಮಲಕಗಳನ್ನು ಎಲ್ಲೆಂದರಲ್ಲಿ ಹಾಕಿರುತ್ತಾರೆ. ಅಲ್ಲದೆ ಅದು ವಾಹನಗಳ ನಿಲುಗಡೆಗೂ ತೊಂದರೆಯಾಗುತ್ತಿದೆ.

ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸುವುದು ತಪ್ಪುಎಂದು ಜನಪ್ರತಿಧಿಗಳ ಗಮನಕ್ಕೆ ಇದ್ದರೂ ಸಹ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ. ಏಕೆಂದರೆ ಅದರಲ್ಲಿ ಅವರ ಫೋಟೊಗಳನ್ನೇ ಬಳಕೆ ಮಾಡಲಾಗಿರುತ್ತದೆ. ಇನ್ನಾದರೂ ಎಚ್ಚೆತ್ತುಕೊಂಡು ನಗರದ ಸೌಂದರ್ಯ ಕಾಪಾಡಲು ಫ್ಲೆಕ್ಸ್ ಅಳವಡಿಕೆಗೆ ಬ್ರೇಕ್ ಹಾಕಲು ಮುಂದಾಗಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ರಸ್ತೆ ಅಪಘಾತಕ್ಕೆ ಆಹ್ವಾನ: ನಗರಸಭೆ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆ ಅನಧಿಕೃತ ಬ್ಯಾನರ್‌ಗಳ ಅಳವಡಿಕೆ ವಾಡುವವರ ವಿರುದ್ಧ ದಂಡ ವಿಧಿಸಿರುವ ಪ್ರರಕಣಗಳು ವಿರಳ. ಇನ್ನಾದರೂ ನಗರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕಡ್ಡಾಯವಾಗಿ ಅನುಮತಿ ಪಡೆದು ಹಾಗೂ ಸೂಚಿಸಿದ ಸ್ಥಳಗಳಲ್ಲಿ ಮಾತ್ರ ಬ್ಯಾನರ್, ಫ್ಲೆಕ್ಸ್ ಅಳವಡಿಸಲು ಕ್ರಮವಹಿಸಬೇಕು. ಕೆಲವರು ರಸ್ತೆ ಮಧ್ಯದಲ್ಲಿ, ತಿರುವುಗಳಲ್ಲಿ ಅವೈಜ್ಞಾನಿಕ ಬ್ಯಾನರ್‌ಗಳನ್ನು ಕಟ್ಟುವುದರಿಂದ ವಾಹನಗಳ ಅಪಘಾತಕ್ಕೂ ಕಾರಣವಾಗುತ್ತಿದೆ.

ರಾತ್ರೋರಾತ್ರಿ ಅಳವಡಿಕೆ: ಆಯೋಜಕರು ಯಾವುದೇ ಅನುಮತಿ ಪಡೆದುಕೊಳ್ಳದೆ ರಾತ್ರೋರಾತ್ರಿ ಬ್ಯಾನರ್ ಹಾಗೂ ಫ್ಲೆಕ್ಸ್ ಗಳನ್ನು ಅಳವಡಿಸುತ್ತಿದ್ದಾರೆ. ರಾಜಕೀಯ ಸವಾವೇಶ, ಸಮ್ಮೇಳನದಲ್ಲಿ ಕಾರ್ಯಕ್ರಮಗಳ ಸಂಬಂಧ ಅಳವಡಿಸಲಾಗುವ ಬ್ಯಾನರ್, ಫ್ಲೆಕ್ಸ್ ಗಳೆಲ್ಲ ಅನಧಿಕೃತವಾಗಿರುತ್ತದೆ. ಅಧಿಕಾರಿಗಳಿಗೆ ಈ ಬಗ್ಗೆ ಪ್ರಶ್ನೆ ವಾಡಲು ಸಾಧ್ಯವಾಗದ ಸ್ಥಿತಿ ಎದುರಾಗುತ್ತಿದೆ. ಅನುಮತಿ ಪಡೆದಿರುವ ಬ್ಯಾನರ್‌ಗಳನ್ನು ನಗರ ಸ್ಥಳೀಯ ಸಂಸ್ಥೆಯ ಸಿಬ್ಬಂದಿ ಆಯೋಜಕರಿಂದ ಶುಲ್ಕ ಪಾವತಿಸಿಕೊಂಡು ಅವುಗಳನ್ನು ತೆರವು ವಾಡುತ್ತಿದ್ದಾರೆ.

ತೆರವುಗೊಳಿಸದಂತೆ ರಾಜಕೀಯ ಒತ್ತಡ: ಒಂದು ವೇಳೆ ಅಧಿಕಾರಿಗಳು ಅನಧಿಕೃತ ಬ್ಯಾನರ್,ಫ್ಲೆಕ್ಸ್ ಗಳನ್ನು ತೆರವುಗೊಳಿಸಲು ಮುಂದಾದರೆ ಆಯೋಜಕರು ಶಾಸಕ, ಎಂಎಲ್ಸಿ, ಅಧ್ಯಕ್ಷೆ, ಉಪಾಧ್ಯಕ್ಷರ ಗಮನಕ್ಕೆ ತಂದು ತೆರವುಗೊಳಿಸದಂತೆ ಒತ್ತಡ ತರುತ್ತಾರೆ ಎಂಬ ಮಾತುಗಳು ಕೇಳಿಬಂದಿದೆ. ಸ್ಥಳೀಯ ಸಂಸ್ಥೆಗಳಿಗೆ ಆಗುತ್ತಿರುವ ನಷ್ಟ ತಡೆಯಲು ಜನಪ್ರತಿನಿಧಿಗಳು ಸಹಕಾರ ನೀಡಬೇಕು. ಆಯೋಜಕರಿಗೆ ತಿಳಿ ಹೇಳಿ, ಅನುಮತಿ ಪಡೆದುಕೊಂಡು ಅಳವಡಿಸಿಕೊಳ್ಳಲು ಸೂಚಿಸಿದರೆ ಆದಾಯವು ಹೆಚ್ಚಾಗುತ್ತದೆ.

ನಗರಸಭೆಯಿಂದ ಅನುಮತಿ ಪಡೆಯುವವರಿಗೆ ಮಾತ್ರ ಬ್ಯಾನರ್,ಫ್ಲೆಕ್ಸ್ ಪ್ರಿಂಟ್ ಮಾಡಿಕೊಡಬೇಕು. ಈಗಾಗಲೇ ಅಳವಡಿಸಿರುವ ಆಯೋಜಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವಂತೆ ಆರೋಗ್ಯ ನಿರೀಕ್ಷಕರಿಗೆ ಸೂಚಿಸಲಾಗುವುದು. - ಪ್ರಸಾದ್ ನಗರಸಭೆ ಪೌರಾಯುಕ್ತ. ಕೋಲಾರ ನಗರದಲ್ಲಿ ಅನಧಿಕೃತ ಫ್ಲೆಕ್ಸ್ , ಬ್ಯಾನರ್‌ಗಳ ಅಳವಡಿಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ನಗರಸಭೆಗೆ ತೆರಿಗೆ ವಂಚಿಸುತ್ತಿದ್ದಾರೆ. ಇದಕ್ಕೆ ಅಂತ್ಯಕಾಣಬೇಕಾಗಿದೆ. - ರಾಕೇಶ್‌ಗೌಡ ನಗರಸಭೆ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net