ಸೋತವರು ಎದೆಗುಂದದೆ ಗೆಲುವಿಗೆ ತಯಾರಿ : ಸದಾಶಿವ ಉಳ್ಳಾಲ್ ಸಲಹೆ

New Project (29)
Published on

ಉಳ್ಳಾಲ: ಕ್ರೀಡಾಕೂಟದಲ್ಲಿ ಸೋತವರು ಎದೆಗುಂದದೆ ಮುಂದಿನ ಸ್ಪರ್ಧೆಯಲ್ಲಿ ಗೆಲ್ಲುವ ನಿಟ್ಟಿನಲ್ಲಿ ಈಗಲೇ ಸಿದ್ಧತೆ ಮುಂದುವರಿಸಬೇಕು. ಗೆದ್ದವರು ಬೀಗದೆ ಗೆಲುವಿನ ಪಯಣ ಮುಂದುವರಿಸುವ ಪ್ರಯತ್ನ ಮಾಡಬೇಕು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉಳ್ಳಾಲ ತಾಲೂಕು ಆಡಳಿತ, ಉಳ್ಳಾಲ ನಗರಸಭೆ, ಕೋಟೆಕಾರ್ ಪಟ್ಟಣ ಪಂಚಾಯಿತಿ ಹಾಗೂ ಸೋಮೇಶ್ವರ ಪುರಸಭೆಯ ಸಂಯುಕ್ತ ಆಶಯದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಭಾನುವಾರ ಉಳ್ಳಾಲ ತಾಲೂಕುಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಉಳ್ಳಾಲ ನಗರಸಭೆ ಪೌರಾಯುಕ್ತ ನವೀನ್ ಹೆಗ್ಡೆ ಮಾತನಾಡಿ, ಯುವಪೀಳಿಗೆಯಲ್ಲಿ ದೈಹಿಕ ಸಾಮರ್ಥ್ಯ ಇದ್ದರೆ ದೇಶದ ಅಭಿವೃದ್ಧಿ ಸಾಧ್ಯ. ಕ್ರೀಡೆಯಲ್ಲಿ ಭಾಗವಹಿಸಿದರೆ ದೈಹಿಕದೊಂದಿಗೆ ಮನೋಸಾಮರ್ಥ್ಯ ಹೆಚ್ಚುತ್ತದೆ ಎಂದು ತಿಳಿಸಿದರು.

ಕೊಣಾಜೆ ಗ್ರಾಪಂ ಅಧ್ಯಕ್ಷೆ ಗೀತಾ ಡಿ.ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷ ರವಿಶಂಕರ್, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಅಚ್ಯುತ ಗಟ್ಟಿ, ಸಮಾಜಶಾಸ್ತ್ರ ವಿಭಾಗ ಪ್ರಾಧ್ಯಾಪಕ ಡಾ.ಗೋವಿಂದರಾಜ್, ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಎ.ಕೆ.ಅಬ್ದುಲ್ ರಹ್ಮಾನ್ ಕೋಡಿಜಾಲ್, ಕ್ರೀಡಾ ರಾಷ್ಟ್ರೀಯ ತರಬೇತುದಾರ ದೇವಣ್ಣ ಮೊದಲಾದವರು ಉಪಸ್ಥಿತರಿದ್ದರು.

ಉಳ್ಳಾಲ ತಾಲೂಕು ದಸರಾ ಕ್ರೀಡಾಕೂಟದ ನೋಡಲ್ ಅಧಿಕಾರಿ ತ್ಯಾಗಮ್ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶಿವಕುಮಾರ್ ವಂದಿಸಿದರು. ಪಾವೂರು ಗ್ರಾ.ಪಂ. ಪಿಡಿಒ ಕೃಷ್ಣ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಅಧಿಕಾರಿಗಳೇ ಗೈರು

ಉಳ್ಳಾಲ ಹೊಸ ತಾಲೂಕು ಆದ ಬಳಿಕ ಮೂರನೇ ವರ್ಷದ ದಸರಾ ಕ್ರೀಡಾ ಸ್ಪರ್ಧೆ ಇದಾಗಿದೆ. ಈ ವರ್ಷದ ಕ್ರೀಡಾಕೂಟ ಮಳೆ ನಡುವೆ ನಡೆದಿದೆ. ಇದರ ಸಂಪೂರ್ಣ ಜವಾಬ್ದಾರಿ ವಹಿಸಬೇಕಿದ್ದ ತಾಲೂಕು ತಹಸೀಲ್ದಾರ್, ಕಾರ್ಯನಿರ್ವಹಣಾಧಿಕಾರಿಯೇ ಕಾರ್ಯಕ್ರಮದಲ್ಲಿ ಗೈರಾಗಿದ್ದುದು ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net