ಅನಧಿಕೃತ ಜಾಹೀರಾತು ತೆರವಿಗೆ ವಿಫಲವಾದಲ್ಲಿ ಅಧಿಕಾರಿಗಳಿಂದಲೇ ಠೇವಣಿ ವಸೂಲಿ

ads
Published on

ಬೆಂಗಳೂರು:ಹೈಕೋರ್ಟ್ ತಪರಾಕಿ ಬಳಿಕ ಎಚ್ಚೆತ್ತುಗೊಂಡ ಬಿಬಿಎಂಪಿ, ರಾಜಧಾನಿಯಲ್ಲಿ ಅಂದಗೆಡಿಸಿರುವ ಪ್ಲೆಕ್ಸ್, ಬ್ಯಾನರ್, ಹೋರ್ಡಿಗ್ಸ್,ಬಂಟಿಂಗ್ಸ್, ಫ್ಲಾಗ್​ ಹಾಗೂ ಎಲ್‌ಇಡಿ ಸೇರಿ ಇತರ ಬಗೆಯ ಅನಧಿಕೃತ ಜಾಹೀರಾತು ಫಲಕ ತೆರವುಗೊಳಿಸಲು ಮುಂದಾಗಿದೆ.

ಆಯಾ ವಲಯದ ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರು, ಒಂದು ವೇಳೆ ಅನಧಿಕೃತ ಜಾಹೀರಾತು ಫಲಕ ತೆರವುಗೊಳಿಸಲು ವಿಫಲವಾಗಿದ್ದಲ್ಲಿ ಇವರನ್ನೇ ನೇರ ಹೊಣೆ ಮಾಡಿ ತಲಾ 50 ಸಾವಿರ ರೂ.ಠೇವಣಿ ಹಣ ವಸೂಲಿ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕಟ್ಟಿನಿಟ್ಟಿನ ಆದೇಶ ಹೊರಡಿಸಿದ್ದಾರೆ. ನಗರದ ಸಾರ್ವಜನಿಕರ ಸ್ಥಳ ಸೇರಿ ಎಲ್ಲೆಂದರಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಹೈಕೋರ್ಟ್, ಮೂರು ವಾರಗಳ ಕಾಲ ಕಾಲಾವಕಾಶ ಕೊಟ್ಟು ಒಂದೇ ಒಂದು ಪ್ಲೆಕ್ಸ್ ಕಂಡುಬಂದರೆ ಪಾಲಿಕೆ ಮತ್ತು ಸರ್ಕಾರ ತಲಾ 50 ಸಾವಿರ ರೂ.ಠೇವಣಿ ಇಡಬೇಕೆಂದು ನಿರ್ದೇಶಿಸಿದೆ.ಹೀಗಾಗಿ, ನ್ಯಾಯಾಲಯದ ಆದೇಶದಂತೆ ಕೂಡಲೇ ತುರ್ತು ಕ್ರಮಕೈಗೊಂಡು ಎಲ್ಲ ರೀತಿಯ ಜಾಹೀರಾತು ಲಕವನ್ನು ತೆರವುಗೊಳಿಸಬೇಕೆಂದು ತುಷಾರ್ ಗಿರಿನಾಥ್, ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಹೈಕೋರ್ಟ್ ಆದೇಶ ಪಾಲನೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿದರೆ ಅಥವಾ ಕರ್ತವ್ಯಲೋಪದಿಂದಾಗಿ ಮುಂದೆ ಎದುರಾಗುವ ಪರಿಣಾಮಗಳಿಗೆ ಸಂಬಂಧಪಟ್ಟ ಅಪರ, ಜಂಟಿ ಆಯುಕ್ತರು ಹಾಗೂ ಮುಖ್ಯ ಅಭಿಯಂತರರನ್ನು ವೈಯಕ್ತಿಕವಾಗಿ ಜವಾಬ್ದಾರಿರನ್ನಾಗಿಸಲಾಗುವುದು. ವಲಯ ಆಯುಕ್ತರ ಉಸ್ತುವಾರಿಯಲ್ಲಿ ಎಲ್ಲ ಬಗೆಯ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕೆಂದು ತುಷಾರ್ ಗಿರಿನಾಥ್ ಆದೇಶದಲ್ಲಿ ಸೂಚಿಸಿದ್ದಾರೆ. ನಗರದಲ್ಲಿ 60 ಸಾವಿರಕ್ಕೂ ಅಧಿಕ ಅನಧಿಕೃತ ಜಾಹೀರಾತು ಲಕ ಅಳವಡಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಜಾಹೀರಾತು ತೆರವು ವಿಚಾರದಲ್ಲಿ ಪದೇಪದೆ ಹೈಕೋರ್ಟ್ ಪಾಲಿಕೆ ವಿರುದ್ಧ ಕಿಡಿಕಾರುತ್ತಿದೆ.ಅಧಿಕಾರಿಗಳಂತೂ ಜಾಹೀರಾತು ಹಾವಳಿ ನಿಯಂತ್ರಿಸಲು ವಿಫಲವಾಗಿದ್ದಾರೆ.

ಶಾಶ್ವತವಾಗಿ ಕೊನೆಯಾಗಲಿ: ಸಿಲಿಕಾನ್ ಸಿಟಿಯ ಸಾರ್ವಜನಿಕರ ಸ್ಥಳಗಳಲ್ಲಿ ಯಾರು ಯಾವಾಗ ಬೇಕಾದರೂ ಜಾಹೀರಾತು, ಫ್ಲೆಕ್ಸ್​​ ಪ್ರದರ್ಶಿಸಬಹುದು ಎನ್ನುವಂತಹ ವಾತಾವರಣ ಉಂಟಾಗಿದೆ. ರಾಜಕೀಯ ಫುಡಾರಿಗಳಂತೂ ಸಾರ್ವಜನಿಕ ಸ್ಥಳಗಳೆಲ್ಲವೂ ತಮ್ಮ ಸ್ವಂತ ಜಾಗ ಎಂಬಂತೆ ಮನ ಬಂದಲ್ಲೆಲ್ಲ ಜಾಹೀರಾತು ಫಲಕ ಅಳವಡಿಸುತ್ತಿದ್ದಾರೆ. ನಾಯಕರ ಜನ್ಮದಿನಕ್ಕೆ ಶುಭಕೋರುವದಿಂದ ಹಿಡಿದು ಸಣ್ಣಪುಟ್ಟ ಕಾರ್ಯಕ್ರಮಗಳ ಮಾಹಿತಿ ನೀಡುವವರೆಗೆ ರಸ್ತೆಯ ಇಕ್ಕೆಲಗಳಲ್ಲೂ ಅಳವಡಿಸಿರುವ ಬಣ್ಣ ಬಣ್ಣದ ಫಲಕಗಳು ಕಣ್ಣಿಗೆ ರಾರಾಜಿಸುತ್ತಿವೆ. ಹೀಗಾಗಿ, ಬೆಂಗಳೂರಿನಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ಹೆಚ್ಚಾಗಿರುವುದನ್ನೂ ಕಂಡು ಬೇಸತ್ತ ಹೈಕೋರ್ಟ್, ಸರ್ಕಾರ ಮತ್ತು ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ, ಒಂದು ವೇಳೆ ಜಾಹಿರಾತು ತೆರವಿಗೊಳಿಸಲು ವಿಫಲವಾದರೆ ಸರ್ಕಾರ ಮತ್ತು ಬಿಬಿಎಂಪಿ ತಲಾ 50 ಸಾವಿರ ರೂ. ಠೇವಣಿ ಇಡುವಂತೆ ನಿರ್ದೇಶಿಸಿರುವುದು ಗಮನಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net