ಕಲ್ಲು ಹೂವಿನ ನೆರಳು ಕಥಾ ಸಂಕಲನ ಪರಿಚಯ, ಓದಿಗೆ ಬದುಕು ಕಟ್ಟುವ ಶಕ್ತಿ ಇದೆ ಎಂದ ಉಮಾ ಪಾಟೀಲ

KALLU HUVINA NERALU
ವಿಜಯಪುರದ ಸಾಯಿ ರೆಸಿಡೆನ್ಸಿ ಬಡಾವಣೆಯ ಮನು ಪತ್ತಾರ ಕಲಕೇರಿ ಅವರ ಮನೆಯಲ್ಲಿ ಹಮ್ಮಿಕೊಂಡ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮವನ್ನು ಸಮಾಜ ಸೇವಕಿ ಉಮಾ ಪಾಟೀಲ ಉದ್ಘಾಟಿಸಿದರು. ಶಿವಶರಣಪ್ಪ ಶಿರೂರ, ಬಿ.ಆರ್. ಬನಸೋಡೆ, ಅನೀಲ ಗುನ್ನಾಪುರ ಮತ್ತಿತರರಿದ್ದಾರೆ.
Published on

ವಿಜಯಪುರ: ಪುಸ್ತಕಗಳ ಓದು ಮನುಷ್ಯನೊಳಗೆ ಹೊಸ ಹೊಸ ಆಲೋಚನೆಗಳನ್ನು ಹುಟ್ಟು ಹಾಕುತ್ತದೆ ಎಂದು ಸಮಾಜ ಸೇವಕಿ ಉಮಾ ಪಾಟೀಲ ಹೇಳಿದರು.

ನಗರದ ಸಾಯಿ ರೆಸಿಡೆನ್ಸಿ ಬಡಾವಣೆಯ ಮನು ಪತ್ತಾರ ಕಲಕೇರಿ ಅವರ ಮನೆಯಲ್ಲಿ ಓದುಗರ ಚಾವಡಿಯ ‘ರಾಜೇಂದ್ರಕುಮಾರ ಬಿರಾದಾರ’ ಸಾಂಸ್ಕೃತಿಕ ವೇದಿಕೆಯಡಿ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮದಂಗವಾಗಿ ಗುರುವಾರ ಸಂಜೆ ಹಮ್ಮಿಕೊಂಡ ಯುವ ಕಥೆಗಾರ ಅನೀಲ ಗುನ್ನಾಪುರ ಅವರ ‘ಕಲ್ಲು ಹೂವಿನ ನೆರಳು’ ಕಥಾ ಸಂಕಲನ ಪರಿಚಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಅವಸರದ ಈ ದಿನಮಾನಗಳಲ್ಲಿ ಓದುವ ಪ್ರಕ್ರಿಯೆ ನಿಧಾನವೆಂದು ಭಾವಿಸಬಾರದು. ನಿಧಾನವಾದ ಓದು ಬದುಕನ್ನು ಸುಭದ್ರವಾಗಿ ಕಟ್ಟಿಕೊಡುವ ಶಕ್ತಿ ಹೊಂದಿದೆ. ಓದುಗರ ಚಾವಡಿಯ ಮನೆ ಮನೆಯ ಈ ಪುಸ್ತಕ ಪರಿಚಯ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ಕಥಾ ಸಂಕಲನ ಪರಿಚಯಿಸಿದ ನಾಗಠಣ ಪಬ್ಲಿಕ್ ಶಾಲೆ ಶಿಕ್ಷಕ ಶಿವಶರಣಪ್ಪ ಶಿರೂರ ಮಾತನಾಡಿ, ಆಧುನಿಕತೆಯ ಮೋಹದ ಸೆಳೆತಕ್ಕೆ ಸಿಕ್ಕು ಸಾಹಿತ್ಯದ ಓದುಗರ ಸಂಖ್ಯೆ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಅನೀಲ ಗುನ್ನಾಪುರ ಅವರ ಕಥೆಗಳು ಹೊಸ ಭರವಸೆಯನ್ನು ಹುಟ್ಟು ಹಾಕುತ್ತವೆ. ಗ್ರಾಮ ಜಗತ್ತಿನ ಒಳ ಹೂರಣವನ್ನು ಪ್ರಾದೇಶಿಕ ಭಾಷೆಯಲ್ಲಿ ಅತ್ಯಂತ ಯಶಸ್ವಿಯಾಗಿ ಕಟ್ಟಿಕೊಡುವ ಅನೀಲ ಅವರು ಆಧುನಿಕ ಕಾಲದ ಅವಘಡಗಳನ್ನು ಹಾಗೂ ಗ್ರಾಮೀಣ ಪ್ರದೇಶದ ಸಾಮಾಜಿಕ ಚಿತ್ರಣವನ್ನು ನಯವಾಗಿ ಕಟ್ಟಿಕೊಡುವುದನ್ನು ನೋಡಿದರೆ ದುರ್ಗಸಿಂಹನ ಕಥೆಗಳು ನೆನಪಾಗುತ್ತಿವೆ ಎಂದರು.

ಕಥೆಗಾರ ಅನೀಲ ಗುನ್ನಾಪುರ ಮಾತನಾಡಿ, ನಾನು ನನ್ನ ತಾಯಿಯವರ ಪ್ರೋತ್ಸಾಹ ಹಾಗೂ ಪ್ರೇರಣೆಯಿಂದಾಗಿ ಕಥೆಗಳನ್ನು ಬರೆಯಲು ಆರಂಭಿಸಿದೆ. ನನ್ನ ಜೀವ ಹಿಂಡಿದ ಘಟನೆಗಳನ್ನು ನನ್ನ ನೆಲದ ಭಾಷೆಯಲ್ಲಿ ಅಭಿವ್ಯಕ್ತಿಸುವ ಪ್ರಯತ್ನ ಮಾಡಿರುವೆ, ಲೇಖಕರ ಪುಸ್ತಕಗಳನ್ನು ಈ ರೀತಿ ಸಾಹಿತ್ಯದ ಆಸಕ್ತರ ಮಧ್ಯದಲ್ಲಿ ಚರ್ಚೆ ಆಗುತ್ತಿರುವುದು ನನಗೆ ಸಂತಸ ತಂದಿದೆ ಹಾಗೂ ಹೊಸದಾಗಿ ಕಥೆಗಳನ್ನು ಬರೆಯಲು ಪ್ರೇರಣೆ ದೊರಕಿದಂತಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿ.ಆರ್. ಬನಸೋಡೆ ಮಾತನಾಡಿ, ಓದುಗರ ಚಾವಡಿಯ ಮೂಲಕ ಸಾಹಿತ್ಯದ ಆಸಕ್ತರ ಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಪರಿಚಾರಿಕೆ ಮಾಡುತ್ತಿರುವುದು ಅನುಕರಣೀಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ದಾಕ್ಷಾಯಿಣಿ ಬಿರಾದಾರ, ಚೆನ್ನಮ್ಮ ಪತ್ತಾರ, ಕಾಮಾಕ್ಷಿ ಪತ್ತಾರ, ಸ್ವಪ್ನಾ ಅಳ್ಳಿಮೊರೆ, ಶರಣು ಸಬರದ, ರಾಜಕುಮಾರ ಜೊಲ್ಲೆ, ಸುಭಾಸ ಯಾದವಾಡ, ಬಸವರಾಜ ಕುಂಬಾರ, ಗಂಗಾಧರ ಪತ್ತಾರ, ರಾಜಶೇಖರ ಉಮರಾಣಿ, ಮೋಹನ ಕಟ್ಟಿಮನಿ, ಭಾರತ ಕುಮಾರ್ ಎಚ್.ಟಿ, ಅನೀಲಕುಮಾರ ಮಾಶಾಳಕರ, ಶಶಿಧರ ಶಿರಹಟ್ಟಿ, ಸುಭಾಸ ಕನ್ನೂರ, ಎಸ್.ಡಿ. ಕೃಷ್ಣಮೂರ್ತಿ, ಪಂಡಿತರಾವ ಪಾಟೀಲ, ಸಿದ್ದಾರೂಢ ಕಟ್ಟಿಮನಿ, ಡಾ.ಎಸ್.ಟಿ. ಮೇರವಾಡೆ, ಆರ್.ಎಸ್. ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಗದ್ದನಕೇರಿ, ಕೆ.ಕೆ. ಅಸ್ಕಿ, ಶ್ರೀಧರ ಪತ್ತಾರ, ಸುಜಾತಾ ಚಲವಾದಿ, ದಾಕ್ಷಾಯಿಣಿ ಹುಡೇದ, ಹೇಮಲತಾ ವಸ್ತ್ರದ, ಪ್ರಭಾವತಿ ದೇಸಾಯಿ ಮತ್ತಿತರರಿದ್ದರು. ವಿಮರ್ಶಾ ಪತ್ತಾರ ಪ್ರಾರ್ಥಿಸಿದರು. ಡಾ.ಎಂ.ಎಸ್. ಮಾಗಣಗೇರಿ ಸ್ವಾಗತಿಸಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net