ಹಿಂದು ಹೆಣ್ಮಗಳ ಮದುವೆಗೆ ಮುಸ್ಲಿಮರ ಆಸರೆ

Ullala Marriage help
Published on

ಅನ್ಸಾರ್ ಇನೋಳಿ ಉಳ್ಳಾಲ

ಬಡತನದಲ್ಲಿದ್ದ ಹಿಂದು ಕುಟುಂಬದ ಹೆಣ್ಮಗಳ ಮದುವೆಗೆ ಮುಸ್ಲಿಂ ಕುಟುಂಬ ಆಸರೆಯಾಗಿದ್ದು ಹಿಂದು ಸಂಪ್ರದಾಯದಂತೆಯೇ ಭಾನುವಾರ ವಿವಾಹ ನೆರವೇರಿದೆ. ಸೌಹಾರ್ದಕ್ಕೆ ಬುನಾದಿಯಾಗಬಲ್ಲ ಈ ವಿದ್ಯಮಾನ ನಡೆದದ್ದು ದ.ಕ.ಜಿಲ್ಲೆಯ ಉಳ್ಳಾಲದ ಅಲೇಕಳದಲ್ಲಿ.

ಮಂಚಿಲ ಎಂಬಲ್ಲಿನ ನಿವಾಸಿ ದಿ.ಕೇಶವ ಕರ್ಕೆರ ಅವರ ಪತ್ನಿ ಗೀತಾ ಒಂದು ಹೊತ್ತಿನ ಊಟಕ್ಕೂ ಕಷ್ಟದ ಸ್ಥಿತಿಯಲ್ಲಿದ್ದಾರೆ. ಅವರ ಎರಡನೇ ಮಗಳು ಕವನಾಳ ವಿವಾಹ ದಿನ ಹತ್ತಿರ ಬರುತ್ತಿದ್ದರೂ, ದುಡ್ಡ ಹೊಂದಿಸಲು ಕಷ್ಟಪಡುತ್ತಿದ್ದರು. ಆಗ ನೆರವಿಗೆ ಬಂದವರು ಕ್ಕೆ ಅಲೇಕಳದ ಎಂ.ಕೆ.ಕುಟುಂಬ ಸದಸ್ಯರು.

ಮಂಗಳೂರಿನ ಶಕ್ತಿನಗರದಲ್ಲಿ ವಾಸವಿದ್ದ ಗೀತಾ ಅವರ ಪತಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇವರಿಗೆ ಇಬ್ಬರು ಹೆಣ್ಮಕ್ಕಳಿದ್ದು, ಸಾಲ ಮಾಡಿ ಹಿರಿಯ ಮಗಳ ಮದುವೆಯನ್ನು ನೆರವೇರಿಸಿದ್ದರು. ಸಾಲ ತೀರಿಸಲು ಮನೆ ಮಾರಿದ್ದರು. ನಾಲ್ಕು ತಿಂಗಳ ಹಿಂದೆ ಗೀತಾ, ಮಗಳು ಕವನಾ, ಅತ್ತೆ ರೇಣುಕಾ ಜತೆ ಮಂಚಿಲಕ್ಕೆ ಬಂದು ನೆಲೆಸಿದ್ದರು. ರೇಣುಕಾ ಅಲ್ಲಲ್ಲಿ ಕೆಲಸ ಮಾಡಿ ಜೀವನ ನಿರ್ವಹಣೆ ನಡೆಯುತ್ತಿದ್ದಾಗಲೇ ಕೋವಿಡ್ ಎರಡನೇ ಅಲೆಯಿಂದ ಕೆಲಸ ಕಳೆದುಕೊಂಡರು. ಈ ನಡುವೆ ಕವನಾಳಿಗೆ ಕೇರಳದ ವರ ರಂಜಿತ್ ಜತೆ ವಿವಾಹ ನಿಶ್ಚಯವಾಗಿತ್ತು.

ಪಡಿತರ, ಅಡುಗೆ ಅನಿಲ ವ್ಯವಸ್ಥೆ: ಆರ್ಥಿಕವಾಗಿ ಹಿಂದುಳಿದ ಹೆಣ್ಮಕ್ಕಳ ಮದುವೆಗೆ ಎಂ.ಕೆ.ಕುಟುಂಬ ಟ್ರಸ್ಟ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕುಟುಂಬ ಸದಸ್ಯರಿಂದ ಮಾತ್ರ ಇದಕ್ಕಾಗಿ ಹಣ ಸಂಗ್ರಹಿಸಲಾಗುತ್ತದೆ. ರಕ್ತದಾನ ಶಿಬಿರವನ್ನೂ ನಡೆಸಿದ ಈ ಕುಟುಂಬ ಜಿಲ್ಲಾಡಳಿತದಿಂದ ಪುರಸ್ಕಾರವನ್ನೂ ಪಡೆದಿತ್ತು. ಅಬ್ದುಲ್ ರಹ್ಮಾನ್ ಈ ಕುಟುಂಬದ ಮ್ಯಾರೇಜ್ ಫಂಡ್ ಅಧ್ಯಕ್ಷರು. ಸದಸ್ಯ ರಜಾಕ್‌ಗೆ ಕವನಾಳ ಚಿಕ್ಕಪ್ಪ ಸುರೇಶ್ ಪರಿಚಯಸ್ಥರು. ರಜಾಕ್ ಮನೆಗೆ ಅಡುಗೆ ಅನಿಲ ಮತ್ತು ಪಡಿತರ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದರು.

ಮೆಹಂದಿ, ಮದುವೆಯ ಜವಾಬ್ದಾರಿ: ರಹ್ಮಾನ್ ಮತ್ತು ಹಂಜಾ ಗೀತಾರ ಮನೆಗೆ ಭೇಟಿ ನೀಡಿ, ಮದುವೆಯ ಖರ್ಚು ವೆಚ್ಚದ ಭರವಸೆ ನೀಡಿ, ಕುಟುಂಬಸ್ಥರೊಡನೆ ಮತ್ತು ಶಾಸಕ ಯು.ಟಿ ಖಾದರ್ ಜತೆ ಚರ್ಚಿಸಿದ್ದರು. ಖಾದರ್ ಅವರೂ ಧನಸಹಾಯ ನೀಡಿದ್ದರು. ಅದರಂತೆ ಶನಿವಾರ ಎಂ.ಕೆ. ಕುಟುಂಬಸ್ಥರಾದ ಹಂಜಾ ಅವರ ಮನೆಯಲ್ಲೇ ಮೆಹಂದಿ ಶಾಸ್ತ್ರ ನಡೆದಿದ್ದು, ಭಾನುವಾರ ತಲಪಾಡಿ ದೇವಿಪುರ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮದುವೆಯೂ ನೆರವೇರಿತು. ಚಿನ್ನಾಭರಣ, ವಸ್ತ್ರ, ಮೆಹಂದಿಯ ಊಟೋಪಚಾರ, ಮದುವೆಯ ಖರ್ಚನ್ನು ಶಾಸಕ ಯು.ಟಿ.ಖಾದರ್ ನೆರವಿನ ಜತೆಗೆ ಎಂ.ಕೆ.ಕುಟುಂಬ ಭರಿಸಿದೆ.

ಸುರೇಶ್ ಅವರು ಗೀತಾ ಮನೆಯ ಪರಿಸ್ಥಿತಿ ಬಗ್ಗೆ ತಿಳಿಸಿದಾಗ ನಾವಲ್ಲಿಗೆ ಭೇಟಿ ಕೊಟ್ಟೆವು. ಅಲ್ಲಿನ ಸ್ಥಿತಿ ಕಂಡು ಮರುಕು ಹುಟ್ಟಿತು. ಈ ಹಿನ್ನೆಲೆಯಲ್ಲಿ ಕುಟುಂಬಕ್ಕಾಗಿ ಅಸ್ತಿತ್ವಕ್ಕೆ ತಂದ ಮ್ಯಾರೇಜ್ ಫಂಡ್ ಹಣ ಕವನಾಳ ಮೆಹಂದಿ, ಮದುವೆ ಖರ್ಚಿಗೆ ಮಾಡಿ ಮನೆಯವರಂತೆ ನೋಡಿಕೊಂಡಿದ್ದೇವೆ. ಅಬ್ದುಲ್ ರಹ್ಮಾನ್ ಎಂ.ಕೆ.ಮ್ಯಾರೇಜ್ ಫಂಡ್ ಅಧ್ಯಕ್ಷ ನಮ್ಮ ಬಳಿ ಹಣವಿರಲಿಲ್ಲ. ನಿಗದಿತ ದಿನದಂದು ಮಗಳ ಮದುವೆ ಮಾಡಿಸಲು ಸಾಧ್ಯವಿಲ್ಲ ಅಂದುಕೊಂಡಿದ್ದೆವು. ನಾವಿಬ್ಬರು ಪ್ರಾಣತ್ಯಾಗ ಮಾಡುವುದೊಂದೇ ದಾರಿ ಎಂದುಕೊಂಡಿದ್ದಾಗ ಎಂ.ಕೆ.ಕುಟುಂಬಸ್ಥರು ಸಹಾಯ ಮಾಡಿದ್ದಾರೆ. ಗೀತಾ ಕವನಾಳ ತಾಯಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net