

ಹೊಳೆನರಸೀಪುರ: ತಾಲೂಕಿನ ಅಲೆಮಾರಿ ಸಮುದಾಯಕ್ಕೆ ಮೂಲ ಸೌಕರ್ಯ ಕಲ್ಪಿಸದ ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಕಾರ್ಯವೈಖರಿಗೆ ಎಸ್‌ಸಿ, ಎಸ್‌ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ತಾಲೂಕಿನ ಅಲೆಮಾರಿ ಜನಾಂಗದವರು ನೆಲೆಸಿರುವ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಲು ಹೊರಟಾಗ ಉಂಟಾದ ಸಮಸ್ಯೆಗಳು ಹಾಗೂ ತಹಸೀಲ್ದಾರ್ ಅವರ ಕಾರ್ಯ ವೈಖರಿ ವಿರುದ್ಧ ಸಿಡಿಮಿಡಿಗೊಂಡರು.
ಅಲೆಮಾರಿ ಜನಾಂಗದ ಸ್ಥಿತಿಗತಿ ಅರಿಯಲು ಅವರು ತಾಲೂಕಿನಲ್ಲಿ ನೆಲೆಸಿರುವ ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಲು ಸಮಯ ನಿಗದಿಯಾಗಿತ್ತು. ಅಧ್ಯಕ್ಷೆ ಭೇಟಿ ಹಿನ್ನೆಲೆ ಪೂರ್ವಭಾವಿಯಾಗಿಯೇ ತಿಳಿಸಲಾಗಿತ್ತು. ಆದರೂ, ಅಲೆಮಾರಿ ತಾಂಡದ ಬಳಿ ಸ್ವಚ್ಛ ಗೊಳಿಸಿರಲಿಲ್ಲ. ಅವರು ಬರುವ ಸಮಯದಲ್ಲೇ ಜೆಸಿಬಿ ಕಾರ್ಯ ಪ್ರಾರಂಭಿಸಿತು. ಅದೆಷ್ಟೋ ವರ್ಷಗಳಿಂದ ಚರಂಡಿಯಲ್ಲಿ ತುಂಬಿದ್ದ ಕೊಳಚೆ ನೀರು ಗುಡಿಸಿಲಿನ ದ್ವಾರದಲ್ಲೇ ಹರಿಯುತ್ತಿತ್ತು. ಹಿಂದೆಲ್ಲ ಅಲೆಮಾರಿ ಸಮುದಾಯದ ತಾಂಡಗಳ ಪರಿಸ್ಥಿತಿ ಪತ್ರಿಕೆಗಳಲ್ಲಿ ಬಿಂಬಿತವಾಗಿದ್ದರಿಂದ ಕಾಂಕ್ರೀಟ್ ಹಾಕಲಾಗಿದೆ. ಆದರೆ ಸ್ವಚ್ಚತೆ ಇರಲಿಲ್ಲ. 16 ಗುಡಿಸಲು ಹಾಗೂ ಜೋಪಡಿ ಇರುವ ತಾಂಡದಲ್ಲಿ ಮನುಷ್ಯರು ವಾಸಮಾಡದ ಪರಿಸ್ಥಿತಿ ಇತ್ತು. ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಕಡೆಯಿಂದ ಅದೇ ಸಮಯಕ್ಕೆ ಅಗ್ರಹಾರ ಗೇಟ್ ಹತ್ತಿರ ಅಧ್ಯಕ್ಷೆ ಪಲ್ಲವಿ ತಾಂಡಕ್ಕೆ ಆಗಮಿಸಿದರು. ಆದರೆ, ಕಂದಾಯ ಇಲಾಖೆ ನೌಕರನೊಬ್ಬನ ಕಾರಣ ಹೇಳಿ ಪಟ್ಟಣದ ಕಡೆಗೆ ಮಾರ್ಗ ಬದಲಿಸಿದರು. ಅಷ್ಟೊತ್ತಿಗಾಗಲೇ ಅಧ್ಯಕ್ಷೆಯ ಆಗಮನಕ್ಕಾಗಿ ಕಾದಿದ್ದ ಮಾಧ್ಯಮದವರಿಗೂ ತಾಂಡದ ವಾಸ್ತವ ಪರಿಸ್ಥಿತಿ ಅನಾವರಣಗೊಂಡಿತು. ಹೀಗಾಗಿ, ಅಧ್ಯಕ್ಷರು ಅಗ್ರಹಾರ ಗೇಟ್ ಬಳಿಯ ಅಲೆಮಾರಿ ನಿವಾಸಗಳಿಗೆ ಭೇಟಿ ನೀಡುವ ಉದ್ದೇಶ ಈಡೇರಲಿಲ್ಲ. ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಧ್ಯಕ್ಷೆ ಪಲ್ಲವಿ, ಪರಿಸ್ಥಿತಿ ಅವಲೋಕನ ಮಾಡಿಕೊಂಡರು.
2021ರಲ್ಲೇ ನಿವೇಶನ ಮಂಜೂರು ಮಾಡಿದ್ದರೂ, ಇಲ್ಲಿನ ಅಲೆಮಾರಿ ಜನರಿಗೆ ನಿವೇಶನ ನೀಡಿಲ್ಲ. ಈ ಬಗ್ಗೆ ತಹಸೀಲ್ದಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇಂತಹ ಪರಿಸ್ಥಿತಿಯಲ್ಲಿ ಎಸ್ಸಿ, ಎಸ್ಟಿ ಅಲೆಮಾರಿಗಳ ನೆರವಿಗೆ ಬರದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಸರ್ಕಾರಿ ಜಾಗ ಇಲ್ಲದಿದ್ದರೆ, ಖಾಸಗಿ ನಿವೇಶನ ಖರೀದಿಸಿ ಹಂಚಿಕೆ ಮಾಡಬೇಕೆಂಬ ನಿಯಮ ಇದೆ. ಸರ್ಕಾರದ ಮಹತ್ವಕಾಂಕ್ಷಿಯ ಯೋಜನೆಯನ್ನು ಅನುಷ್ಟಾನಗೊಳಿಸಿಲ್ಲ. ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಪ್ರತಿಕ್ರಿಯೆ ನೀಡಿ, ತಾನು ಇತ್ತೀಚೆಗೆ ವರ್ಗವಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಸಬೂಬು ಹೇಳಿದರು. ಆದರೆ, ಪಟ್ಟು ಬಿಡದ ಅಧ್ಯಕ್ಷೆ ಮಾಹಿತಿ ಪಡೆದು ತಹಸೀಲ್ದಾರ್‌ಗೆ ಮತ್ತಷ್ಟೂ ಆಕ್ಷೇಪಿಸಿದರು. ತಾಪಂ ಇಒ ಮುನಿರಾಜ್ ಅಲೆಮಾರಿ ತಾಂಡಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಮೂಲ ಸೌಕರ್ಯ ಹಾಗೂ ಸ್ವಚ್ಛತೆ ಮಾಡಿಸದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು. ನಾಳೆ ನಾನು ಭೇಟಿ ನೀಡುವ ವೇಳೆಗೆ ತಾಂಡಗಳಲ್ಲಿ ಸ್ವಚ್ಛ ಕಾರ್ಯ ನಡೆದಿರಬೇಕು. ಆ ನಂತರವಷ್ಟೇ ಉಳಿದ ವಿಚಾರಗಳನ್ನು ಮಾತನಾಡುತ್ತೇನೆ ಎಂದು ಹೇಳಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ, ಬಿಇಒ ಸೋಮಲಿಂಗೇಗೌಡ, ಆರಕ್ಷಕ ವೃತ್ತನಿರೀಕ್ಷಕ ಪ್ರದೀಪ್, ನಗರಠಾಣೆ ಸಬ್‌ಇನ್‌ಸ್ಪೆಕ್ಟರ್ ಅಭಿಜಿತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ್ ಇದ್ದರು.
ಅಭಿವೃದ್ಧಿಗೆ ಅನುದಾನ ಬಳಕೆ ಮಾಡಿ ಜನಸಂಖ್ಯಾ ಆಧಾರದ ಮೇಲೆ ಸರ್ಕಾರದ ಸವಲತ್ತುಗಳು ಅನುಷ್ಟಾನವಾಗುತ್ತಿದೆ. ಸರ್ಕಾರ ಕಳೆದ ಸಾಲಿನಲ್ಲಿ ಪರಿಶಿಷ್ಟ ಜಾತಿ ಅಲೆಮಾರಿ ಜನಾಂಗಕ್ಕೆ 35 ಕೋಟಿ ರೂ. ಪರಿಶಿಷ್ಟ ಪಂಗಡಕ್ಕೆ 40 ಕೋಟಿ ರೂ. ಬಿಡುಗಡೆ ಮಾಡಿತ್ತು. ಪ್ರಸ್ತುತ ಮತ್ತಷ್ಟು ಅನುದಾನಕ್ಕೆ ಬೇಡಿಕೆ ಇದೆ. ಆದರೆ, ಅಧಿಕಾರಿಗಳು ತಳಮಟ್ಟದ ಅಭಿವೃದ್ಧಿಗಳಿಗೆ ಅನುದಾನ ಬಳಕೆ ಮಾಡಬೇಕು. ಸರ್ಕಾರ ಸಾಕಷ್ಟು ಅನುದಾನ ನೀಡಲು ಸಿದ್ಧವಿದೆ. ಹಾಸನ ಜಿಲ್ಲೆಗೆ 58 ಲಕ್ಷ ರೂ. ಅನುದಾನ ನಿಗದಿಪಡಿಸಲಾಗಿದೆ. ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಅಭಿವೃದ್ಧಿಗೊಳಿಸಲು ಅಧಿಕಾರಿಗಳು ಮನಸ್ಸು ಮಾಡಿಲ್ಲದೆ ಹಿನ್ನಡೆಯಾಗುತ್ತಿದೆ ಎಂದು ಜಿ.ಪಲ್ಲವಿ ಹೇಳಿದರು.