ಆರೋಗ್ಯ ಕೇಂದ್ರದಲ್ಲಿ ವೈದ್ಯೆ ತಾರತಮ್ಯ : ಸದಸ್ಯರ ಆಕ್ರೋಶ : ಉಳ್ಳಾಲ ನಗರಸಭೆ ಕೊನೆಯ ಸಾಮಾನ್ಯ ಸಭೆ

New Project (12)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಉಳ್ಳಾಲ ನಗರಸಭೆ ಈ ಸಾಲಿನ ಆಡಳಿತಗಾರರ ಕೊನೆಯ ಸಾಮಾನ್ಯ ಸಭೆ ಮಂಗಳವಾರ ಉಳ್ಳಾಲ ನರಗಸಭೆ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆಯಲ್ಲಿ ನಡೆಯಿತು.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯೆಯ ತಾರತಮ್ಯ ಧೋರಣೆಯ ವಿರುದ್ಧ ಸದಸ್ಯೆ ಖಮರುನ್ನಿಸಾ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋದಾಗ ತನ್ನಲ್ಲಿ ಟೆಸ್ಟ್ ಮಾಡಿದ ವರದಿ ಇರದ ಸಂದರ್ಭ ಅಲ್ಲಿದ್ದ ಖಾಸಗಿ ವೈದ್ಯಕೀಯ ಕಾಲೇಜಿನ ವೈದ್ಯೆಯೊಬ್ಬರು, ನೀವು ಬೇರೆ ಆಸ್ಪತ್ರೆಗೆ ಹೋಗಿ, ಇಲ್ಲಿಗೇಕೆ ಬಂದಿದ್ದು ಎಂದಿದ್ದಾರೆ. ರೋಗಿಗಳ ಬಳಿ ಬೇಜವಾಬ್ದಾರಿಯಾಗಿ ಮಾತನಾಡುತ್ತಾರೆ. ಅವರಿಗೆ ಬೇಕಾದವರಿಗೆ ಸ್ಕಾೃನ್ ಮತ್ತು ಎಕ್ಸ್‌ರೇ ಮಾಡುತ್ತಾರೆ. ಬೇರೆ ಆಸ್ಪತ್ರೆಗೆ ಹೋಗಿ ಎನ್ನುವ ನಿಯಮ ಇದೆಯೇ ಎಂದು ಹರಿಹಾಯ್ದರು. ಮಾಜಿ ಉಪಾಧ್ಯಕ್ಷ ಯು.ಪಿ.ಅಯೂಬ್ ಮಂಚಿಲ, ವೈದ್ಯೆ ಕೌನ್ಸಿಲರ್ ಬಳಿ ಬೇಜವಾಬ್ದಾರಿಯಾಗಿ ಮಾತನಾಡಿರುವುದು ಸರಿಯಲ್ಲ. ಇದರ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಂಡು ಮೇಲಧಿಕಾರಿ ಹಾಗೂ ಸ್ಪೀಕರ್ ಗಮನಕ್ಕೆ ತರಬೇಕು ಎಂದರು. ತಮ್ಮ ವಾರ್ಡ್‌ನ ಮಹಿಳೆ ರಕ್ತ ಪರಿಶೀಲನೆಗೆ ಹೋದಾಗ ಆದ ಅನ್ಯಾಯ ಬಗ್ಗೆ ಖಲೀಲ್ ಮಾಹಿತಿ ನೀಡಿದರು.

ಆಸ್ಪತ್ರೆಯಲ್ಲಿ ಔಷಧದ ಕೊರತೆ ಇದ್ದು ಕೇಳಿದರೆ ಅನುದಾನ ಇಲ್ಲ ಎನ್ನುತ್ತಾರೆ. ಸ್ಕಾೃನ್ ಮತ್ತು ಎಕ್ಸ್‌ರೇಗೆ ಬಂದವರಿಗೆ ಟೋಕನ್ ವ್ಯವಸ್ಥೆ ಮಾಡುವಂತೆ ಜಬ್ಬಾರ್ ಸಲಹೆ ನೀಡಿದರು. ಆಸ್ಪತ್ರೆಯಿಂದ ಸ್ಕಾೃನ್ ಮಾಡುವವರನ್ನು ಬದಲಾಯಿಸಿ ಎಂದು ಗೀತಾ ಬಾಯಿ ಹೇಳಿದರು.

11 ಸಾವಿರ ಮನೆಗಳಿಗೆ ಸಂಪರ್ಕ

ಅಮೃತ ಯೋಜನೆಯಡಿ ಪ್ರತಿ ಮನೆಗೆ ನೀರಿನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ 179 ಕಿ.ಮೀ. ಪೈಪ್‌ಲೈನ್ ಆಗಬೇಕಿದ್ದು, 175 ಕಿ.ಮೀ.ವರೆಗೆ ಕೆಲಸ ಮುಗಿದಿದೆ. 11 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಬೇಕಿದ್ದು, 3600 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಒಂಬತ್ತುಕರೆ, ಚೆಂಬುಗುಡ್ಡೆ ಟ್ಯಾಂಕ್ ನಿರ್ಮಾಣಗೊಂಡಿದ್ದು, ಮಳೆಯಿಂದ ಸಂತೋಷ್ ನಗರದಲ್ಲಿ ಕೆಲಸ ಆರಂಭಿಸಿಲ್ಲ. ಇಲ್ಲಿ ಒಂದು ಲಕ್ಷ ಲೀಟರ್‌ನ ಟ್ಯಾಂಕ್ ನಿರ್ಮಾಣ ಆಗಲಿದ್ದು, ನಿಗದಿತ ಜಾಗ ಖಾಸಗಿಯವರದ್ದಾಗಿದ್ದು, ಇಲ್ಲಿ ಆವರಣಗೋಡೆ ಇರುವ ಕಾರಣ ಕೆಲಸ ಆರಂಭಿಸಿಲ್ಲ. ಮುಂದಿನ ವಾರ ಪೌರಾಯುಕ್ತರ ಜತೆ ಭೇಟಿ ನೀಡಿ ಕೆಲಸ ಆರಂಭಿಸುತ್ತೇವೆ. 16.50 ಕೋಟಿ ರೂ. ಅನುದಾನ ನಗರಸಭೆಯೂ ನೀಡಬೇಕಿದ್ದು ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿ ಶೋಭಾರಾಣಿ ಮಾಹಿತಿ ನೀಡಿದರು.

ಉಳಿಯದಲ್ಲಿ ಮುಖ್ಯ ರಸ್ತೆ ಹೊರತು, ಮನೆಗಳು ಇರುವಲ್ಲಿ ಕೆಲವು ಕಡೆ ಪೈಪ್‌ಲೈನ್ ಆಗಿಲ್ಲ ಎಂದು ವೀಣಾ ಡಿಸೋಜ ದೂರಿದರು, ಎಲ್ಲಿ ವಿದ್ಯುತ್ ಪೈಪ್ ಇದೆ ಎನ್ನುವುದು ಗೊತ್ತಾಗುವುದಿಲ್ಲ. ಕೆಲಸ ಮಾಡುವ ಸಂದರ್ಭ ಕಾರ್ಮಿಕರ ಜೀವ ರಕ್ಷಣೆಗಾಗಿ ಗಮನಕೊಡಿ ರವಿಚಂದ್ರ ಗಟ್ಟಿ ಮನವಿ ಮಾಡಿದರು.

ನಳ್ಳಿ ನೀರಿನಿಂದ ವಾಂತಿ ಭೇದಿ!: ಮಾಜಿ ಉಪಾಧ್ಯಕ್ಷ ಯು.ಪಿ.ಅಯೂಬ್ ಮಂಚಿಲ ಮಾತನಾಡಿ, ಪೈಪ್ ಮೇಲೆ ಮೂರು ಅಡಿ ಮಣ್ಣು ಇರಬೇಕಿದ್ದರೂ ಮದನಿ ಶಾಲೆ ರಸ್ತೆ ಬಳಿ ಮೇಲ್ಭಾಗದಲ್ಲೇ ಹಾಕಲಾಗುತ್ತಿದೆ. ಮುಖ್ಯ ರಸ್ತೆಯಲ್ಲಿ ಮಣ್ಣು ರಾಶಿ ಹಾಕಲಾಗಿದ್ದು ವಾಹನಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಳ್ಳಿಯ ಕಲುಷಿತ ನೀರು ಕುಡಿದು ನಾಲ್ಕೈದು ಮಕ್ಕಳಿಗೆ ವಾಂತಿ ಭೇದಿಯಾಗಿಗೆ. ನೀರಿಗೆ ಹಾಕುವ ಕ್ಲೋರಿನ್‌ನಿಂದ ಸಮಸ್ಯೆ ಆಗಿದ್ದು ಬಹಳಷ್ಟು ಜನ ನೀರು ಕುಡಿಯುವುದನ್ನೇ ನಿಲ್ಲಿಸಿದ್ದಾರೆಂದು ದೂರಿದರು.

ಖಾಸಗಿ ಜಾಗ ಲೀಸ್

ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಹಸಿತ್ಯಾಜ್ಯ ವಿಲೇವಾರಿಗೆ ಯಾವುದೇ ಸರ್ಕಾರಿ ಜಾಗ ಇಲ್ಲದ ಕಾರಣ ಮಂಗಳೂರಿಗೆ ಕಳಿಸಲಾಗುತ್ತಿದ್ದು ಒಂದು ಟ್ರಿಪ್‌ಗೆ 9 ಸಾವಿರ ರೂ. ಪಾವತಿಸಲಾಗುತ್ತಿದೆ. ಆದರೆ ಅಲ್ಲೂ ಸ್ವೀಕರಿಸಲು ಹಿಂದೇಟು ಹಾಕಲಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಯೆನೆಪೋಯ ಸಂಸ್ಥೆಯಿಂದ 30 ಸೆಂಟ್ಸ್ ಜಾಗ 30 ವರ್ಷಕ್ಕೆ ಲೀಸ್ ಮಾಡಿಸಲಾಗಿದ್ದು ಸರ್ಕಾರದ ಮಟ್ಟದಲ್ಲಿ ಇದೆ ಎಂದು ಪೌರಾಯುಕ್ತರು ತಿಳಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಶ್ರಫ್, ವೀಣಾ ಡಿಸೋಜ, ಖಲೀಲ್ ಮೊದಲಾದವರು ಉಪಸ್ಥಿತರಿದ್ದರು.

ಕಪ್ಪುಶಾಲು ಧರಿಸಿ ಪ್ರತಿಭಟನೆ!

ತಮ್ಮ ವಾರ್ಡ್‌ನಲ್ಲಿ ಅಭಿವೃದ್ಧಿ ಬಗ್ಗೆ ನಿರ್ಲಕ್ಷೃ ತಾಳಲಾಗಿದೆ ಎಂದು ಆರೋಪಿಸಿ ನಗರಸಭೆ ಜೆಡಿಎಸ್ ಸದಸ್ಯ ದಿನಕರ್ ಉಳ್ಳಾಲ್ ನಾಲ್ಕೂವರೆ ವರ್ಷದ ಹಿಂದೆ ಸಾಮಾನ್ಯ ಸಭೆಯಲ್ಲಿ ಕಪ್ಪು ಶಾಲು ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು. ಅದರಂತೆ ಮಂಗಳವಾರದ ಸಭೆಯಲ್ಲೂ ಕಪ್ಪು ಶಾಲು ಧರಿಸಿ ಮಾತನಾಡಿದ ಅವರು, ನಮ್ಮ ವಾರ್ಡ್‌ನಲ್ಲಿ ಇದುವರೆಗೆ ಯಾವುದೇ ಕೆಲಸ ಆಗಿಲ್ಲ, ಈಗಿನ ಅಧ್ಯಕ್ಷರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಇಬ್ಬರು ಸದಸ್ಯರು ನಿಮಗೆ ಬೆಂಬಲ ನೀಡಿದ್ದರಿಂದ ಅಧಿಕಾರ ನಡೆಸಿದ್ದು, ಈ ಬಗ್ಗೆಯೂ ಕ್ರಮ ಕೈಗೊಳ್ಳುವ ಅವಕಾಶ ನನಗಿದೆ ಎಂದು ಕಾಂಗ್ರೆಸ್‌ಗೆ ಬೆಂಬಲ ನೀಡಿದ ಜೆಡಿಎಸ್ ಸದಸ್ಯರನ್ನು ಪರೋಕ್ಷವಾಗಿ ಉಲ್ಲೇಖಿಸಿದರು. ನಮ್ಮ ವಿಚಾರದಲ್ಲಿ ಮಾತನಾಡಬೇಡಿ, ನೀವು ಯಾವ ಪಕ್ಷದಲ್ಲಿ ಇದ್ದೀರಿ? 22 ಕೌನ್ಸಿಲರ್‌ಗಳು ಅಧ್ಯಕ್ಷರಿಗೆ ಹಾಗೂ 16 ಕೌನ್ಸಿಲರ್‌ಗಳು ಉಪಾಧ್ಯಕ್ಷರಿಗೆ ಬೆಂಬಲ ನೀಡಿದರೂ ಬಹುಮತ ಇಲ್ಲ ಎನ್ನುವುದು ಹೇಗೆ? ನಮ್ಮ ಜತೆ ಇನ್ನೂ ಆರು ಸದಸ್ಯರು ಬೆಂಬಲ ನೀಡಿದ್ದಾರೆ. ನೀವೇಕೆ ಗೊಂದಲ ಸೃಷ್ಟಿಸಿದ್ದೀರಿ ಎಂದು ಖಲೀಲ್ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net