

ಮಂಗಳೂರು: ದುರಸ್ತಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳು ವಾಹನಗಳ ಓಡಾಟ ನಿರ್ಬಂಧಿಸಿದ್ದ ಉಳ್ಳಾಲ ನೇತ್ರಾವತಿಯ ಒಂದು ಸೇತುವೆ ಶನಿವಾರ ಮುಂಜಾನೆ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ತೆರೆದುಕೊಂಡಿದೆ.
ಇದರಿಂದ ಕೇರಳ ಕಡೆಗೆ ಸಾಗುವ ಹಾಗೂ ಕೇರಳದಿಂದ ಮಂಗಳೂರು ಕಡೆಗೆ ಸಂಚರಿಸುವ ಉಭಯ ಸೇತುವೆಗಳು ಸಂಚಾರಕ್ಕೆ ಮುಕ್ತಗೊಂಡಿದ್ದು, ಕಳೆದ ಒಂದು ತಿಂಗಳು ವಾಹನ ದಟ್ಟಣೆಯಿಂದ ಈ ಭಾಗದಲ್ಲಿ ಸಾರ್ವಜನಿಕರು ಅನುಭವಿಸಿದ ಸಮಸ್ಯೆಯಿಂದ ಬಿಡುಗಡೆ ಪಡೆದಂತಾಗಿದೆ.
ತೊಕ್ಕೊಟ್ಟಿನಿಂದ ಮಂಗಳೂರಿಗೆ ಬರುವ ಈ ಹಳೇ ಸೇತುವೆಯನ್ನು ದುರಸ್ತಿಪಡಿಸುವ ಸಲುವಾಗಿ ಏಪ್ರಿಲ್ 1ರಿಂದ ಒಂದು ತಿಂಗಳ ಕಾಲ ಮುಚ್ಚಲ್ಪಟ್ಟಿತ್ತು. ಈ ಅವಧಿಯಲ್ಲಿ ವಾಹನಗಳ ಓಡಾಟಕ್ಕೆ ಹೊಸ ಸೇತುವೆಯ ಒಂದು ಬದಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಪರಿಣಾಮ ದಿನನಿತ್ಯ ವಾಹನ ದಟ್ಟಣೆಯಿಂದ ಸಾರ್ವಜನಿಕರು, ವಾನ ಚಾಲಕರು ಸಂಕಷ್ಟಕ್ಕೊಳಗಾಗುತ್ತಿದ್ದರು.