

ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಹೋಬಳಿಯ ಹೊಂಗಳ್ಳಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿ ಅಕ್ರಮವಾಗಿ ಬಡಾವಣೆ ನಿರ್ಮಿಸಿ ನಿವೇಶನ ಹಂಚುತ್ತಿದ್ದರೂ ಅಧಿಕಾರಿಗಳು ಮತ್ತು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಮಂಗಳವಾರ ನಗರದಲ್ಲಿ ಸ್ಥಳೀಯರು ಅಧಿಕಾರಿಗಳ ವಿರುದ್ದ ಛತ್ರಿ ಚಳವಳಿ ನಡೆಸಿದರು.
ಸರ್‌ಎಂವಿ ಪ್ರತಿಮೆ ಧರಣಿ ನಡೆಸಿದ ಪ್ರತಿಭಟನಾಕಾರರು, ಸರ್ವೇ ನಂ.291ರ ಪೈಕಿ ಪಿ 43ರಲ್ಲಿನ 3 ಎಕರೆ 28 ಗುಂಟೆ ಕಂದಾಯ ಭೂಮಿಯ ಜತೆಗೆ ಸರ್ಕಾರಿ ಭೂಮಿಯನ್ನು ಮೈಸೂರಿನ ವ್ಯಕ್ತಿ ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಾಣ ಮಾಡಿ ನಿವೇಶನ ಹಂಚಿಕೆ ಮಾಡುತ್ತಿದ್ದಾರೆ. ಜತೆಗೆ ಪಕ್ಕದಲ್ಲಿರುವ ನಮ್ಮ ಜಾಗವನ್ನೂ ತೆರವುಗೊಳಿಸಲು ಮುಂದಾಗಿದ್ದಾರೆ. ಈ ಬಗ್ಗೆ ಹಲವು ಅಧಿಕಾರಿಗಳಿಗೆ 2020ರಿಂದಲೂದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಶ್ರೀ ಕ್ಷೇತ್ರ ಶನಿಮಠದ ಉಪಯೋಗ ಕ್ಕಾಗಿ ನಮೂನೆ 57ರ ಫಾರಂ ಅರ್ಜಿಯ ಮೂಲಕ ಅಕ್ರಮ ಸಕ್ರಮಕ್ಕಾಗಿ ಅರ್ಜಿ ಹಾಕಿಕೊಳ್ಳಲಾಗಿದೆ. ಈ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರಭಾವಿಯೊಬ್ಬರಿಗೆ ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಹುಲಿಕೆರೆ ಗ್ರಾಪಂನಲ್ಲಿ 11 ಬಿ ಖಾತೆ ಮಾಡಿರುತ್ತಾರೆ. ಮಾತ್ರವಲ್ಲದೆ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದರಿಂದ ವೃದ್ಧಾಶ್ರಮ ಮತ್ತು ಗೋಶಾಲೆ, ಧಾರ್ಮಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಅಕ್ರಮ ಜಮೀನು ಒತ್ತುವರಿಯನ್ನು ತೆರವುಗೊಳಿಸಿ ಸರ್ಕಾರಿ ಜಮೀನನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಪತಿಭಟನೆಯಲ್ಲಿ ಶ್ರೀ ಕ್ಷೇತ್ರ ಶನಿಮಠದ ಧರ್ಮದರ್ಶಿ ಡಾ.ಕೆ.ಎನ್.ರಾಜು, ಮಠಾಧೀಶ ರುದ್ರೇಶ್ ಪ್ರಸಾದ್, ರವೀಂದ್ರಕುಮಾರ್, ಚಂದ್ರಕಲಾ, ಲಕ್ಷ್ಮೀ, ಶಿವಮ್ಮ, ಎನ್.ಸಾವಿತ್ರಿ, ರಕ್ಷಿತ್, ಸುರೇಶ್ ಇತರರಿದ್ದರು.