ಮಾನದಂಡದ ಅನುಸಾರ ಅನಧಿಕೃತ ವಿದ್ಯುತ್ ಸಂಪರ್ಕಗಳು ಸಕ್ರಮ

Screenshot_2025-09-10-11-18-00-06.jpg
Published on

ಧಾರವಾಡ: ರಾಜ್ಯದಲ್ಲಿ ಕಟ್ಟಡ ಮುಕ್ತಾಯ ಪ್ರಮಾಣಪತ್ರ

(ಸಿಸಿ), ವಾಸಯೋಗ್ಯ ಪ್ರಮಾಣಪತ್ರ (ಇಸಿ) ಇಲ್ಲದ ಮನೆ, ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕುರಿತಂತೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಕಳೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಬರುವ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಪ್ರಕಟಿಸಲಾಗುವುದು ಎಂದರು.

ರೈತರ ಪಂಪಸೆಟ್‌ಗಳಿಗೆ ಟಿಸಿ:

ರೈತರ ಪಂಪಸೆಟ್‌ಗಳಿಗೆ ಟ್ರಾನ್ಸ್ಫಾರ್ಮರ್ ಹಾಗೂ ಸುಮಗಮ ವಿದ್ಯುತ್ ಪೂರೈಸುವ ಸಂಬಂಧ ಸರ್ಕಾರ ಸೂಕ್ತ ಕ್ರಮ ವಹಿಸಲಿದೆ. 2004 ರಿಂದಲೂ ಜಾರಿಯಲ್ಲಿರುವ ಅನಧಿಕೃತ ವಿದ್ಯುತ್ ಸಂಪರ್ಕಗಳನ್ನು ಸಕ್ರಮಗೊಳಿಸಲು ಕೆಲ ಮಾನದಂಡಗಳನ್ನು ಅನುಸರಿಸಲಾಗಿದೆ. ಕುಸುಮ ಬಿ ಯೋಜನೆಯಡಿ 500 ಮೀ. ವ್ಯಾಪ್ತಿಯ ಹೊರಗಿರುವ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಶೇ. 80 ರಷ್ಟು ಅನುದಾನ ಹಾಗೂ ಶೇ. 20ರಷ್ಟು ರೈತರ ವಂತಿಕೆ ಪಡೆಯಲಾಗುತ್ತಿದೆ. ಇದು ರೈತರಿಗೆ ಹೊರೆ ಆಗುತ್ತಿದೆ ಎಂಬ ಆಕ್ಷೇಪಗಳಿವೆ. ಹೀಗಾಗಿ ರೈತರಿಗೆ ಆರ್ಥಿಕ ವೆಚ್ಚವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿದ್ಯುತ್ ಕೊರತೆ ಇಲ್ಲ:

ರಾಜ್ಯದಲ್ಲಿ ವಿದ್ಯುತ್‌ಗೆ ಕೊರತೆ ಇಲ್ಲ. ಹೀಗಾಗಿ ನಿರ್ವಹಣೆ ಸಂದರ್ಭ ವಿದ್ಯುತ್ ಕಡಿತ ಬಿಟ್ಟರೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಶೇ. 65ರಷ್ಟು ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ವಿದ್ಯುತ್ ಸಿಗುತ್ತಿದೆ. ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಜಾರಿಗೊಳಿಸುವ ಮೂಲಕ 3,000 ಮೆಘಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ 120 ಎಕರೆ ಜಮೀನು ಬೇಕಾಗಲಿದ್ದು, ಒಳಗಡೆ ಕೇಬಲ್ ಅಳವಡಿಸಿ ಈ ಭೂಮಿಯಲ್ಲಿ ಅರಣ್ಯ ಬೆಳೆಸಲಾಗುವುದು. ನಂತರ ವರಾಹಿ ನದಿಗೂ ಪಂಪ್ ಸ್ಟೋರೇಜ್ ವಿದ್ಯುತ್ ಉತ್ಪಾದನೆ ಮಾಡುವ ಆಲೋಚನೆ ಸರಕಾರಕ್ಕಿದೆ ಎಂದರು.

ಖಾಲಿ ಹುದ್ದೆ ಭರ್ತಿಗೆ ಕ್ರಮ:

ರಾಜ್ಯ ಇಂಧನ ಇಲಾಖೆಯು 1,500 ಜೆ.ಇ, ಎಇ ಹುದ್ದೆಗಳನ್ನು ಭರ್ತಿ ಮಾಡಿಕೊಂಡಿದೆ. ಮುಂದಿನ ಒಂದು ತಿಂಗಳೊಳಗಾಗಿ 3 ಸಾವಿರ ಲೈನ್‌ಮನ್‌ಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಿದೆ ಎಂದು ಸಚಿವರು ಹೇಳಿದರು.

ಶಾಸಕ ಮಹೇಶ ಟೆಂಗಿನಕಾಯಿ, ಎನ್.ಎಚ್. ಕೋನರಡ್ಡಿ ,ಎಂ.ಆರ್.ಪಾಟೀಲ್, ಶಾಕೀರ್ ಸನದಿ, ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳಾದ ಗೌರವಗುಪ್ತಾ, ಪಂಕಜಕುಮಾರ ಪಾಂಡೆ, ಜಿಲ್ಲಾಧಿಕಾರಿ ದಿವ್ಯಪ್ರಭು, ಸಿಇಒ ಭುವನೇಶ ಪಾಟೀಲ್, ಹೆಸ್ಕಾಂ ಎಂಡಿ ವೈಶಾಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net