

ಲಿಂಗಸುಗೂರು: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ನಡೆಸುತ್ತಿರುವ ಅನಧಿಕೃತ ಕೋಚಿಂಗ್ ಸೆಂಟರ್ ಮತ್ತು ವಸತಿ ನಿಲಯಗಳನ್ನು ಬಂದ್ ಮಾಡಬೇಕು. ಇಲ್ಲದಿದ್ದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಒ ಹುಂಬಣ್ಣ ರಾಠೋಡ್ ಎಚ್ಚರಿಕೆ ನೀಡಿದ್ದಾರೆ.
ಲಿಂಗಸುಗೂರು, ಹಟ್ಟಿ, ಮುದಗಲ್, ಮಸ್ಕಿ ಮತ್ತು ಗುರುಗುಂಟಾ ಭಾಗಗಳಲ್ಲಿ ಅನಧಿಕೃತವಾಗಿ ಕೋಚಿಂಗ್ ಸೆಂಟರ್ ಮತ್ತು ವಸತಿ ನಿಲಯ, ಬೇಸಿಗೆ ಶಿಬಿರ, ಟುಟೋರಿಯಲ್ ನಡೆಸಲಾಗುತ್ತಿದೆ. ಇವುಗಳನ್ನು ಶಾಶ್ವತವಾಗಿ ಮುಚ್ಚಿಸುವಂತೆ ಸಂಘ ಸಂಸ್ಥೆಗಳಿಂದ ದೂರು ಬಂದ ಕಾರಣ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ತಂಡ ರಚಿಸಿ ದಾಳಿ ನಡೆಸಿ ಅನಧಿಕೃತ ಸೆಂಟರ್‌ಗಳಿಗೆ ನೋಟಿಸ್ ನೀಡಿ ದೃಢೀಕರಣ ಪಡೆಯಲಾಗಿದೆ.
ಆದರೂ ಪರವಾನಗಿ ಪಡೆಯದೆ ಸೆಂಟರ್‌ಗಳನ್ನು ನಡೆಸಲಾಗುತ್ತಿದೆ.ಪಟ್ಟಣದ ಎಕ್ಸ್‌ಪರ್ಟ್ ಟುಟೋರಿಯಲ್, ಓಂಕಾರ ಕೋಚಿಂಗ್ ಸೆಂಟರ್, ಬ್ಲ್ಯೂಬರ್ಡ್ ಟುಟೋರಿಯಲ್, ಜ್ಞಾನಾಮೃತ ಕೋಚಿಂಗ್ ಸೆಂಟರ್, ಮಾತೋಶ್ರೀ ಟುಟೋರಿಯಲ್ ಅಂಕಲಿಮಠ ಈ ಕೋಚಿಂಗ್ ಸೆಂಟರ್‌ಗಳಿಗೆ ವಸತಿ ರಹಿತ ತರಗತಿ ನಡೆಸಲು ಉಪನಿರ್ದೇಶಕರು ಅನುಮತಿ ನೀಡಿರುತ್ತಾರೆಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.