ಖಾಸಗಿಗೆ ಸೆಡ್ಡೊಡೆದ ಸರ್ಕಾರಿ ಸ್ಕೂಲ್; ಜಿಲ್ಲೆಯಲ್ಲೇ ಮಾದರಿ ಉಮ್ಮಡಹಳ್ಳಿ ಶಾಲೆ

Ummadahalli Govt High School Mandya
Published on

ಕೆ.ಎನ್.ರಾಘವೇಂದ್ರ ಮಂಡ್ಯ
ಸುತ್ತಮುತ್ತ ಕೆಲವೇ ಕಿ.ಮೀ ದೂರದಲ್ಲಿ ಖಾಸಗಿ ಶಾಲೆಗಳ ಅಬ್ಬರ ಜೋರಾಗಿದೆ. ಇಂತಹ ಪರಿಸ್ಥಿತಿಯ ನಡುವೆಯೂ ತಾಲೂಕಿನ ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆ ಮಾದರಿಯಾಗುವುದರ ಜತೆಗೆ ಗಟ್ಟಿಯಾಗಿ ನೆಲೆಯೂರಿದೆ. ಅದೇ ರೀತಿ ಗುಣಮಟ್ಟದ ಕಲಿಕೆ, ವಿಭಿನ್ನ ಪಠ್ಯೇತರ ಚಟುವಟಿಕೆ ಮೂಲಕ ಮಕ್ಕಳನ್ನು ತಯಾರು ಮಾಡಲಾಗುತ್ತಿದೆ.
ಮಂಡ್ಯ ದಕ್ಷಿಣ ವಲಯ ವ್ಯಾಪ್ತಿಗೆ ಉಮ್ಮಡಹಳ್ಳಿ ಶಾಲೆಯೂ ಸೇರುತ್ತದೆ. 1994ರಲ್ಲಿ ಪ್ರಾರಂಭವಾದ ಈ ಶಾಲೆ ಸಾಕಷ್ಟು ಪೈಪೋಟಿಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಿದೆ. ಪ್ರತಿ ವರ್ಷವೂ ಹಾಜರಾತಿ ಹೆಚ್ಚಿಸಿಕೊಳ್ಳುವ ಮೂಲಕ ಈಗ ಸದೃಢವಾಗಿದೆ. ಅಂತೆಯೇ ಇದರ ಹಿಂದೆ ಸಾಕಷ್ಟು ಶ್ರಮವೂ ಇದೆ.
ಮೂರಂಕಿ ದಾಟಿದ ದಾಖಲಾತಿ: ಪ್ರಾರಂಭವಾದ ವರ್ಷದಲ್ಲಿ ಮಕ್ಕಳ ದಾಖಲಾತಿ ನಿರೀಕ್ಷೆಯಂತೆ ಆಗುತ್ತಿರಲಿಲ್ಲ. 2022-21ನೇ ಸಾಲಿಗೆ ಬರುವ ಹೊತ್ತಿಗೆ 58ಕ್ಕೆ ಬಂದಿತು. 2021-22ರಲ್ಲಿ 70, 2022-23ರಲ್ಲಿ 80, 2023-24ರಲ್ಲಿ 105 ಹಾಗೂ 2024-25ರಲ್ಲಿ 106 ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ಈ ಪೈಕಿ 53 ಹೆಣ್ಣು ಹಾಗೂ 53 ಗಂಡು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.
ಮೊದಲಿಗೆ ಸಾಮಾನ್ಯ ಶಾಲೆಯಂತೆಯೇ ಗುರುತಿಸಿಕೊಂಡಿದ್ದ ಉಮ್ಮಡಹಳ್ಳಿ ಹೈಸ್ಕೂಲ್ ವರ್ಷ ಕಳೆದಂತೆ ಹೊಸತನದತ್ತ ಹೆಜ್ಜೆ ಹಾಕಲಾರಂಭಿಸಿತು. ಅದರಲ್ಲಿಯೂ ಬಿಆರ್‌ಸಿಯಾಗಿದ್ದ ನಾಗರಾಜು ಶಾಲೆಗೆ ಮುಖ್ಯಶಿಕ್ಷಕರಾದ ಬಳಿಕ ಹಲವು ಮಹತ್ತರ ಬದಲಾವಣೆ ಕಂಡಿತು. ದಾಖಲಾತಿ ಹೆಚ್ಚಳದಿಂದ ಹಿಡಿದು ಮಕ್ಕಳಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಹಶಿಕ್ಷಕರೊಂದಿಗೆ ಸೇರಿ ಶ್ರಮ ವಹಿಸಿರುವುದು ಶಾಲೆಗೆ ಭೇಟಿ ಕೊಟ್ಟರೆ ಕಾಣಿಸುತ್ತದೆ.
ದಾಖಲಾತಿ ವಿಚಾರಕ್ಕೆ ಬರುವುದಾದರೆ ಉಮ್ಮಡಹಳ್ಳಿ ಶಾಲೆಗೆ ಅಕ್ಕಪಕ್ಕದ ಗ್ರಾಮದಿಂದ ಮಕ್ಕಳನ್ನು ಕರೆದುಕೊಂಡು ಬರುವುದು ಸವಾಲಿನ ಕೆಲಸವಾಗಿತ್ತು. ಈ ಹಿನ್ನೆಲೆಯಲ್ಲಿ ಬಸ್ ಸೌಲಭ್ಯದ ವ್ಯವಸ್ಥೆ ಅನಿವಾರ್ಯವಾಯಿತು. ಇದಕ್ಕೆ ಬೆಂಬಲವಾಗಿ ನಿಂತಿದ್ದು ಮಂಡ್ಯ ತಾಲೂಕು ಪಂಚಾಯಿತಿ ಇಒ ವೀಣಾ, ಶಿಕ್ಷಕಿ ವಸುಧಾಮಣಿ, ದಾನಿ ಕೆ.ರವಿ. ಇವರು ನೀಡಿದ ಆರ್ಥಿಕ ಸಹಾಯದಿಂದ ಮಿನಿ ಬಸ್ ಖರೀದಿಸಿ ಅಕ್ಕಪಕ್ಕದ ಗ್ರಾಮದಿಂದ ಸುಮಾರು 30ಕ್ಕೂ ಹೆಚ್ಚು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಲಾಗುತ್ತಿದೆ. ಅದರಲ್ಲಿಯೂ ತಾಪಂ ಇಇ ವೀಣಾ ಅವರು ತಮ್ಮ ಮೊದಲ ವೇತನ 50 ಸಾವಿರ ರೂಗಳನ್ನು ಶಾಲೆಗೆ ದೇಣಿಗೆ ನೀಡಿದ್ದಾರೆ. ವಸುಧಾಮಣಿ 28 ಹಾಗೂ ಕೆ.ರವಿ 25 ಸಾವಿರ ರೂ ನೆರವು ಕೊಟ್ಟಿದ್ದಾರೆ. ಇದಲ್ಲದೆ ಸಾಕಷ್ಟು ಜನರು ತಮ್ಮಿಂದಾಗುವ ಆರ್ಥಿಕ ಸಹಾಯವನ್ನು ನೀಡಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಲಾಗಿದೆ.
ಒಟ್ಟಾರೆ ಖಾಸಗಿ ಶಾಲೆಗಳ ಆರ್ಭಟದ ನಡುವೆಯೂ ಉಮ್ಮಡಹಳ್ಳಿ ಗ್ರಾಮದ ಸರ್ಕಾರಿ ಹೈಸ್ಕೂಲ್ ವಿಶೇಷ ಸ್ಥಾನದಲ್ಲಿದೆ. ಇದಕ್ಕೆ ಇನ್ನೊಂದಿಷ್ಟು ಪ್ರೋತ್ಸಾಹ, ಬೆಂಬಲ ಸಿಕ್ಕರೆ ರಾಜ್ಯದಲ್ಲಿಯೇ ಮಾದರಿಯಾಗುವುದರಲ್ಲಿ ಅನುಮಾನವಿಲ್ಲ.

ಮಕ್ಕಳ ಕಲಿಕೆ ಸ್ಮಾರ್ಟ್ ಸಾಥ್
ಇತ್ತೀಚಿನ ದಿನದಲ್ಲಿ ಸರ್ಕಾರಿ ಶಾಲೆಯಲ್ಲಿ ಮೂಲ ಸೌಲಭ್ಯವಿಲ್ಲ ಎನ್ನುವುದು ಬಹುದೊಡ್ಡ ದೂರು. ಆದರೆ ಇದಕ್ಕೆ ಉಮ್ಮಡಹಳ್ಳಿ ಶಾಲೆ ಅಪವಾದ ಎನ್ನುವಂತಿದೆ. ಇಲ್ಲಿ ಮಕ್ಕಳಿಗೆ ಮಾಮೂಲಿ ಕರಿಹಲಗೆಯ ಪಾಠದ ಜತೆಗೆ ಸ್ಮಾರ್ಟ್ ಕ್ಲಾಸ್ ಕೂಡ ಇದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅನುದಾನವನ್ನು ಬಳಸಿಕೊಂಡು ಲಕ್ಷಾಂತರ ರೂ ಮೌಲ್ಯದ ಸ್ಮಾರ್ಟ್ ಕ್ಲಾಸ್ ಕೊಠಡಿ ನಿರ್ಮಿಸಲಾಗಿದೆ. ಸುಸಜ್ಜಿತವಾದ ಕೊಠಡಿ, ಗುಣಮಟ್ಟದ ಬೆಂಚ್, ಯುಪಿಎಸ್ ಸೇರಿದಂತೆ ಅಗತ್ಯ ಸೌಲಭ್ಯವಿದೆ. ಪ್ರತಿದಿನ ಮೂರು ತರಗತಿಗೂ ಪಾಠ ಮಾಡಲಾಗುತ್ತದೆ. ಇದರ ವಿಶೇಷವೆಂದರೆ ಎಲ್ಲ ವಿಷಯದ ಪೂರ್ಣ ಪಾಠವೂ ಇಲ್ಲಿ ಲಭ್ಯವಿದ್ದು, ಮಕ್ಕಳು ಬೇಕೆಂದಾಗ ನೋಡಿಕೊಳ್ಳಬಹುದು.
ಇದಲ್ಲದೆ ಅಂತರ್ಜಾಲದ ಸೌಲಭ್ಯವಿರುವುದರಿಂದ ದೇಶ ಅಥವಾ ರಾಜ್ಯದ ಹಲವು ಮಹತ್ತರ ಘಟನೆ ಅಂದರೆ ವಿಧಾನಸಭೆ ಕಲಾಪ, ಶಿಕ್ಷಣಕ್ಕೆ ಬೇಕಾದ ವಿಡಿಯೋಗಳನ್ನು ತೋರಿಸಲಾಗುತ್ತದೆ. ಇನ್ನು ವಿಜ್ಞಾನದ ಪ್ರಯೋಗಾಲಯ, ಗ್ರಂಥಾಲಯ, ಅಡುಗೆ ಮನೆ, ಊಟದ ಮನೆ, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಗೃಹದ ವ್ಯವಸ್ಥೆ ಇದೆ. ಅಂತೆಯೇ ಶಿಕ್ಷಕ, ಶಿಕ್ಷಕಿಯರಿಗೂ ಪ್ರತ್ಯೇಕ ಕೊಠಡಿ, ಕ್ರೀಡಾ ಕೊಠಡಿಗಳು ಇವೆ. ಇವುಗಳಿಗೆ ಸರ್ಕಾರಿ ಕಚೇರಿ ಮಾದರಿಯಲ್ಲಿ ನಾಮಫಲಕ ಹಾಕಿರುವುದು ಗಮನಸೆಳೆಯುತ್ತದೆ.
ಶಾಲೆಯಲ್ಲಿ ಆರು ಜನ ಶಿಕ್ಷಕರಿದ್ದು, ಮಕ್ಕಳ ಕಲಿಕೆಗೆ ತೊಂದರೆ ಇಲ್ಲ. 2019-20ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.71, 2020-21ರಿಂದ 2022-23ರವರೆಗೆ ಶೇ.100 ಹಾಗೂ 2023-24ರಲ್ಲಿ ಶೇ.81.84ರಷ್ಟು ಫಲಿತಾಂಶ ಬಂದಿದೆ. 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ನಿಟ್ಟಿನಲ್ಲಿ ಇಲಾಖೆಯಿಂದ ನಡೆಸುವ ಎನ್‌ಎನ್‌ಎಂಎಸ್ ಪರೀಕ್ಷೆಗೂ ಮಕ್ಕಳನ್ನು ಸಿದ್ಧಪಡಿಸಲಾಗುತ್ತಿದೆ. 2022-23ರಲ್ಲಿ ಇಬ್ಬರು ಹಾಗೂ 2023-24ರಲ್ಲಿ ನಾಲ್ವರು ಆಯ್ಕೆಯಾಗಿದ್ದಾರೆ.

ಮೆಚ್ಚುಗೆ ಪಡೆದಿರುವ ಮಕ್ಕಳು
ಸುಮಾರು 4 ಎಕರೆ ಪ್ರದೇಶವನ್ನು ಶಾಲೆ ಒಳಗೊಂಡಿದೆ. ಆದ್ದರಿಂದ ಆಟೋಟಗಳಿಗೂ ಅಗತ್ಯವಿರುವ ಸುಸಜ್ಜಿತವಾದ ಕ್ರೀಡಾಂಕಣಗಳಿವೆ. ಮಕ್ಕಳ ಮೇಲೆ ನಿಗಾ ವಹಿಸಲು 16 ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಇನ್ನು ಶಾಲೆಯ ಮಕ್ಕಳ ಗಮನಾರ್ಹ ಚಟುವಟಿಕೆ ಎಂದರೆ ಅಧಿಕಾರಿಗಳಿಗೆ ಪತ್ರ ಬರೆಯುವುದು.
ಡಿಜಿಟಲ್ ಗ್ರಂಥಾಲಯ, ಶಿಕ್ಷಕರ ದಿನಾಚರಣೆ ಸೇರಿದಂತೆ ಸರ್ಕಾರದ ಹಲವು ಸೌಲಭ್ಯದಿಂದಾಗುತ್ತಿರುವ ಅನುಕೂಲದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಸಿ, ಜಿಪಂ ಸಿಇಒ ಸೇರಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ಅಧಿಕಾರಿಗಳು ಕೂಡ ಪತ್ರ ಬರೆದು ಮಕ್ಕಳ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಚಂದ್ರಯಾನ-3 ಮಾಡೆಲ್ ಬಗ್ಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಯ ಮುಖ್ಯಕಾರ್ಯದರ್ಶಿಯಾಗಿದ್ದ ಉಮಾ ಮಹದೇವನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಇನ್ನು ಮಕ್ಕಳಿಗೆ ಪಠ್ಯೇತರ ಚಟುವಟಿಕೆಯಾಗಿ ತರಕಾರಿ ಬೆಳೆಸುವುದು, ಉದ್ಯಾನ ನಿರ್ವಹಣೆ ಮಾಡುವುದನ್ನು ಹೇಳಿಕೊಡಲಾಗುತ್ತಿದೆ. ಪರಿಣಾಮ ಶಾಲೆ ಆವರಣ ಹಸಿರುಮಯವಾಗಿದೆ. ಇದಲ್ಲದೆ ಪ್ರಮುಖ ವಿಷಯವೆಂದರೆ ಪ್ರತಿ ವರ್ಷ ಶಾಲೆಯಲ್ಲಿ ನಡೆಯುವ ಬೇಸಿಗೆ ಶಿಬಿರ. ಉಚಿತವಾಗಿ ಹಾಗೂ ವಿಭಿನ್ನ ಚಟುವಟಿಕೆಯಿಂದ ನಡೆಸುವ ಶಿಬಿರಕ್ಕೆ ಖಾಸಗಿ ಶಾಲೆಯಿಂದಲೂ ವಿದ್ಯಾರ್ಥಿಗಳು ಬರುತ್ತಾರೆ.

ಸರ್ಕಾರದ ಅನುದಾನ ಹಾಗೂ ದಾನಿಗಳ ನೆರವಿನೊಂದಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸೌಲಭ್ಯವನ್ನು ಒದಗಿಸಿಕೊಡಲಾಗಿದೆ. ಅಕ್ಕಪಕ್ಕದ ಗ್ರಾಮದಿಂದ ಮಕ್ಕಳು ಬರುತ್ತಾರೆ. ಪಾಲಕರಿಗೆ ಶಾಲೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವುದರಿಂದ ದಾಖಲಾತಿಯಲ್ಲಿ ಏರಿಕೆ ಕಾಣುತ್ತಿದ್ದೇವೆ.ನಾಗರಾಜುಮುಖ್ಯಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net