

ಬಾಳೆಹೊನ್ನೂರು: ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿ ಪಕ್ಕದ ಫುಡ್ ಕಾರ್ನರ್ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಅಂಗಡಿಯನ್ನು ಬಿ.ಕಣಬೂರು ಗ್ರಾಪಂನಿಂದ ಬುಧವಾರ ತೆರವುಗೊಳಿಸಲಾಯಿತು.
ಬಿಎಸ್‌ಎನ್‌ಎಲ್ ಕಚೇರಿ ಪಕ್ಕದ ಗ್ರಾಪಂ ಜಾಗವನ್ನು ಗ್ರಾಪಂನಿಂದ ದುರಸ್ತಿಗೊಳಿಸಿ ಫಾಸ್ಟ್‌ಫುಡ್, ಬಟ್ಟೆ, ಚಪ್ಪಲಿ, ಬುಟ್ಟಿ ಅಂಗಡಿ ಸೇರಿದಂತೆ ವಿವಿಧ ವ್ಯಾಪಾರ ನಡೆಸುತ್ತಿದ್ದವರಿಗೆ ಜಾಗ ಅಳತೆ ಮಾಡಿ ಹಂಚಿಕೆ ಮಾಡಲಾಗಿತ್ತು. ಜಾಗದ ಮುಖ್ಯರಸ್ತೆ ಬದಿ ಒಂದು ಅಂಗಡಿ ಮಳಿಗೆಯನ್ನು ಕೆಎಂಎಫ್‌ನ ನಂದಿನಿ ಮಿಲ್ಕ್ ಪಾರ್ಲರ್ ಅಂಗಡಿ ನಿರ್ಮಿಸಲು ಮೀಸಲಿರಿಸಲಾಗಿತ್ತು. ಈ ಜಾಗದಲ್ಲಿ ಈ ಹಿಂದೆ ಬುಟ್ಟಿ ಅಂಗಡಿಯಿತ್ತು. ಬುಟ್ಟಿ ಅಂಗಡಿ ಮಹಿಳೆಗೆ ಬೇರೆ ಜಾಗದಲ್ಲಿ ಅಂಗಡಿ ನಿರ್ಮಿಸುವಂತೆ ಸೂಚಿಸಿದ್ದರೂ ಗ್ರಾಪಂನ ಅನುಮತಿಯಿಲ್ಲದೆ ಅನಧಿಕೃತವಾಗಿ ಅಂಗಡಿ ನಿರ್ಮಿಸಿದ್ದರು. ಈ ವಿಚಾರ ಗ್ರಾಪಂ ಗಮನಕ್ಕೆ ಬರುತ್ತಿದ್ದಂತೆ ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯದರ್ಶಿ ಸ್ಥಳಕ್ಕೆ ಭೇಟಿ ನೀಡಿ ಅಂಗಡಿ ತೆರವುಗೊಳಿಸಲು ಸೂಚಿಸಿದರು. ಆದರೆ ಮಹಿಳೆ ಜಾಗ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ಮಹಿಳೆಗೆ ಎಷ್ಟು ತಿಳಿ ಹೇಳಿದರೂ ಕೇಳಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಪಂ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಪೊಲೀಸರ ಸಮ್ಮುಖದಲ್ಲಿ ಅಂಗಡಿ ಮಳಿಗೆಯನ್ನು ತೆರವುಗೊಳಿಸಿದರು. ಗ್ರಾಪಂ ಗುರುತಿಸಿರುವ ಜಾಗದಲ್ಲಿ ಬುಟ್ಟಿ ಅಂಗಡಿ ತೆರೆಯುವಂತೆ ಮಹಿಳೆಗೆ ಸೂಚಿಸಿದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ, ಸದಸ್ಯರಾದ ಇಬ್ರಾಹಿಂ ಶಾಫಿ, ಜಂಶೀದ್ ಅಹ್ಮದ್, ಕಾರ್ಯದರ್ಶಿ ರಾಮಪ್ಪ ಇತರರಿದ್ದರು.