ಯುಕೊ ಸಂಘಟನೆಯಿಂದ ಬೇದ ಚಂಗ್ರಾಂದಿ ಆಚರಣೆ

13mdkf3 - Copy
Published on

ವಿಜಯವಾಣಿ ಸುದ್ದಿಜಾಲ ಶ್ರೀಮಂಗಲ

ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಕಿರುಗೂರು ಗ್ರಾಮದ ಚೆಪ್ಪುಡಿರ ಸುಜು ಕರುಂಬಯ್ಯ ಅವರ ಗದ್ದೆಯಲ್ಲಿ ಸೋಮವಾರ ಯುನೈಟೆಡ್ ಕೊಡವ ಆರ್ಗನೈಜೇಷನ್ (ಯುಕೊ) ಸಂಘಟನೆಯ ೪ನೇ ವರ್ಷದ ಬೇದ ಚಂಗ್ರಾಂದಿ ಆಚರಣೆ ನಡೆಯಿತು.
ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಗದ್ದೆಯಲ್ಲಿ ವಿಧಿವಿಧಾನ ನೆರವೇರಿಸಿದರು. ಸಾಂಪ್ರದಾಯಿಕವಾಗಿ ಕೈಎಣ್ಣೆಯನ್ನು ಭೂಮಿಗೆ ಸುರಿದು, ಮರದ ಬಾಚಣಿಕೆಯನ್ನಿಟ್ಟು, ಭೂಮಿತಾಯಿ ನೀಡ ಉಟ್ಟಿಮಂಡೆ ಕಾಂಜದ್ ತಂಪಾಡ್ - ಕುಂಬ್ಯಾತ್ ಮಳೆ ಆಯಿತ್ ಕಂದ್‌ಲೂ ಕೂಳಾಡ್ ಎಂದು ಹೇಳುವುದರ ಮೂಲಕ ಭೂಮಿತಾಯಿಯನ್ನು ಸ್ಮರಿಸಲಾಯಿತು.

ಸುಜು ಕರುಂಬಯ್ಯ ಅವರ ಮನೆಯಲ್ಲಿ ಜರುಗಿದ ಸಭೆಯನ್ನುದ್ದೇಶಿಸಿ ಮಾತನಾಡಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಒಂದು ಮಗುವಿನ ಸಮಗ್ರ ಬೆಳವಣಿಗೆಯ ಹಿಂದೆ ಒಬ್ಬ ತಾಯಿಯ ಪ್ರಭಾವ ಮಹತ್ವದ ಪಾತ್ರನಿರ್ವಹಿಸುವ ಹಾಗೆ ಒಂದು ಸಮುದಾಯದ ಸಮಗ್ರ ಬೆಳವಣಿಗೆಯಲ್ಲಿ ಭೂಮಿ ತಾಯಿಯ ಪ್ರಭಾವವೂ ಬಹುಮುಖ್ಯ ಪಾತ್ರ ನಿರ್ವಹಿಸುತ್ತದೆ. ಇದರ ಬಾಂಧವ್ಯದ ಸಂಕೇತವಾಗಿ ಕೊಡವರು ಬೇದ ಚಂಗ್ರಾಂದಿ ಆಚರಣೆ ಮಾಡುತ್ತಾರೆಂದರು.

ಅನಾದಿ ಕಾಲದಿಂದಲೂ ಕೊಡವರು ತಮ್ಮದೇ ಆದ ಸ್ವಂತ ಶಕ್ತಿಯಿಂದ, ಹಿರಿಯರು ಹಾಕಿಕೊಟ್ಟ ಸಂಸ್ಕೃತಿ ಹಾಗೂ ಸಂಸ್ಕಾರ ಪಾಲಿಸುತ್ತಿದ್ದಾರೆ. ನಂಬಿಕೆ ಉಳಿಸಿಕೊಳ್ಳುವುದರ ಮೂಲಕ ತಮ್ಮ ಏಳಿಗೆ ಕಂಡುಕೊಂಡ ಅಪರೂಪದ ಜನಾಂಗವಾಗಿದೆ. ಇತಿಹಾಸದಿಂದಲೇ ಯಾವುದೇ ರಾಜರಿಂದಾಗಲಿ, ರಾಜಕೀಯದಿಂದಾಗಲಿ ಕೊಡವರಿಗೆ ಅನುಕೂಲಗಳಾದ ಉದಾಹರಣೆಗಳೇ ಇಲ್ಲ. ಈಗಲೂ ಸಹ ಯಾವುದೇ ರಾಜಕೀಯ ಪಕ್ಷ ಅಥವ ಮುಖಂಡರುಗಳಿಂದ ಕೊಡವರಿಗೆ ಒಳಿತಾಗುತ್ತದೆ ಎಂಬುದು ಕೇವಲ ಭ್ರಮೆ. ಆದ್ದರಿಂದ ನಮ್ಮ ಅಸ್ತಿತ್ವ ಉಳಿಸಿಕೊಳ್ಳುವತ್ತ ನಾವೇ ಗಮನ ಹರಿಸುವುದರ ಮೂಲಕ ನಮ್ಮನ್ನು ನಾವು ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಕಾಪಾಡಿಕೊಳ್ಳಬೇಕೆಂದರು.

ಪ್ರಪಂಚದಾದ್ಯಂತ ಹರಡಿರುವ ಕೊಡವರು ಕನಿಷ್ಠ ಹಬ್ಬ ಹರಿದಿನಗಳು, ಕಾರೋಣಂಗ್ ಕೊಡ್ಪ ಕಾರ್ಯಕ್ರಮಗಳಿಗಾದರೂ ತಮ್ಮ ನೆಲೆಗೆ ಮರಳುವಂತಾಗಬೇಕು. ಆ ಮೂಲಕ ತಾವು ಹುಟ್ಟಿದ ಮಣ್ಣಿನ ಬಾಂಧವ್ಯ ಉಳಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ನಾವು ಭೌತಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಏಳಿಗೆ ಕಂಡುಕೊಳ್ಳಲು ಸಾಧ್ಯ ಎಂದರು.

ಕೊಡವರನ್ನು ಹೊರತು ಪಡಿಸಿದಂತೆ ಎಲ್ಲಾ ಸಮುದಾಯಗಳ ಜನಾಂಗೀಯ ಹಾಗೂ ಧಾರ್ಮಿಕ ನಿರ್ಧಾರಗಳು ಆಯಾ ಜನಾಂಗೀಯ ಹಾಗು ಧಾರ್ಮಿಕ ಮುಖಂಡರಿಂದಲೇ ಆಗುತ್ತಿದೆ. ದುರ್ದೃಷ್ಟವಶಾತ್ ಕೊಡವ ಸಮುದಾಯದ ಜನಾಂಗೀಯ ಹಾಗೂ ಧಾರ್ಮಿಕ ನಿರ್ಧಾರಗಳಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಅಧಿಕವಾಗಿವೆ. ಇದುವೇ ಸಮುದಾಯಕ್ಕೆ ಮಾರಕವಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಚೆಪ್ಪುಡಿರ ಸುಜು ಕರುಂಬಯ್ಯ, ಚೆಪ್ಪುಡಿರ ಪ್ರತಿಮ ಕರುಂಬಯ್ಯ, ಪನ್ನಗಾ ಕರುಂಬಯ್ಯ, ಕಿರಣ್ ಸುಬ್ಬಯ್ಯ, ರೇಣು ಸುಬ್ಬಯ್ಯ, ಆಪಟ್ಟಿರ ಜಾನಕಿ ಚಂಗಪ್ಪ, ಚಕ್ಕೇರ ರಂಜಿತ್, ಸುಮ ರಂಜಿತ್, ಕೃಷಿಕಾ ರಂಜಿತ್, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಸುಮಿ ರಾಬಿನ್, ದೀನ ಉತ್ತಪ್ಪ, ತನ್ವಿ ಉತ್ತಪ್ಪ, ನೆಲ್ಲಮಕ್ಕಡ ಮಾದಯ್ಯ, ಮಚ್ಚಾಮಾಡ ಅರುಣ್ ಸೋಮಯ್ಯ, ಪ್ರೀಯಾ ಅರುಣ್, ಅಜ್ಜಿನಿಕಂಡ ಸೂರಜ್ ತಿಮ್ಮಯ್ಯ, ಬೊಳಿಯಂಗಡ ಬೋಪಣ್ಣ, ವೇದಾಂತ್ ಸೋಮಯ್ಯ, ಬೊಳ್ಳಚೆಟ್ಟಿರ ಮೈನಾ ಕಾಳಪ್ಪ, ಕುಂಜಿಲಂಡ ಗ್ರೇಸಿ ಪೂಣಚ್ಚ, ದಿಲನ್ ದೇವಯ್ಯ, ಮುಕ್ಕಾಟಿರ ದಿವಿನ್ ತಿಮ್ಮಯ್ಯ, ನಾಯಕಂಡ ರವಿ ಉತ್ತಪ್ಪ, ಪುಷ್ಪ ಉತ್ತಪ್ಪ, ಪಾಲಚಂಡ ಸದಾ ಪೂವಯ್ಯ, ಕಲಾ ಪೂವಯ್ಯ, ಕಾಂಡೇರ ಲಕ್ಷ್ಮಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net