

ಉಳ್ಳಾಲ: ಕುಂಪಲ ಸಮೀಪ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಯುವಕ ಮನೆಯಲ್ಲಿ ನೇಣುಬಿಗಿದು ಸೋಮವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ನಿಗೂಢವಾಗಿದೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲ ಹನುಮಾನ್ ನಗರ ನಿವಾಸಿ ಯೋಗೀಶ್(44) ಆತ್ಮಹತ್ಯೆಗೈದವರು. ಇವರಿಗೆ ತಾಯಿ, ಪತ್ನಿ, ಇಬ್ಬರು ಎಳೆಯ ಪ್ರಾಯದ ಪುತ್ರರಿದ್ದಾರೆ.
ವೃತ್ತಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಅವರು ಸೋಮವಾರ ತಮ್ಮ ಮನೆಗೆ ತಾಗಿಕೊಂಡಿರುವ ಶೌಚಗೃಹದ ಮರದ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ದುರಂತ ಸಾವಿನಿಂದ ಬೇಸತ್ತ ಪತ್ನಿಯೂ ಅವರದ್ದೇ ಹಾದಿ ಹಿಡಿಯಲು ಮುಂದಾಗಿದ್ದರೂ ನೆರೆದವರು ತಡೆಯುವಲ್ಲಿ ಸಲರಾಗಿದ್ದಾರೆ.
ಯೋಗೀಶ್ ಸ್ವಸಹಾಯ ಗುಂಪೊಂದರ ಸದಸ್ಯರಾಗಿದ್ದು, ಸಂಘದಿಂದ ಸಂಗ್ರಹಿಸಲಾಗಿದ್ದ ನಲವತ್ತು ಸಾವಿರ ರೂ.ಗಳನ್ನು ಬ್ಯಾಂಕಿಗೆ ಕಟ್ಟಲು ಅವರ ಬಳಿ ನೀಡಲಾಗಿತ್ತು. ಆದರೆ ಅವರು ಬ್ಯಾಂಕಿಗೆ ಕಟ್ಟದೆ ಖರ್ಚು ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ಸಂಘದ ಇತರ ಸದಸ್ಯರು ಭಾನುವಾರ ಬೆಳಗ್ಗೆ ಮತ್ತು ಸಂಜೆ ಅವರ ಮನೆಗೆ ತೆರಳಿ ಹಣ ಕಟ್ಟುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಆರೋಪದಿಂದ ಅವಮಾನಗೊಂಡು ಕೃತ್ಯ ಎಸಗಿರುವುದಾಗಿ ಎನ್ನಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪ ಅಲ್ಲಗಳೆದ ಸ್ಥಳೀಯರು
ಯೋಗೀಶ್ ಮೃದು ಸ್ವಭಾವದರಾಗಿದ್ದು ಎಲ್ಲರಿಗೂ ಬೇಕಾಗಿದ್ದರು. ಕೇವಲ ನಲವತ್ತು ಸಾವಿರ ರೂ. ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಸ್ಥಳೀಯರು ಅಲ್ಲಗಳೆದಿದ್ದಾರೆ. ಜೀವನ ಕೊನೆಗಾಣಿಸಲು ಇದೊಂದು ವಿಷಯವೇ ಅಲ್ಲ, ಬೇರೆ ಯಾವುದಾದರೂ ಕಾರಣ ಅಥವಾ ಜೀವನದಲ್ಲಿ ಜಿಗುಪ್ಸೆಗೊಂಡು ಕೃತ್ಯ ಎಸಗಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.