ನಾಲ್ವರು ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಉಳ್ಳಾಲದಲ್ಲಿ ಕೋಮು ದ್ವೇಷದಿಂದ ನಡೆದಿದ್ದ ಹತ್ಯೆ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಮಂಗಳೂರು: ಉಳ್ಳಾಲ ಕೋಟೆಪುರದಲ್ಲಿ 2016ರ ಎ.12ರ ಬೆಳಗ್ಗಿನ ಜಾವ ಕೋಮುದ್ವೇಷದಿಂದ ನಡೆದಿದ್ದ ರಾಜೇಶ್ ಕೋಟ್ಯಾನ್ ಆಲಿಯಾಸ್ ರಾಜ (44) ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.


ಉಳ್ಳಾಲ ಕೋಡಿ ಡಿ ರೋಡ್‌ನ ಮೊಹಮ್ಮದ್ ಆಸೀಫ್ ಆಲಿಯಾಸ್ ಆಚಿ (23), ಮುಕ್ಕಚೇರಿಯ ಮೊಹಮ್ಮದ್ ಸುಹೈಲ್ ಆಲಿಯಾಸ್ ಸುಹೈಲ್(20), ಕೋಡಿ ಮಸೀದಿ ಬಳಿಯ ಅಬ್ದುಲ್ ಮುತಾಲಿಪ್ ಆಲಿಯಾಸ್ ಮುತ್ತು (20) ಮತ್ತು ಉಳ್ಳಾಲ ಉಳಿಯ ರಸ್ತೆಯ ಅಬ್ದುಲ್ ಅಸ್ವೀರ್ ಆಲಿಯಾಸ್ ಅಚ್ಚು(19) ಜೀವಾವಧಿ ಶಿಕ್ಷೆಗೊಳಗಾದವರು. ಮೊಹಮ್ಮದ್ ಆಸಿಫ್ ಚಾಲಕ, ಮೊಹಮ್ಮದ್ ಸುಹೈಲ್ ಲೋಡರ್, ಅಬ್ದುಲ್ ಮುತಾಲಿಪ್ ಕೂಲಿ ಕೆಲಸ, ಅಬ್ದುಲ್ ಅಸ್ವೀರ್ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರು. ಈ ಪ್ರಕರಣದಲ್ಲಿ ಇತರ ಇಬ್ಬರು ಆರೋಪಿಗಳಾದ ಬಾಶಿಲ್ ಆಲಿ ಆಲಿಯಾಸ್ ಬಾಚಿ(17) ಮತ್ತು ಅಬ್ದುಲ್ ರನೀಝ್ ಆಲಿಯಾಸ್ ರನ್ನಿ (17) ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕರಾಗಿದ್ದು ಇವರ ವಿಚಾರಣೆ ಬಾಲ ನ್ಯಾಯ ಮಂಡಳಿಯಲ್ಲಿ ಬಾಕಿ ಇದೆ.


ಪ್ರಕರಣದ ಹಿನ್ನೆಲೆ
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮೊಗವೀರಪಟ್ಣದ ಹಿಂದೂ ಮತ್ತು ಮುಸ್ಲಿಮರ ನಡುವೆ ಹಲವು ಸಮಯದಿಂದ ಕೋಮುಸಂಘರ್ಷ ನಡೆದಿತ್ತು. ಆರೋಪಿಗಳು ಒಂಟಿಯಾಗಿ ಬರುವ ಮೊಗವೀರಪಟ್ಣದ ಹಿಂದೂವೊಬ್ಬನನ್ನು ಕೊಲೆ ಮಾಡಬೇಕೆಂದು ನಿರ್ಧರಿಸಿ ಸಂಚು ರೂಪಿಸಿದ್ದರು. ಅದರಂತೆ 2016 12ರ ಮುಂಜಾವ ಕೋಟೆಪುರ ರಸ್ತೆಯಲ್ಲಿ ಮೀನುಗಾರಿಕೆ ಕೆಲಸಕ್ಕೆಂದು ನಡೆದುಕೊಂಡು ಹೋಗುತ್ತಿದ್ದ ರಾಜೇಶ್ ಕೋಟ್ಯಾನ್ ಅವರ ಮೇಲೆ ಮರದ ದೊಣ್ಣೆಗಳಿಂದ ಹೊಡೆದು ಅನಂತರ ಅವರ ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದರು. ಈ ಬಗ್ಗೆ ಉಳ್ಳಾಲ ಠಾಣೆಯ ಪೊಲೀಸ್ ನಿರೀಕ್ಷಕ ಅಶೋಕ ಅವರು ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿ ಡಾ.ಮಹಾಬಲೇಶ್ ಶೆಟ್ಟಿ ಮತ್ತು ತಂಡದವರು ಘಟನಾ ಸ್ಥಳ ತಪಾಸಣೆ ನಡೆಸಿ ತಪಾಸಣಾ ವರದಿ ಮತ್ತು ಶವಪರೀಕ್ಷಾ ವರದಿ ಸಲ್ಲಿಸಿದ್ದರು.


ವಿಚಾರಣೆ ನಡೆಸಿದ ನ್ಯಾಯಾಧೀಶರು ಎ.20ರಂದು ನಾಲ್ವರು ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆ ಕಲಂ 302ರಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ 25,000 ರೂ. ದಂಡ, ದಂಡ ಪಾವತಿಸಲು ವಿಫಲರಾದಲ್ಲಿ ಹೆಚ್ಚುವರಿ 1 ವರ್ಷ ಸಾದಾ ಸಜೆ, ಕಲಂ 201ರಡಿಯಲ್ಲಿ 1 ವರ್ಷ ಸಾದಾ ಸಜೆ ಮತ್ತು ತಲಾ 5,000 ರೂ.ದಂಡ, ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ 3 ತಿಂಗಳ ಸಾದಾ ಸಜೆ, ಕಲಂ 143ರಡಿ 6 ತಿಂಗಳ ಸಾದಾ ಸಜೆ, ಕಲಂ 148ರಡಿಯಲ್ಲಿ 1 ವರ್ಷ ಸಾದಾ ಸಜೆ, ಕಲಂ 153(ಎ) ಅಡಿಯಲ್ಲಿ 1 ವರ್ಷ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ ಹಾಗೂ ದಂಡದ ಮೊತ್ತ 1.20 ಲ.ರೂ.ಗಳನ್ನು ಮೃತ ರಾಜೇಶ್ ಕೋಟ್ಯಾನ್ ಅವರ ಪತ್ನಿಗೆ ನೀಡುವಂತೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ರಾಜೇಶ್ ಕೋಟ್ಯಾನ್ ಅವರ ಪತ್ನಿಗೆ ಪರಿಹಾರ ನೀಡಬೇಕೆಂದು ನಿರ್ದೇಶನ ನೀಡಿದ್ದಾರೆ.


ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಅವರು ಸಾಕ್ಷಿಗಳನ್ನು ವಿಚಾರಣೆ ಮಾಡಿ ವಾದ ಮಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net