

ಜೊಯಿಡಾ: ಸುಪ್ರಸಿದ್ದ ಶ್ರೀ ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ ಫೆ.16ರಿಂದ 26ರವರೆಗೆ ನಡೆಯಲಿದೆ. ಫೆ.24ರಂದು ಮಹಾರಥೋತ್ಸವ ಜರುಗಲಿದ್ದು, ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಜತೆಗೆ ಭಕ್ತರ ಸಹಕಾರವೂ ಮುಖ್ಯ ಎಂದು ಉಪವಿಭಾಗಾಧಿಕಾರಿ ಕನಿಷ್ಕ ಅವರು ಹೇಳಿದರು.
ಉಳವಿಯಲ್ಲಿ ಬುಧವಾರ ಏರ್ಪಡಿಸಿದ್ದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾತ್ರೆಯಲ್ಲಿ ಯಾವುದೇ ಅವಘಡ ಸಂಭವಿಸಿದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಈ ನಿಟ್ಟಿನಲ್ಲಿ ಜಾತ್ರಾ ಸ್ಥಳದಲ್ಲಿ ಎರಡು ವಿಚಾರಣೆ ಕೇಂದ್ರ ತೆರೆದು ನಾಲ್ಕು ಸಹಾಯವಾಣಿ ಸಂಖ್ಯೆ ನೀಡಲಾಗುವುದು. ಯಾವುದೇ ಸಮಸ್ಯೆ ಇದ್ದಲ್ಲಿ ಸಂಪರ್ಕಿಸಬಹುದು ಎಂದರು.
ಗುಂದ ಅರ್‌ಎಫ್‌ಒ ರವಿಕಿರಣ ಸಂಪಗಾವಿ ಮಾತನಾಡಿ, ಪ್ರತಿ ವರ್ಷದಂತೆ ಭಕ್ತರಿಗೆ ಬೆತ್ತ ಕೊಡಲಾಗುವುದು. ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.
ಉಳವಿ- ಪೋಟೋಲಿ ಮತ್ತು ಬರ್ಚಿ- ಧಾರವಾಡ ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು, ಜಾತ್ರೆ ವೇಳೆಗೆ ದುರಸ್ತಿಪಡಿಸದಿದ್ದರೆ ಜಾತ್ರೆಯ ದಿನ ಪೊಟೋಲಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ನಾಗರಿಕರು ಎಚ್ಚರಿಸಿದರು.
ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅರುಣ ಪ್ರತಿಕ್ರಿಯಿಸಿ, ಹೊಂಡ ಮುಚ್ಚಿ ಸರಿಪಡಿಸುವ ಭರವಸೆ ನೀಡಿದರು. ಸದ್ಯಕ್ಕೆ ನೀರಿನ ತೊಂದರೆ ಇಲ್ಲ ಎಂದು ಜಿಪಂ ಎಇಇ ಮಹಮದ್ ಸುಬೆರ್ ಮಾಹಿತಿ ನೀಡಿದರು.
ಹೆಸ್ಕಾಂನ ದೀಪಕ ನಾಯ್ಕ ಮಾತನಾಡಿ, ಜಾತ್ರೆಯ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಎಲ್ಲಿಯಾದರೂ ವಿದ್ಯುತ್ ತಂತಿ ತುಂಡಾದರೆ ತಕ್ಷಣವೇ ಸಹಾಯವಾಣಿ 1912ಗೆ ಕರೆ ಮಾಡಿ ತಿಳಿಸಿ ಎಂದರು.
ಶಕ್ತಿ ಯೋಜನೆಯ ಕಾರಣ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಬರುವ ನಿರೀಕ್ಷೆ ಇದೆ. ಹೀಗಾಗಿ ಹೆಚ್ಚಿನ ಬಸ್ ಸಂಚಾರ ವ್ಯವಸ್ಥೆ ಮಾಡಬೇಕೆಂದು ನಾಗರಿಕರು ಮನವಿ ಮಾಡಿದರು.
ಪಶು ಇಲಾಖೆಯ ಡಾ. ಮಂಜಪ್ಪ ಮಾತನಾಡಿ, ಕಳೆದ ವರ್ಷ ಜಾತ್ರೆಗೆ 4 ಸಾವಿರ ಜಾನುವಾರುಗಳು ಬಂದಿದ್ದವು. ತುಂಬಾ ದೂರದಿಂದ ಜಾನುವಾರುಗಳು ಬರುವ ಕಾರಣ ಅಗತ್ಯ ಔಷಧ ದಾಸ್ತಾನಿಡಲಾಗಿದೆ ಎಂದರು.
ಡಿಎಸ್‌ಪಿ ಶಿವಾನಂದ ಕಟಗಿ, ಉಳವಿ ಗ್ರಾಪಂ ಅಧ್ಯಕ್ಷ ಮಂಜುನಾಥ ಮುಖಾಶಿ, ಉಳವಿ ಟ್ರಸ್ಟ ಕಮಿಟಿ ಉಪಾಧ್ಯಕ್ಷ ಸಂಜಯ ಕಿತ್ತೂರು, ತಹಸೀಲ್ದಾರ್ ಮಂಜುನಾಥ ಮನ್ನೂಳ್ಳಿ, ಸಿಪಿಐ ನಿತ್ಯಾನಂದ ಪಂಡಿತ, ನಂದಿಗದ್ದಾ ಗ್ರಾಪಂ ಅಧ್ಯಕ್ಷ ಅರುಣ ದೇಸಾಯಿ, ದೇವಸ್ಥಾನ ಅರ್ಚಕ ಶಂಕ್ರಯ್ಯ ಕಲ್ಮಠ ಇತರರು ಉಪಸ್ಥಿತರಿದ್ದರು.
ಉಳವಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಯಾವುದೇ ಚಕ್ಕಡಿ, ವಾಹನದಲ್ಲಿ ಮದ್ಯ ತಂದರೆ ಅಂತಹ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗುವುದು. ರಥೋತ್ಸವದಂದು ಸಂಜೆ ಬಸ್ ಮತ್ತು ಉಳಿದ ವಾಹನಗಳು ಹೋದ ನಂತರ ಟ್ರಾೃಕ್ಟರ್ ಹಾಗೂ ಚಕ್ಕಡಿಗಳನ್ನು ಬಿಡಲಾಗುವುದು. ಭಕ್ತರು ಸಹಕರಿಸಬೇಕು.I ಶಿವಾನಂದ ಕಟಗಿ, ಡಿವೈಎಸ್‌ಪಿ ತೂಗು ಸೇತುವೆ ಮೇಲೆ ಬರುವ ಪ್ರತಿ ದ್ವಿಚಕ್ರ ವಾಹನಕ್ಕೆ 20 ರೂ. ಕರ ವಸೂಲಿ ಮಾಡಲಾಗುವುದು. ಶಿವಪುರ ಸೇತುವೆಯ ನಿರ್ವಹಣೆ ಜವಾಬ್ದಾರಿ ಉಳವಿ ಗ್ರಾಪಂನದು. ಆದರೆ, ದೇಹಳ್ಳಿ ಪಂಚಾಯಿತಿಯವರು ಕರ ವಸೂಲಿ ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಸೇತುವೆಯ ಮೇಲೆ ಜನ ನಿಲ್ಲದಂತೆ ಪೊಲೀಸರು ಬಂದೋಬಸ್ತ್ ಮಾಡಿಕೊಡಬೇಕು.I ಮಂಜುನಾಥ ಮುಖಾಶಿ, ಉಳವಿ ಗ್ರಾಪಂ ಅಧ್ಯಕ್ಷ