ಹಂಚಿಕೆಯಾಗದ ನಿವೇಶನ; ಹೋರಾಟಕ್ಕೆ ಸಜ್ಜಾದ ಅರ್ಜಿದಾರರು

BYD Purasabhe
Published on

ಬ್ಯಾಡಗಿ: ನಿವೇಶನ ಸಹಿತ ಮನೆ ವಿತರಿಸುವಂತೆ ಪಟ್ಟಣದ ನಿರಾಶ್ರಿತರು ಅರ್ಜಿ ಸಲ್ಲಿಸಿ ಹತ್ತಾರು ವರ್ಷಗಳೇ ಕಳೆದಿದ್ದು, ಒಬ್ಬರಿಗೂ ಮನೆಭಾಗ್ಯ ಲಭಿಸಿಲ್ಲ. ಮಲ್ಲೂರು ರಸ್ತೆಯಲ್ಲಿ ನಿವೇಶನಕ್ಕೆ ಖರೀದಿಸಿದ 10 ಎಕರೆ ಭೂಮಿ ಹಾಳು ಬಿದ್ದಿದೆ. ವಂತಿಕೆ ಹಣ ಕಟ್ಟಿದವರಿಗೆ ನಿವೇಶನವೂ ಇಲ್ಲವೆನ್ನುವಂತಾಗಿದೆ. ಪರಿಣಾಮ ಹಕ್ಕುಪತ್ರ ಕೊಡುವಂತೆ ಆಗ್ರಹಿಸಿ ನೂರಾರು ಕುಟುಂಬಗಳು ಜೂ.24ರಂದು ಬೀದಿಗಿಳಿದು ಹೋರಾಟ ನಡೆಸಲು ಸಜ್ಜಾಗಿದ್ದಾರೆ.

ಅರ್ಜಿ ಸಲ್ಲಿಸಿದವರ ಮನೆಗಳಿಗೆ ಪುರಸಭೆ ಸಿಬ್ಬಂದಿ ಖುದ್ದಾಗಿ ತೆರಳಿ, ಪರಿಶೀಲನೆ ನಡೆಸಿ ಅರ್ಹರ ಪಟ್ಟಿಯನ್ನು ಆಶ್ರಯ ಸಮತಿಗೆ ನೀಡಬೇಕಿದೆ. ಈ ಕಾರ್ಯ ಸಮರ್ಪಕವಾಗಿ ನಡೆಯದಿರುವುದೆ ಸಮಸ್ಯೆಗೆ ಮೂಲಕಾರಣ ಎನ್ನಲಾಗಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಕಾರ್ಯವಿಳಂಬದಿಂದ ಬಡವರಿಗೆ ಇಂದಿಗೂ ನ್ಯಾಯ ಸಿಗುತ್ತಿಲ್ಲವೆಂಬ ಆರೋಪ ಕೇಳಿಬಂದಿದೆ.

2017ರಲ್ಲಿ ಮಲ್ಲೂರು ರಸ್ತೆಯ ಬಳಿ ಶಾಸಕ ಬಸವರಾಜ ಶಿವಣ್ಣನವರ 10 ಎಕರೆ ಜಮೀನನ್ನು ಪುರಸಭೆ ಹೆಸರಲ್ಲಿ ಖರೀದಿಸಿ ಜಿ ಪ್ಲಸ್ ಮನೆ ನೀಡಲು 814 ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿತ್ತು. ಇನ್ನೇನು ಹಕ್ಕುಪತ್ರ ಸಿಕ್ಕೆಬಿಟ್ಟಿತು ಎನ್ನುವಷ್ಟರಲ್ಲಿ ಚುನಾವಣೆ ಎದುರಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಯಿತು.

2018ರಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವಧಿಯಲ್ಲಿ ಹೊಸದಾಗಿ ನೇಮಕವಾದ ಆಶ್ರಯ ಸಮಿತಿ ಪುನಃ ಪರಿಶೀಲನೆ ಕಾರ್ಯಕ್ಕೆ ಮುಂದಾಯಿತು. ಸುಮಾರು 600 ಕುಟುಂಬಗಳನ್ನು ಉಳಿಸಿಕೊಳ್ಳಲಾಯಿತು. ಜಿಪ್ಲಸ್ ಮಾದರಿ ಮನೆ ನಿರ್ಮಾಣ ತುಸು ತಡವಾಗಲಿದೆ. ವಿತರಣೆ ಗೊಂದಲ ಇತ್ಯಾದಿ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಿ, ಸ್ಥಳೀಯವಾಗಿ ಜಿ ಪ್ಲಸ್ ಮಾದರಿಗೆ ವಿರೋಧ ಕೇಳಿ ಬಂದ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ನಿವೇಶನ ನೀಡಲು ನಿರ್ಧರಿಸಲಾಯಿತು. ಪುರಸಭೆ ಅಧಿಕಾರಿಗಳಿಗೆ ಹಾಗೂ ಆಶ್ರಯ ಸಮಿತಿಗೆ ಮೀಸಲಾತಿ ಆಧರಿಸಿ ಫಲಾನುಭವಿ ಆಯ್ಕೆ ಸವಾಲಾಗಿ ಪರಿಣಿಮಿಸಿತು. 2023ರಲ್ಲಿ ಆಯ್ಕೆಗೊಂಡ ಫಲಾನುಭವಿಗಳ ಪಟ್ಟಿಗೆ ಎಲ್ಲ ಸದಸ್ಯರ ಸಹಕಾರ ಸಿಗಲಿಲ್ಲ. ಅಂತಿಮ ಪಟ್ಟಿಯಲ್ಲಿ ಸಾಕಷ್ಟು ಗೊಂದಲ ಉಂಟಾಗಿ ಅತ್ತಿತ್ತ ಎನ್ನುವಷ್ಟರಲ್ಲಿ ವಿಧಾನನಸಭೆ ಚುನಾವಣೆ ಎದುರಾಗಿ ಆಗಲೂ ಹಕ್ಕುಪತ್ರ ನೀಡಲಿಲ್ಲ. ಈ ಪಟ್ಟಿಯಲ್ಲಿ ಅನರ್ಹರಿದ್ದಾರೆ ಎನ್ನುವ ಕೂಗೆದ್ದಿದ್ದು, ದಾಖಲೆ ಹಿಡಿದು ಹೊರಾಟಕ್ಕೆ ಸಜ್ಜಾಗಿದ್ದಾರೆ.

2018 ರಲ್ಲಿ ಆಯ್ಕೆಗೊಂಡಿದ್ದ 804 ಫಲಾನುಭವಿಗಳ ಪೈಕಿ ಅನರ್ಹರೆಂದು ಕೆಲವರನ್ನು ಪಟ್ಟಿಯಿಂದ ತೆಗೆದುಹಾಕಿ 650 ಫಲಾನುಭವಿಗಳನ್ನು ಉಳಿಸಲಾಗಿದೆ. ರಾಜೀವ ಗಾಂಧಿ ವಸತಿ ನಿಗಮದಿಂದ ಆಯ್ಕೆಗೊಂಡ ಪಟ್ಟಿಯನ್ನು ಬಹಿರಂಗಪಡಿಸದೆ, ಫಲಾನುಭವಿಗಳಿಂದ 30 ಸಾ.ರೂ. ವಂತಿಗೆ ಹಣ ತುಂಬಿಸಿಕೊಳ್ಳಲಾಗಿದೆ. ಆದರೆ ಹಣ ತುಂಬಿಸಿಕೊಳ್ಳಲು ರಾಜೀವ ಗಾಂಧಿ ವಸತಿ ನಿಗಮ ಇಂದಿಗೂ ಆದೇಶವಿಲ್ಲ. ಆಯ್ಕೆಪಟ್ಟಿಗೆ ಈವರೆಗೂ ಅನುಮೋದನೆ ಕೂಡ ಸಿಕ್ಕಿಲ್ಲ, ಫಲಾನುಭವಿಗೆ ಹಣ ನೀಡಲು ಅಧಿಕೃತವಾಗಿ ತಿಳಿವಳಿಕೆ ಪತ್ರ ನೀಡಿಲ್ಲ. ಹಾಗಾದ್ರೆ 30 ಸಾ.ರೂ.ಯಾವ ಖಾತೆಗೆ ಜಮೆಯಾಗಿದೆ ಎನ್ನುವ ಪ್ರಶ್ನೆ ಉಂಟಾಗಿದೆ.

ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಬದುಕಬೇಕಾದ ಬಡಕುಟುಂಬಗಳ ಗೋಳು ಕೇಳೋರಿಲ್ಲದಂತಾಗಿದೆ. ನಮ್ಮ ಹಕ್ಕು ಪಡೆಯಲು ನಾವು ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಫಲಾನುಭವಿಗಳು ತಿಳಿಸಿದ್ದಾರೆ.

ಬಡವರಿಂದ ಹಣ ತುಂಬಿಸಿಕೊಂಡ ಫಲಾನುಭವಿಗೆ ನ್ಯಾಯ ಒದಗಿಸಬೇಕು. ಅರ್ಹರಿಗೆ ನಿವೇಶನ ಹಕ್ಕುಪತ್ರ ವಿತರಿಸಬೇಕು.10 ವರ್ಷಗಳಿಂದ ಎಲ್ಲ ಮುಖ್ಯಾಧಿಕಾರಿಗಳು, ಜನಪ್ರತಿನಿಧಿಗಳು ಬಡವರಿಗೆ ಭರವಸೆ ನೀಡಿದ್ದಾರೆ. ಬಡವರ ಹಕ್ಕಿಗಾಗಿ ಪುರಸಭೆ ಕಾರ್ಯಾಲಯ ಎದುರು ಜೂ.24 ರಂದು ಅನಿರ್ಧಿಷ್ಟಾವಧಿ ಧರಣಿ ಆರಂಭಿಸುತ್ತೇವೆ. I ಪಾಂಡುರಂಗ ಸುತಾರ, ಆಶ್ರಯ ಮನೆ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಸಾವಿರಾರು ಜನ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದು, ಮರು ಪರಿಶೀಲನೆ ನಡೆಸಿ ಅರ್ಹರಿಗೆ ನಿವೇಶನ ನೀಡುತ್ತೇವೆ. ಸರ್ಕಾರದಿಂದ ಆಶ್ರಯ ಸಮಿತಿ ನಾಮಕರಣವಾಗಬೇಕಿದೆ. 30 ಸಾ.ರೂ.ವಂತಿಗೆ ಹಣ ಪುರಸಭೆ ಖಾತೆಯಲ್ಲಿ ಜಮೆಯಿದೆ.I ವಿನಯಕುಮಾರ ಹೊಳೆಯಪ್ಪಗೋಳ,ಬ್ಯಾಡಗಿ ಪುರಸಭೆ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net