

ಸಿಂಧನೂರು: ನಗರದ ಅನಧಿಕೃತ ಕಟ್ಟಡ, ನಿವೇಶನಗಳನ್ನು ನಗರಸಭೆಯಲ್ಲಿ ನೋಂದಾಯಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಮನವಿ ಮಾಡಿದರು.
ಸ್ಥಳೀಯ ನಗರಸಭೆಯಲ್ಲಿ ಮಂಗಳವಾರ ಅನಧಿಕೃತ ಆಸ್ತಿಗಳ ನೋಂದಣಿ ಕುರಿತು ಕರಪತ್ರ ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರದಲ್ಲಿ 32,932 ಆಸ್ತಿಗಳ ಸಂಖ್ಯೆಯಿದೆ. ಅದರಲ್ಲಿ 14,796 ಅಧಿಕೃತ ನಿವೇಶನಗಳಿವೆ.
3076 ಅನಧಿಕೃತ ನಿವೇಶನಗಳಿವೆ. 9,165 ಅಧಿಕೃತ ವಸತಿ ಕಟ್ಟಡಗಳಿವೆ. 3,488 ಅನಧಿಕೃತ ಕಟ್ಟಡಗಳಿವೆ. 1,703 ಅಧಿಕೃತ ವಾಣಿಜ್ಯ ಕಟ್ಟಡಗಳಿದ್ದರೆ, 704 ಅನಧಿಕೃತ ವಾಣಿಜ್ಯ ಕಟ್ಟಡಗಳಿವೆ. ಅನಧಿಕೃತ ಕಟ್ಟಡ ಹಾಗೂ ನಿವೇಶನ ಹೊಂದಿದವರು ಒಂದು ವರ್ಷದ ಶೇ.2% ತೆರಿಗೆ ನೀಡಿ ಫಾರ್ಮ ನಂ-3 ಎ ನೀಡಲಾಗುವುದು. ಇದರಿಂದ ನಗರಸಭೆಗೆ ಸುಮಾರು 5 ಕೋಟಿ ತೆರಿಗೆ ಸಂಗ್ರಹವಾಗಲಿದೆ ಎಂದರು.
ಅಧಿಕೃತ ನಿವೇಶನಗಳು, ಸರ್ಕಾರ, ನಿಗಮದಿಂದ ನೀಡಿದ ನಿವೇಶನಗಳು, ಕಂದಾಯ ಇಲಾಖೆ ನೀಡಿದ ಹಕ್ಕುಪತ್ರಗಳು, ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಿದ ನಿವೇಶನಗಳು ಅಧಿಕೃತವಾಗಿದ್ದು, ಅವರಿಗೆ ಫಾರ್ಮ ನಂ-3 ನೀಡಲಾಗುತ್ತಿದೆ. ಇನ್ನೂ ಅನಧಿಕೃತ, ಭೂ ಪರಿವರ್ತನೆಯಾಗದ, ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸದ ನಿವೇಶನಗಳನ್ನು ಇನ್ನು ಮುಂದೆ ನಗರಸಭೆಯಲ್ಲಿ ನೋಂದಾಯಿಸಿಕೊಂಡು ಫಾರ್ಮ ನಂ-3ಎ ನೀಡಲಾಗುವುದು ಎಂದರು.
ಅನಧಿಕೃತ ಆಸ್ತಿಗಳನ್ನು ಹೊಂದಿದವರು ನಗರಸಭೆಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ನಗರಸಭೆ ವ್ಯಾಪ್ತಿಯೊಳಗೆ ಇರುವ ಸರಕಾರಿ ಜಾಗ/ಅರೆ ಸರಕಾರಿ/ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿರುವ ಸ್ವತ್ತುಗಳನ್ನು ಹೊರತುಪಡಿಸಿ ಇನ್ನುಳಿದ ಕಟ್ಟಡ ನಿವೇಶನಗಳಿಗೆ ಆಸ್ತಿ ತೆರಿಗೆ ನಿರ್ಧರಣೆಗೊಳಿಸಿ ಆಸ್ತಿ ತೆರಿಗೆಯನ್ನು 2024-25ನೇ ಸಾಲಿನ ಅಂತ್ಯದವರೆಗೆ ಪೂರ್ಣಪ್ರಮಾಣದಲ್ಲಿ ಪಾವತಿಸಿಕೊಂಡು ಸಂಬಂಧಪಟ್ಟ ಆಸ್ತಿ ಮಾಲೀಕರಿಂದ ಅವಶ್ಯಕ ದಾಖಲಾತಿಗಳನ್ನು ಪಡೆದು ಪುರಸಭೆ ಅಧಿನಿಯಮದಂತೆ ಅಧಿಕೃತ ಸ್ವತ್ತಿಗೆ ಎ ಖಾತಾ ಫಾರ್ಮ ನಂ.3 ಮತ್ತು ಅನಧಿಕೃತ ಸ್ವತ್ತಿಗೆ ಖಾತಾ ಬಿ ಯಲ್ಲಿ ಫಾರ್ಮ ನಂ.3ಎ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಪೌರಾಯುಕ್ತ ಮಂಜುನಾಥ ಗುಂಡೂರು ಮಾತನಾಡಿ, 2024-25 ನೇ ಸಾಲಿಗೆ 5.80 ಕೋಟಿ ರೂ. ತೆರಿಗೆ ಬೇಡಿಕೆಯಿದ್ದು, 5.30 ಕೋಟಿ ರೂ.ವಸೂಲಿ ಮಾಡಲಾಗಿದೆ. ಇನ್ನೂ 50.72 ಲಕ್ಷ ರೂ. ತೆರಿಗೆ ಬಾಕಿ ಇದೆ. ಶೇ.91.27ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರು.
ಸದಸ್ಯರಾದ ಚಂದ್ರಶೇಖರ ಮೈಲಾರ, ಕೆ.ಜಿಲಾನಿ ಪಾಷಾ, ಮುಖಂಡರಾದ ಪ್ರಭುರಾಜ, ವಿಠ್ಠಲರಾವ್, ರೋಹಿತಕುಮಾರ ಇತರರಿದ್ದರು.