ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೌಲಭ್ಯ ತಾಲೂಕುಗಳಿಗೆ ವಿಸ್ತರಣೆ

CTD 21 PC PNDT-04
Published on

ಚಿತ್ರದುರ್ಗ: ಅಲ್ಟ್ರಾ ಸೌಂಡ್ ಸ್ಕಾೃನಿಂಗ್ ಸೌಲಭ್ಯವನ್ನು ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ತಾಲೂಕು ಆರೋಗ್ಯ ಕೇಂದ್ರ ಹಾಗೂ ಧರ್ಮಪುರ, ನಾಯಕನಹಟ್ಟಿ, ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರಗಳಿಗೆ ವಿಸ್ತರಿಸಲಾಗುವುದೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್ ಹೇಳಿದರು.

ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗಪತ್ತೆ ತಂತ್ರವಿಧಾನಗಳ ನಿಷೇಧ ಕಾಯ್ದೆ ಅನುಷ್ಠಾನ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ ಈಗಾಗಲೇ ಮೊಳಕಾಲ್ಮೂರು, ಚಳ್ಳಕೆರೆ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಈ ಯಂತ್ರಗಳಿವೆ ಎಂದರು.

ಸರ್ಕಾರದ ಏಳು ಹಾಗೂ ಖಾಸಗಿಯ 55 ಸೇರಿ ಒಟ್ಟು ಜಿಲ್ಲೆಯ 62 ಕೇಂದ್ರಗಳಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ ಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಮಾತ್ರ ರೆಡಿಯಾಲಜಿಸ್ಟ್ ಇದ್ದಾರೆ. ತಾಲೂಕು ಆಸ್ಪತ್ರೆಗಳಲ್ಲಿ ಸ್ತ್ರೀ ರೋಗ ತಜ್ಞರಿಗೇ ಸ್ಕ್ಯಾನಿಂಗ್ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ತಾಲೂಕು,ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರಗಳ ಅಳವಡಿಕೆಯಿಂದ ಗ್ರಾಮೀಣ ಭಾಗದ ಗರ್ಭಿಣಿಯರು ನಗರಗಳಿಗೆ ಬರುವುದು ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯ ಎಲ್ಲ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೇಂದ್ರಗಳು ನಿಯಮಾನುಸಾರ ಕಾರ್ಯನಿರ್ವ ಹಿಸಬೇಕು. ಅಧಿಕ ಶುಲ್ಕ ವಸೂಲಿ ವಿರುದ್ಧ ಕ್ರಮ ಜರಗಿಸಲಾಗುವುದು. ಪ್ರಸವ ಪೂರ್ವ ಮತ್ತು ಗರ್ಭ ಪೂರ್ವ ಭ್ರೂಣಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ 2021-22ರಲ್ಲಿ ಲಿಂಗಾನುಪಾತ ಪ್ರಮಾಣ 1000 ಪುರುಷರಿಗೆ 945 ಹೆಣ್ಣುಮಕ್ಕಳಿದ್ದರು. ಅದೀಗ 965ಕ್ಕೆ ಏರಿಕೆಯಾಗಿದೆ. ಪಿಸಿ, ಪಿಎನ್‌ಡಿಟಿ ಕಾಯ್ದೆ ಕುರಿತಂತೆ ವೈದ್ಯ- ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದರು.

ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷೆ ಡಾ.ಸೌಮ್ಯಾ, ಐಎಂಎ ಜಿಲ್ಲಾಧ್ಯಕ್ಷ ಡಾ.ಪಿ.ಟಿ.ವಿಜಯ ಕುಮಾರ್, ಡಾ.ದೇವರಾಜ್, ಸಲಹಾ ಸಮಿತಿ ಸದಸ್ಯರಾದ ಡಾ.ರೇಣುಪ್ರಸಾದ್, ಡಾ. ಸತ್ಯನಾರಾಯಣ, ವಕೀಲ ಎಂ.ಉಮೇಶ್, ಕೆ.ಪಿ.ಮೀನಾಕ್ಷಿ, ಗಾಯತ್ರಿ ಶಿವರಾಂ, ಮೈರಾಡ ಸಂಸ್ಥೆ ಸುನೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net