

ಮಂಗಳೂರು : ವನ್ಯಜೀವಿ ಸಂರಕ್ಷಣೆ ಎಂದರೆ ಕೇವಲ ನಿರ್ದಿಷ್ಟ ಪ್ರಾಣಿಯನ್ನು ರಕ್ಷಿಸುವುದಲ್ಲ. ಪರಭಕ್ಷಕ ಪ್ರಾಣಿಗಳು, ಬೇಟೆಯ ಪ್ರಾಣಿ ಪ್ರಭೇದಗಳು ಹಾಗೂ ಇತರ ಸಸ್ಯ ಮತ್ತು ಪ್ರಾಣಿಗಳನ್ನು ಒಳಗೊಂಡಿರುವ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವುದನ್ನು ಇದು ಒಳಗೊಂಡಿದೆ ಎಂದು ಹುಲಿ ತಜ್ಞ ಡಾ. ಕೆ. ಉಲ್ಲಾಸ್ ಕಾರಂತ್ ಹೇಳಿದರು.
ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಘಟಕದ ವತಿಯಿಂದ ನಗರದ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಅವರು ‘ಬದಲಾಗುತ್ತಿರುವ ಭಾರತದಲ್ಲಿ ವನ್ಯಜೀವಿಗಳ ಸಂರಕ್ಷಣೆ ’ ವಿಷಯದ ಕುರಿತು ಉಪನ್ಯಾಸ ನೀಡಿದರು.
ಇಂದು ಸುಮಾರು 10 ಪ್ರತಿಶತದಷ್ಟು ಭೂಮಿ ಮಾತ್ರ ವನ್ಯಜೀವಿ ಆವಾಸಸ್ಥಾನವಾಗಿ ಕಾರ್ಯನಿರ್ವಹಿಸುತ್ತಿದೆೆ. ದೇಶದಲ್ಲಿ 3,000 ಕ್ಕೂ ಹೆಚ್ಚು ವನ್ಯಹುಲಿಗಳನ್ನು ಹೊಂದಿದ್ದೇವೆ ಎಂದು ಹೆಮ್ಮೆಪಡುತ್ತಿದ್ದರೂ, ಈ ಸಂಖ್ಯೆ ತುಂಬಾ ಕಡಿಮೆಯಾಗಿದೆೆ. ಕೇಂದ್ರೀಕೃತ ವೈಜ್ಞಾನಿಕ ವಿಧಾನಗಳನ್ನು ಸಂರಕ್ಷಿತ ಪ್ರದೇಶಗಳ ಆಚೆಗೆ ವಿಸ್ತರಿಸಿದರೆ, ದೇಶವು 15,000 ಆರೋಗ್ಯಕರ ಹುಲಿ ಸಂಖ್ಯೆಯನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು.
ಹಿಂದಿನ ದಿನಗಳಲ್ಲಿ ಮೋಜಿಗಾಗಿ, ಆಹಾರಕ್ಕಾಗಿ ಬೇಟೆಯಾಡುವುದು ವನ್ಯಜೀವಿಗಳ ಅಳಿವಿಗೆ ಕಾರಣವಾಗಿತ್ತು.
ಇಂದು ಗ್ರಾಮ ಮಟ್ಟದಲ್ಲಿಯೂ ವನ್ಯಜೀವಿ ಸಂರಕ್ಷಣೆಯ ಬಗ್ಗೆ ವ್ಯಾಪಕ ತಿಳುವಳಿಕೆ ಇದೆ. ತೊಂದರೆಗಳಿದ್ದರೆ ಜನರು ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದಾರೆ ಎಂದು ಅವರು ಹೇಳಿದರು.
ನಿರೇನ್ ಜೈನ್ ಅತಿಥಿ ಉಪನ್ಯಾಸಕರನ್ನು ಪರಿಚಯಿಸಿದರು. ಇಂಟಾಕ್ ಮಂಗಳೂರು ಘಟಕದ ಸಂಚಾಲಕ ಸುಭಾಷ್ ಚಂದ್ರ ಬಸು ಕಾರ್ಯಕ್ರಮ ನಿರೂಪಿಸಿದರು.