ಭತ್ತ ಕಟಾವಿಗೆ ಸಿಗುತ್ತಿಲ್ಲ ಯಂತ್ರ

katavu
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಭತ್ತ ಕಟಾವಿಗೆ ಯಂತ್ರ ಸಿಗದೆ ಕುಂದಾಪುರ ತಾಲೂಕಿನಾದ್ಯಂತ ಅನೇಕ ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

ರೈತರು ಬೆಳೆದ ಭತ್ತ ಗದ್ದೆಯಲ್ಲಿಯೇ ಒಣಗಿ ನೆಲೆಕ್ಕುರುಳುತ್ತಿವೆ. ಅಕಾಲಿಕ ಮಳೆಯಿಂದ ಬೆಳೆದ ಭತ್ತದ ಬೆಳೆ ನೀರಿನಲ್ಲಿಯೇ ಕೊಳೆತು ಹೋಗುತ್ತದೆ ಎಂಬ ಭಯ ಕೃಷಿಕರನ್ನು ಕಾಡುತ್ತಿದೆ. ಅಕಾಲಿಕ ಮಳೆ ಭತ್ತ ಕಟಾವು ವಿಳಂಬಕ್ಕೆ ಕಾರಣವಾದರೆ, ಇನ್ನೊಂದು ಕಡೆ ಮಲೆನಾಡು ಪ್ರದೇಶಗಳಲ್ಲಿ ಭತ್ತ ಕಟಾವು ಆರಂಭಗೊಂಡಿದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ಭತ್ತ ಕಟಾವು ಯಂತ್ರಗಳು ಜಿಲ್ಲೆಯಿಂದ ಹೊರ ಹೋಗಿರುವುದು ಭತ್ತ ಕಟಾವಿಗೆ ದೊಡ್ಡ ಮಟ್ಟದ ಹೊಡೆತ ನೀಡಿದೆ.

ತಾಲೂಕಿನ ಅನೇಕ ಭಾಗಗಳಲ್ಲಿ ಭತ್ತದ ಬೆಳೆಗಳು ಕಟಾವು ಆಗದೆ ಗದ್ದೆಯಲ್ಲೇ ಉಳಿದಿದೆ. ಹೀಗೆ ಮುಂದುವರಿದರೆ ಭತ್ತ ಗದ್ದೆ ಪಾಲಾಗುವ ಭೀತಿ ರೈತರನ್ನು ಕಾಡುತ್ತಿದೆ. ಅಕಾಲಿಕ ಮಳೆ ಬಂದರೆ ಭತ್ತದ ಗತಿಯೇನು ಎಂಬ ಪ್ರಶ್ನೆ ಸಹಜವಾಗಿ ರೈತರಲ್ಲಿ ಮೂಡಿದೆ. ಕೂಲಿಯಾಳುಗಳ ಸಮಸ್ಯೆ ನಡುವೆಯೂ ಸಾಲ ಮಾಡಿ ಕಷ್ಟಪಟ್ಟು ಕೃಷಿ ಮಾಡಿದ್ದು, ಕಟಾವಿಗೆ ಯಂತ್ರಗಳೇ ಸಿಗದ ಪರಿಸ್ಥಿತಿ ಬಂದರೆ ಮುಂದೇನು ಎಂಬ ಚಿಂತೆ ರೈತಾಪಿ ವರ್ಗದವರನ್ನು ಕಾಡಲಾರಂಭಿಸಿದೆ.

ಮಲೆನಾಡು ಪ್ರದೇಶಗಳಲ್ಲಿ ಎಕರೆಗಟ್ಟಲೆ ಕೃಷಿ ಭೂಮಿಗಳು ಕಟಾವಿಗೆ ಸಿಗುವುದರಿಂದ ಕರಾವಳಿ ಭಾಗದ ತುಂಡು ಭೂಮಿಗಳಲ್ಲಿ ಭತ್ತ ಕಟಾವಿಗೆ ವಹಿಸಿಕೊಂಡರೆ ಈ ಸಮಯದಲ್ಲಿ ಬಹುದೊಡ್ಡ ನಷ್ಟ ಉಂಟಾಗುತ್ತದೆ ಎಂದು ಹೊರ ರಾಜ್ಯದ ಭತ್ತ ಕಟಾವು ಯಂತ್ರದ ಮಾಲೀಕರು ಹೇಳುತ್ತಿದ್ದಾರೆ ಎಂಬ ಆರೋಪ ಕರಾವಳಿ ಭಾಗದ ರೈತರಿಂದ ಕೇಳಿ ಬರುತ್ತಿದೆ.

ಕರಾವಳಿ ಭಾಗದಲ್ಲಿ ಈ ಬಾರಿ ಭತ್ತದ ಬೆಳೆ ಕಟಾವು 15 ದಿನ ತಡವಾಗಿದೆ. ಹೀಗಾಗಿ ಕಟಾವು ಯಂತ್ರದ ಕೊರತೆಯಾಗಿದೆ. ಜಿಲ್ಲಾಧಿಕಾರಿಯವರು 2200 ರೂ. ನಿಗದಿ ಮಾಡಿದ್ದು, ಖಾಸಗಿಯವರು ಸುಮಾರು 2300ರಿಂದ 2500 ರೂ.ಗಳವರೆಗೆ ತೆಗೆದುಕೊಳ್ಳುತ್ತಿದ್ದಾರೆ. ಇಷ್ಟಾದರೂ ಯಂತ್ರಗಳು ಸಿಗುತ್ತಿಲ್ಲ. ಬೆಳೆಗಳು ಗದ್ದೆಯಲ್ಲಿ ಉಳಿದುಕೊಂಡಿದೆ. -ವಿಜಯ ಪೂಜಾರಿ, ಕೃಷಿಕರು ಗಂಗೊಳ್ಳಿ ಯಂತ್ರಧಾರೆಯಲ್ಲಿ ಯಂತ್ರಗಳಿರುವುದೇ ಕಡಿಮೆ. ಹೊರ ಜಿಲ್ಲೆಗಳಿಂದ ಬಂದ ಕಟಾವು ಯಂತ್ರಗಳು ತೆರಳಿರಬಹುದು. ಕಟಾವು ಯಂತ್ರದ ಬಾಡಿಗೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿಗಳು ಬಾಡಿಗೆ ನಿಗದಿಪಡಿಸಿದ್ದರು. ಹೊರಗಿನ ಯಂತ್ರಗಳಿಗೆ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಹಾರ್ವೆಸ್ಟರ್ ಹಬ್ ಮೂಲಕ ರೈತರೇ ಯಂತ್ರಗಳನ್ನು ಖರೀದಿಸುವುದಿದ್ದರೆ ಸರಕಾರ ವಿಶೇಷವಾಗಿ ಸಬ್ಸಿಡಿ ನೀಡುತ್ತದೆ. -ರೂಪಾ ಮಾಡ ಕೃಷಿ ಇಲಾಖೆ ಸಹಾಯಕ ನಿರ್ದೇಶಕ https://www.vijayavani.net/towns-progress-is-due-to-social-work https://www.vijayavani.net/annual-pratibha-puraskar

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net