ಅಧಿಕಾರಿಗಳ ಕೈಗೆಟುಕದ ಯುವನಿಧಿ ಲೆಕ್ಕಾಚಾರ!

yuva nidhi
Published on

ಶಿವಮೊಗ್ಗ: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾಗಿರುವ ಯುವನಿಧಿ ಯೋಜನೆಗೆ ಕಳೆದ ಒಂದು ವಾರದಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ವಾರ ಶಿವಮೊಗ್ಗದಲ್ಲೇ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುವ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು ಏಳು ಸಾವಿರ ಅರ್ಜಿಗಳು ಈ ಯೋಜನೆಗೆ ಸಲ್ಲಿಕೆಯಾಗುವ ನಿರೀಕ್ಷೆಯಿದೆ.

ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸರಣಿ ಸಭೆಗಳು ನಡೆದಿದ್ದು ಯುವನಿಧಿ ಅರ್ಜಿ ಸಲ್ಲಿಕೆ ಬಗ್ಗೆ ವ್ಯಾಪಕ ಪ್ರಚಾರ ನೀಡಲಾಗಿದೆ. ಈ ವರ್ಷ ಸುಮಾರು 15 ಸಾವಿರ ವಿದ್ಯಾರ್ಥಿಗಳು ಪದವಿ ಹಾಗೂ ಡಿಪ್ಲೊಮಾ ಪೂರೈಸಿದ್ದಾರೆ. ಈ ಪೈಕಿ ಸುಮಾರು ಏಳು ಸಾವಿರ ಮಂದಿ ನಿರುದ್ಯೋಗಿಗಳು ಯೋಜನೆಯ ಪ್ರಯೋಜನ ಪಡೆಯಲು ಅರ್ಹತೆ ಹೊಂದಿರಬಹುದು ಎಂಬ ಲೆಕ್ಕಾಚಾರ ಜಿಲ್ಲಾಡಳಿತದ್ದು.
ಆರಂಭದಲ್ಲಿ ನೋಂದಣಿ ಸಂಖ್ಯೆಯನ್ನು ಆಯಾ ಜಿಲ್ಲೆಗಳಲ್ಲೇ ಪರಿಶೀಲಿಸುವ ವ್ಯವಸ್ಥೆಯಿತ್ತು. ಆದರೆ ಇದನ್ನು ಬದಲಿಸಿದ ಸರ್ಕಾರ ಕೇಂದ್ರೀಕೃತ ವ್ಯವಸ್ಥೆ ಜಾರಿಗೊಳಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಇದುವರೆಗೆ ಎಷ್ಟು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಜಿಲ್ಲಾ ಅಧಿಕಾರಿಗಳಿಗೆ ಲಭ್ಯವಾಗುತ್ತಿಲ್ಲ.
ಆನ್‌ಲೈನ್‌ನಲ್ಲೂ ನೋಂದಣಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ಎಲ್ಲವನ್ನೂ ಬೆಂಗಳೂರಿನಿಂದಲೇ ನಿಯಂತ್ರಿಸಲಾಗುತ್ತಿದೆ. ಅಲ್ಲಿಂದ ಜಿಲ್ಲೆಗಳಿಗೆ ಯಾವುದೇ ಅಂಕಿಅಂಶದ ಮಾಹಿತಿ ರವಾನೆಯಾಗುತ್ತಿಲ್ಲ. ಹೀಗಾಗಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ನೋಂದಣಿ ಪ್ರಕ್ರಿಯೆಯ ಪ್ರಗತಿ ತಿಳಿಯದಂತಾಗಿದೆ.
ಪ್ರತಿದಿನ ಜಿಲ್ಲಾ ಮಟ್ಟದಲ್ಲೂ ಯುವನಿಧಿ ಅರ್ಜಿದಾರರ ಸಂಖ್ಯೆ ಅರಿಯವುದು ಸಾಧ್ಯವಾದರೆ ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ. ಜತೆಗೆ ಅಗತ್ಯಕ್ಕೆ ತಕ್ಕಂತೆ ಪ್ರಚಾರ, ಜಾಗೃತಿ ಮುಂತಾದವುಗಳನ್ನು ಕೈಗೊಳ್ಳಬಹುದು. ನೋಂದಣಿ ಕುಸಿತವಾದರೆ ಆಗ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಹೊಣೆ ಮಾಡುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ನೋಂದಣಿಯಾಗುವ ಒಟ್ಟು ಸಂಖ್ಯೆಯ ಮಾಹಿತಿಯಿಲ್ಲದೆ ಅಧಿಕಾರಿಗಳು ಗೊಂದಲಕ್ಕೀಡಾಗಿದ್ದಾರೆ.
ಒಟ್ಟು 37 ಕಾಲೇಜುಗಳು: ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಎಲ್ಲವೂ ಸೇರಿ 29 ಪದವಿ ಕಾಲೇಜುಗಳು ಹಾಗೂ 8 ಪಾಲಿಟೆಕ್ನಿಕ್ ಕಾಲೇಜುಗಳಿವೆ. ಈ ಶೈಕ್ಷಣಿಕ ಸಾಲಿನಲ್ಲಿ ಸುಮಾರು 15 ಸಾವಿರ ವಿದ್ಯಾರ್ಥಿಗಳು ಡಿಪ್ಲೊಮಾ ಹಾಗೂ ಪದವಿ ಪೂರೈಸಿರಬಹುದೆಂದು ಅಂದಾಜಿಸಲಾಗಿದೆ. ಈಗಾಗಲೇ ಎಲ್ಲ ಪದವಿ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳ ಪ್ರಾಚಾರ್ಯರ ಸಭೆ ನಡೆಸಿರುವ ಜಿಲ್ಲಾಡಳಿತ ಪದವೀಧರ ನಿರುದ್ಯೋಗಿಗಳು ಯುವನಿಧಿಗೆ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಮಾಹಿತಿ ನೀಡಬೇಕೆಂದು ಸೂಚಿಸಿದೆ.
ತಾತ್ಕಾಲಿಕ ಅಂಕಪಟ್ಟಿ ಇದ್ದರೆ ಸಾಕು:ಯುವನಿಧಿಗೆ ಅರ್ಜಿ ಸಲ್ಲಿಸಲು ಘಟಿಕೋತ್ಸವದಲ್ಲಿ ಪಡೆದ ಅಂಕಪಟ್ಟಿಯೇ ಬೇಕೆಂದಿಲ್ಲ. ಕಾಲೇಜುಗಳಲ್ಲಿ ತಾತ್ಕಾಲಿಕವಾಗಿ ಅಂಕಪಟ್ಟಿ ನೀಡುವ ವ್ಯವಸ್ಥೆಯೂ ಇದೆ. ಅದನ್ನು ನಿರುದ್ಯೋಗಿ ಪದವೀಧರರು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ. ಕಾಲೇಜು ಹಂತದಲ್ಲಿ ಪ್ಲೇಸ್‌ಮೆಂಟ್ ಸೆಲ್‌ಗಳು ಅಸ್ತಿತ್ವದಲ್ಲಿದ್ದು, ಅಲ್ಲಿಯೂ ಯುವನಿಧಿ ಅರ್ಜಿ ಸಲ್ಲಿಕೆ ಬಗ್ಗೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ. ಪದವೀಧರರ ವಿವರಗಳು ಆಯಾ ಕಾಲೇಜುಗಳಲ್ಲೇ ಲಭ್ಯವಿರುವುದರಿಂದ ಹೆಚ್ಚಿನ ಸಮಸ್ಯೆ ಆಗುತ್ತಿಲ್ಲ. ಸರ್ಕಾರದ ಉಳಿದ ಗ್ಯಾರಂಟಿಗಳಿಗಿಂತಲೂ ಯುವನಿಧಿ ಅರ್ಜಿ ಸಲ್ಲಿಕೆ ಜಿಲ್ಲೆಯಲ್ಲಿ ಹೆಚ್ಚು ಸಲೀಸಾಗಿ ನಡೆಯುತ್ತಿದೆ. ಕಳೆದೊಂದು ವಾರದಿಂದ ಸರ್ವರ್ ಸಮಸ್ಯೆ, ವೆಬ್‌ಸೈಟ್ ನಿರ್ವಹಣೆ ಬಗ್ಗೆಯಾಗಲಿ ಯಾವುದೇ ದೂರುಗಳು ಕೇಳಿಬಂದಿಲ್ಲ. ಒಟ್ಟು ಅರ್ಜಿಗಳ ಪೈಕಿ ಶೇ.5ರಿಂದ 10ನ್ನು ಜಿಲ್ಲಾ ಉದ್ಯೋಗಾಧಿಕಾರಿಗಳು ಪರಿಶೀಲಿಸಬೇಕು. ಅವುಗಳಲ್ಲಿ ಅನರ್ಹರು ಅರ್ಜಿ ಸಲ್ಲಿಸಿರುವುದು ಕಂಡುಬಂದರೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತರಿಗೆ ವರದಿ ನೀಡಬೇಕು.
ಇಂದು ಮಹತ್ವದ ಸಭೆ:ಶಿವಮೊಗ್ಗದಲ್ಲಿ ಜ.12ರಂದು ಯುವನಿಧಿ ಯೋಜನೆ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಹಣ ಸಂದಾಯ ಮಾಡುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶಿವಮೊಗ್ಗ ಮಾತ್ರವಲ್ಲದೆ ಸುತ್ತಮುತ್ತಲ ನಾಲ್ಕೈದು ಜಿಲ್ಲೆಗಳ ಫಲಾನುಭವಿಗಳೂ ಇದರಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜ.3ರಂದು ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಯುವನಿಧಿ ಯೋಜನೆಯ ನೋಂದಣಿ ಪ್ರಗತಿ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ರಾಜ್ಯಮಟ್ಟದ ಉನ್ನತ ಅಧಿಕಾರಿಗಳೂ ಇದರಲ್ಲಿ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net