ಧಾರ್ಮಿಕತೆಯ ಜತೆಗೆ ವೈಜ್ಞಾನಿಕ ಹಿನ್ನೆಲೆ

CHN JATRE
Published on

ಚನ್ನಗಿರಿ : ತಾವರೆಕೆರೆ ಶಿಲಾಮಠದಲ್ಲಿ ನಡೆಯುವ ಉಮಾ ಮಹೇಶ್ವರ ಸ್ವಾಮಿ ಜಾತ್ರೆ ಧಾರ್ಮಿಕತೆಯ ಜತೆಗೆ ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿದೆ ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಗೌರವಾಧ್ಯಕ್ಷ ಹಾಗೂ ಬಾಳೆಹೊನ್ನೂರು ಮಠದ ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಚನ್ನಗಿರಿ ತಾಲೂಕು ತಾವರೆಕೆರೆ ಶಿಲಾಮಠದಲ್ಲಿ ಉಮಾ ಮಹೇಶ್ವರ ಜಾತ್ರಾ ಮಹೋತ್ಸವದ ಸಾನ್ನಿಧ್ಯವನ್ನು ವಹಿಸಿ ಮಂಗಳವಾರ ಮಾತನಾಡಿದರು.

ಜಾತ್ರೆಗೆ ಬರುವ ಪುರುಷರಿಗೆ ಸಾತ್ವಿಕ ಆಹಾರವಾಗಿ ಬಾಳೆಯ ಹಣ್ಣು, ಹೆಸರುಕಾಳು, ಪುಡಿಬೆಲ್ಲ ಹಾಗೂ ಕುಡಿಯಲು ಶುದ್ಧವಾದ ಹಾಲು ಬೆರೆಸಿ ನೀಡಲಾಗುತ್ತದೆ.

ನಂತರ ಉಳಿದ ಪ್ರಸಾದವನ್ನು ಶ್ರೀಮಠದ ಪದ್ಧತಿಯಂತೆ ನಿಗದಿಪಡಿಸಿದ ಗುಂಡಿಯಲ್ಲಿ ಇಟ್ಟು ಮುಚ್ಚಲಾಗುತ್ತದೆ. ಮತ್ತೆ ಮುಂದಿನ ವರ್ಷ ಜಾತ್ರೆಯ ವೇಳೆ ಎಲ್ಲ ಭಕ್ತರ ಸಮ್ಮುಖದಲ್ಲಿ ಗುಂಡಿಯನ್ನು ತೆರೆದು ನೋಡಿದರೆ, ಆ ಎಲ್ಲ ಆಹಾರ ಪದಾರ್ಥಗಳು ಕೆಡದೇ ಉಳಿದಿರುತ್ತದೆ.

ಮತ್ತು ಊಟಕ್ಕೆ ಬಳಸಿದಂತಹ ಬಾಳೆಯ ಎಲೆ ಸಹ ಹಸಿರಾಗಿರುತ್ತದೆ. ಇದು ಮಠದಲ್ಲಿ ಉಮಾ ಮಹೇಶ್ವರ ದೇವರು ನೆಲೆಸಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.

ತುಮಕೂರು ಜಿಲ್ಲೆ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೃದ್ಧಾಶ್ರಮ ಪ್ರಾರಂಭದ ವರ್ಷದಲ್ಲಿ ಖಾಲಿ ಇರುತ್ತದೆ. ಒಂದು ವರ್ಷ ಕಳೆದು ನೋಡಿದರೆ, ತುಂಬಿದೆ ಎನ್ನುವ ನಾಮಫಲಕ ಕಾಣುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಪಾಲಕರು ಸಾಕಷ್ಟು ಹಣ ಖರ್ಚು ಮಾಡಿ ಮಕ್ಕಳಿಗೆ ಶಿಕ್ಷಣ ಕೊಡುತ್ತಿದ್ದಾರೆ. ಅದರ ಜತೆಗೆ ಸಂಸ್ಕಾರವನ್ನು ನೀಡುತ್ತಿಲ್ಲ. ಇದರಿಂದ ಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ಸಂಬಂಧಗಳ ಬೆಲೆಯನ್ನು ತಿಳಿಸಬೇಕು ಎಂದು ಕಿವಿಮಾತು ಹೇಳಿದರು.

ಶ್ರೀ ಸಿದ್ಧಲಿಂಗ ಶಿವಾಚಾರ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಠಾಧೀಶರು ದೇವರ ಸ್ವರೂಪಿಗಳು. ಅವರನ್ನು ಕಂಡು ಒಳ್ಳೆಯ ಕೆಲಸಕ್ಕೆ ಹೋದರೆ ನಿಮ್ಮ ಕೆಲಸ ಅಗುತ್ತದೆ. ಎಲ್ಲಿಯವರೆಗೆ ಮಠಾಧೀಶರು, ತಾಯಂದಿರು, ದೇವರಿಗೆ ಗೌರವ ಇರುತ್ತದೋ ಅಲ್ಲಿಯವರೆಗೆ ಭಾರತವನ್ನು ಯಾರೂ ಏನೂ ಮಾಡಲು ಅಗುವುದಿಲ್ಲ ಎಂದರು.

ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಾತ್ರೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು, ಶ್ರೀ ಕುಡ್ಲೂರು ವೀರಭದ್ರಸ್ವಾಮಿ, ಆದಿಶಕ್ತಿ ಚೌಡೇಶ್ವರಿ ದೇವಿಗೆ ಮಹಾಭಿಷೇಕ, ಶಿವಸಹಸ್ರನಾಮ ಸಹಿತ ಮಹಾಮಂಗಳಾರತಿ ನಡೆಸಲಾಯಿತು. ಶಂಕರಿಪುರದ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಹೆಗ್ಗುಂದಲೆ ವೀರಭದ್ರಸ್ವಾಮಿ ಅವರನ್ನು ಬರಮಾಡಿಕೊಳ್ಳಲಾಯಿತು.

ತಾವರೆಕೆರೆ ಶಿಲಾಮಠದ ಡಾ. ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಧಾರವಾಡದ ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ಹುಣಸೆಘಟ್ಟ ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೋಲಾರದ ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ತೇಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಮೊಗ್ಗದ ಶಿವಶಕ್ತಿ ಸಮಾಜದ ಅಧ್ಯಕ್ಷೆ ಅನ್ನಪೂರ್ಣೇಶ್ವರಿ, ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net