

ವಿರಾಜಪೇಟೆ: ಉಮ್ರಾ ಯಾತ್ರೆ ಎನ್ನುವುದು ಮುಸ್ಲಿಮರಿಗೆ ಪರಮ ಪವಿತ್ರವಾಗಿದ್ದು, ಯಾತ್ರೆಗೆ ತೆರಳುವ ಮಂದಿಗೆ ಸಹಾಯ ಹಸ್ತ ನೀಡಿ ಕನಸು ಸಾಕಾರಗೊಳಿಸುವ ಕಾರ್ಯ ಉತ್ತಮವಾದದು ಎಂದು ಲಕ್ಷದೀಪ್ ಮಹದೀ ತಂಙಳ್ ಅಭಿಪ್ರಾಯ ವ್ಯಕ್ತಪಡಿಸಿದರು.
ಉಮ್ರಾ ಯಾತ್ರೆಗೆ ತೆರಳುತ್ತಿರುವವರಿಗೆ ಇಲ್ಲಿನ ಸುಣ್ಣದ ಬೀದಿ ಈದ್ಗಾ ಮೈದಾನದಲ್ಲಿ ಶನಿವಾರ ಡೊನೇಟರ್ಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವನದಲ್ಲಿ ಒಂದು ಬಾರಿಯಾದರೂ ಪ್ರವಾದಿ ಮುಹಮ್ಮದ್ ಅವರ ನೆಲೆಯನ್ನು ಕಾಣುವ ಹಂಬಲವಿರುತ್ತದೆ. ಜೀವನದ ಸಾರ್ಥಕತೆಯನ್ನು ಪಡೆಯುತ್ತದೆ ಎನ್ನುವ ವಿಶ್ವಾಸ. ಇದನ್ನು ಸಹಕಾರಗೊಳಿಸಲು ಆರ್ಥಿಕ ಮುಗ್ಗಟ್ಟು ಇರುವುದರಿಂದ ಕಡುಬಡವರಿಗೆ ಯಾತ್ರೆಯು ಸುಗಮವಾಗುವುದಿಲ್ಲ. ಈ ನಿಟ್ಟಿನಲ್ಲಿ ಅವರ ಕನಸು ಸಾಕಾರಗೊಳಿಸುವ ಪ್ರಯತ್ನ ಶ್ಲಾಘನೀಯ ಎಂದರು.
ಶಾಫಿ ಜುಮ್ಮಾ ಮಸೀದಿ ಖಾತಿಬ್‌ರಾದ ಹ್ಯಾರಿಸ್ ಬಖಾವಿ ಮಾತನಾಡಿ, ಮುಸ್ಲಿಮರ ಪವಿತ್ರ ಸ್ಥಳಕ್ಕೆ ಯಾತ್ರೆಗೆ ಹೋಗಬೇಕು ಮತ್ತು ಸಂದರ್ಶನ ಮಾಡಬೇಕೆಂಬುದು ಸಮುದಾಯವರ ಕನಸಾಗಿದ್ದರೂ ಆರ್ಥಿಕ ಪರಿಸ್ಥಿತಿಯಿಂದ ಯಾತ್ರೆಗೆ ತೆರಳಲು ಅಸಾಧ್ಯವಾಗುತ್ತದೆ. ನಾವು ಆರಾಧಿಸುವ ಪ್ರವಾದಿಯ ಕೃಪಾಕಟಾಕ್ಷ ಒಲಿದವರು ಮಾತ್ರ ಯಾತ್ರೆ ಮಾಡಲು ಸಾಧ್ಯ. ಬಾಂಧವರಿಂದ ಹಣ ಸಂಗ್ರಹಿಸಿ ಯಾತ್ರೆಗೆ ಆಯ್ಕೆಗೊಂಡ ವ್ಯಕ್ತಿಗಳನ್ನು ಉಚಿತವಾಗಿ ಕಳುಹಿಸುತ್ತಿರುವುದು ಪ್ರವಾದಿಗಳ ಚಿತ್ತವಾಗಿದೆ ಎಂದು ಹೇಳಿದರು.
ಡೊನೇರ್ಸ್ ಚಾರಿಟೆಬಲ್ ಟ್ರಸ್ಟ್ ವಿರಾಜಪೇಟೆ ಗೌರವಾಧ್ಯಕ್ಷ ಮೊಹಮ್ಮದ್ ರಾಫಿ ಮಾತನಾಡಿ, ಪ್ರಥಮ ಬಾರಿಗೆ ಉಮ್ರಾ ಯಾತ್ರೆಗೆ ವ್ಯಕ್ತಿಗಳನ್ನು ಆಯ್ಕೆ ಮಾಡಿ ದಾನಿಗಳಿಂದ ಸಂಗ್ರಹಿಸಿದ ಆರ್ಥಿಕ ಧನಸಹಾಯ ನೀಡಲಾಗುತ್ತಿದೆ. ವಿರಾಜಪೇಟೆ ನಗರದಿಂದ ನಾಲ್ವರು ಮಹಿಳೆಯರು, 7 ಪುರುಷರು ಆರ್ಜಿ ಸಲ್ಲಿಸಿದ್ದರು. ಲಾಟರಿ ಮೂಲಕ ಇಬ್ಬರು ಮಹಿಳೆಯರು, ಒಬ್ಬ ಪುರುಷ ಯಾತ್ರಿಯನ್ನು ಆಯ್ಕೆಗೊಳಿಸಲಾಗಿದೆ ಎಂದು ತಿಳಿಸಿದರು.
ನಸ್ರುತುಲ್ ಉಲಮಾ ಮದ್ರಸಾ ಶಾಲೆಯ ಶಿಕ್ಷಕ ಅಬ್ದುಲ್ ರೆಹಮಾನ್, ಮದೀನ ಮಸೀದಿಯ ಮುಜಮಿಲ್ ಉಸ್ತಾದ್, ಪುರಸಭೆಯ ಸದಸ್ಯ ಎಚ್.ಎಸ್.ಮತೀನ್, ವಿರಾಜಪೇಟೆ ಡೊನೇಟರ್ಸ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅಲೀರ ಫವಿಲ್ ಉಸ್ಮಾನ್, ಪದಾಧಿಕಾರಿಗಳು ಇದ್ದರು.