

ಚಿಕ್ಕಬಳ್ಳಾಪುರ: ಸುಡು ಬಿಸಿಲಿನ ತಾಪಾಮಾನ ಹೆಚ್ಚಳದ ನಡುವೆ ಬಿಸಿ ಗಾಳಿ ಸಮಸ್ಯೆಯನ್ನು ತಾಳಲಾಗದೇ ಜನರು ಅಳಲು ವ್ಯಕ್ತಪಡಿಸುವಂತಹುದು ಹೆಚ್ಚಾಗುತ್ತಿದೆ.
ಹೌದು! ಎಲ್ಲೆಡೆ ಅಬ್ಬಾಬ್ಬಾ, ಏನು ಬಿಸಿಲು ಎಂಬ ಉದ್ಗಾರವೇ ಕೇಳಿ ಬರುತ್ತಿದೆ. ಬೆಳಗ್ಗೆ 8 ರಿಂದಲೇ ಸೂರ್ಯನ ಪ್ರಖರತೆಯ ಕಿರಣಗಳು ಜೋರು ಬಿಸಿಲಿನಿಂದ ಚುಚ್ಚಲಾರಂಭಿಸುತ್ತಿದ್ದು ರಸ್ತೆಗಳಲ್ಲಿ ಓಡಾಡಲು ಆಗುತ್ತಿಲ್ಲ. ಇದಕ್ಕೆ ಮಧ್ಯಾಹ್ನದ ಸಮಯದಲ್ಲಿ ಕಡಿಮೆ ಜನರ ಸಂಚಾರದಿಂದ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿವೆ. ಇನ್ನೂ ಪಾದಚಾರಿಗಳು ಛತ್ರಿ, ಕೂಲಿಂಗ್ ಗ್ಲಾಸ್ ಮೊರೆ ಹೋಗಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿವೆ.
ಮನೆ, ಕಚೇರಿ, ಅಂಗಡಿ ಮತ್ತು ಹೋಟೆಲ್‌ಗಳಲ್ಲಿ ಸೆಖೆಯಿಂದ ಕೂರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಫ್ಯಾನು, ಹವಾ ನಿಯಂತ್ರಣ ಯಂತ್ರಗಳಿಗೆ ಕೆಲಸ ಹೆಚ್ಚಾಗಿದೆ. ಗ್ರಾಮೀಣ ಭಾಗದಲ್ಲಿ ಜನರು ಗಂಟೆಗಟ್ಟಲೇ ಗಿಡಮರಗಳ ನೆರಳಿನಲ್ಲಿ, ಅಶ್ವತ್ಥಕಟ್ಟೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಯುವಕರು ಸೆಖೆಯ ಪರಿಹಾರಕ್ಕೆ ಬಾವಿ, ತೊಟ್ಟಿಗಳಲ್ಲಿ ಈಜಾಡುತ್ತಿದ್ದಾರೆ. ಈಗಲೇ ಉಷ್ಠಾಂಶ 39 ಡಿಗ್ರಿ ಸೆಲಿಯಷ್ಸ್ ಇದೆ. ಮುಂಬರುವ ದಿನಗಳಲ್ಲಿ ಬಿಸಿ ಗಾಳಿ ಹೆಚ್ಚಳವಾಗುವ ಸಾಧ್ಯತೆ ಇದ್ದು ಜನರು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.
* ಅನಾರೋಗ್ಯ ಸಮಸ್ಯೆ
ಬಿಸಿಲಿನ ತೀವ್ರತೆಗೆ ತುರಿಕೆ, ತಲೆ ನೋವು, ತಲೆ ಸುತ್ತುವಿಕೆ, ಮೈ ಮೇಲೆ ಸಣ್ಣ ಗುಳ್ಳೆಗಳು, ನಿತ್ರಾಣ, ರಕ್ತದೊತ್ತಡ ಸೇರಿ ಹಲವು ಸಮಸ್ಯೆಗಳು ಕಂಡು ಬರುತ್ತಿವೆ. ಇತ್ತೀಚೆಗೆ ಇಂತಹ ಕಾಯಿಲೆಗೆ ಚಿಕಿತ್ಸೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಸ್ಪತ್ರೆಗಳಿಗೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ನೀರು, ತಂಪು ಪಾನೀಯಾ ಸೇವನೆ, ಬೆಳಗ್ಗೆ ಮತ್ತು ರಾತ್ರಿ ಸ್ನಾನ, ಹೆಚ್ಚಿಗೆ ಬಿಸಿಲಿನಲ್ಲಿ ಓಡಾಡದಿರುವಿಕೆ, ತೆಳುವಾದ ಬಟ್ಟೆ ಧರಿಸಲು ವೈದ್ಯರು ಸಲಹೆ ನೀಡುತ್ತಿದ್ದಾರೆ.