ಪಣಂಬೂರು ಅಪರಿಚಿತ ವ್ಯಕ್ತಿಯ ಕೊಲೆ

crime
Published on

ಮಂಗಳೂರು: ನಗರದ ಹೊರ ವಲಯದ ಎಪಿಎಂಸಿ ಹರಾಜು ಕಟ್ಟೆಯ ಒಳಗಡೆ ಅಪರಿಚಿತ ವ್ಯಕ್ತಿಯನ್ನು ಹೊಡೆದು ಕೊಲೆ ಮಾಡಿರುವುದು ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.


ಇಲ್ಲಿ ರಮೇಶ್ ಆಚಾರ್ಯ ಎಂಬವರು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಗುರುವಾರ ರಾತ್ರಿ 11.30ರ ವೇಳೆಗೆ ಎಪಿಎಂಸಿ ಕಟ್ಟಡದ ವಾಣಿಜ್ಯ ಮಳಿಗೆ ಹಿಂಭಾಗದ ಹಳೇ ಹರಾಜು ಕಟ್ಟಡದ ಹತ್ತಿರದಿಂದ ಕಾಂಪ್ಲೆಕ್ಸ್‌ಗೆ ಸುತ್ತು ಹೊಡೆದು ಹಿಂತಿರುಗಿ ಮುಖ್ಯ ಗೇಟ್‌ಗೆ ತೆರಳಿದ್ದರು.


ಆ ಸಮಯದಲ್ಲಿ ಹರಾಜುಕಟ್ಟೆಯ ಒಳಗಡೆ ಕೆಲವು ಗುಜುರಿ ಹೆಕ್ಕುವವರು, ಭಿಕ್ಷುಕರು, ಮದ್ಯಪಾನ ಮಾಡಿದ ಕೆಲವು ಲಾರಿ ಚಾಲಕರು ಮಲಗಿಕೊಂಡಿದ್ದರು. ಬೆಳಗ್ಗೆ ಇಲ್ಲಿದ್ದ ಹಿರಿಯ ವ್ಯಕ್ತಿ ಬಂದು ಅಪರಿಚಿತನೋರ್ವನ ಅಂಗಾತ ಬಿದ್ದಿದ್ದು, ತಲೆ, ಮುಖದ ಮೇಲೆ ಗಾಯವಾಗಿ ರಕ್ತ ಸೋರಿಕೆಯಾಗುತ್ತಿದೆ ಎಂದು ತಿಳಿಸಿದ್ದಾನೆ. ಸ್ಥಳಕ್ಕೆ ಬಂದು ನೋಡಿದಾಗ ಆತ ಮೃತಪಟ್ಟಿದ್ದ. ಆತನ ಪರಿಚಯ ಯಾರಿಗೂ ಇಲ್ಲ. ಆತ ಇಲ್ಲಿಯೇ ಮಲಗುತ್ತಿದ್ದ. ಸುಮಾರು 45 ವರ್ಷ ವಯಸ್ಸಾಗಿರಬಹುದು. ಆತನನ್ನು ಯಾರೋ ಯಾವುದೋ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂದು ಅವರು ಪಣಂಬೂರು ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net