

ಜಮಖಂಡಿ: ತಾಲೂಕಿನ ಕೃಷ್ಣಾ ನದಿ ದಿನದಿನಕ್ಕೆ ಉಕ್ಕುತ್ತಿರುವುದರಿಂದ ಮೈಗೂರ ಗ್ರಾಮದ ಮಿರ್ಜಿ ವಸತಿ ಪ್ರದೇಶ ನಡುಗಡ್ಡೆ ಆಗಿದೆ. ಹಲವಾರು ರಸ್ತೆಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.
ಮಹಾರಾಷ್ಟ್ರದ ಕೃಷ್ಣಾ ಶ್ರೇಣಿಯಲ್ಲಿ ಸುರಿಯುತ್ತಿರುವ ಮಳೆ ಪ್ರಮಾಣ ಕಡಿಮೆಯಾದರೂ ತಾಲೂಕಿನ ಕೃಷ್ಣಾ ನದಿಗೆ 2.89 ಲಕ್ಷ ಕ್ಯೂಸೆಕ್‌ನಷ್ಟು ನೀರು ಹರಿದು ಬರುತ್ತಿರುವುದರಿಂದ ಮೈಗೂರ- ಶಿರಗುಪ್ಪಿ, ಮೈಗೂರ-ಮುತ್ತೂರ ಗ್ರಾಮಗಳ ಒಳರಸ್ತೆಗಳು ಜಲಾವೃತಗೊಂಡಿದ್ದು ರೈತರು ಪರದಾಡುವಂತಾಗಿದೆ.
ಮೈಗೂರ ಗ್ರಾಮದ ನಂದ್ಯಾನಕೋಡಿ ರಸ್ತೆ ಜಲಾವೃತಗೊಂಡಿದ್ದು, ಮಿರ್ಜಿ ವಸತಿ ನಡುಗಡ್ಡೆಯಾಗಿದ್ದರಿಂದ 100ಕ್ಕೂ ಅಧಿಕ ಜಾನುವಾರುಗಳು, 30ಕ್ಕೂ ಅಧಿಕ ಗ್ರಾಮಸ್ಥರು ಅಲ್ಲಿಂದ ಹೊರ ಬಂದಿದ್ದಾರೆ.
ಗ್ರಾಮಸ್ಥರು ತಮ್ಮ ನಿವಾಸಗಳಲ್ಲಿನ ವಸ್ತುಗಳನ್ನು ಮೇಲ್ಚಾವಣಿ ಮೇಲಿಟ್ಟು, ಗಂಟು ಮೂಟೆಗಳನ್ನು ತಲೆ ಮೇಲೆ ಹೊತ್ತು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವುದು ಸಾಮಾನ್ಯವಾಗಿದೆ.
ವಿಷ ಜಂತುಗಳ ಕಾಟ: ನದಿ ತೀರದ ಗ್ರಾಮಗಳಿಗೆ ಹೊಂದಿಕೊಂಡು ನೀರು ನಿಂತಿದ್ದರಿಂದಾಗಿ ವಿಷಜಂತುಗಳು ಕಾಟವೂ ಹೆಚ್ಚಾಗಿದೆ. ಮನೆ ಹಾಗೂ ಜಾನುವಾರುಗಳ ಶೆಡ್‌ಗಳಲ್ಲಿ ಬೀಡು ಬೀಡುತ್ತಿವೆ.
ಮಿರ್ಜಿ ಗಡ್ಡೆಯಲ್ಲಿ ರೈತರ 12ಕ್ಕೂ ಹೆಚ್ಚು ಬೆಕ್ಕುಗಳು, 4ಕ್ಕೂ ಅಧಿಕ ನಾಯಿಗಳು ಅಲ್ಲೇ ಸಿಲುಕಿಕೊಂಡಿವೆ. ಅವುಗಳನ್ನು ತಮ್ಮೊಂದಿಗೆ ಹೊರತರಲು ರೈತರು ಪ್ರಯತ್ನಿಸಿದರಾದರೂ ಕೈಗೆ ಸಿಗದೆ ತಪ್ಪಿಸಿಕೊಂಡಿವೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳು ಬಂದು ಸುರಕ್ಷಿತ ಸ್ಥಳಕ್ಕೆ ಬರ‌್ರಿ ಅಂತ ಕರಿತಾರ್, ನಮ್ಮ ಜಾನುವಾರುಗಳಿಗೆ ಬೆಳೆಸಿದ್ದ ಹುಲ್ಲು ನೀರಪಾಲ್ ಆಗೈತಿ, ನಾವು ಬೇಕಾದರ ಉಪವಾಸ ಇರತೀವಿ. ಆದರೆ ಮೂಕ ಜಾನುವಾರುಗಳನ್ನು ಹೆಂಗ್ರಿ ಉಪವಾಸ ಕಟ್ಟೋದು. ಮೊದಲು ಮೇವಿನ ವ್ಯವಸ್ಥೆ ಮಾಡಿ ಪುಣ್ಯಾ ಕಟ್ಟಕೊಳ್ರಿ ಎಂದು ಮಿರ್ಜಿ ವಸತಿ ರೈತರು ತಮ್ಮ ಅಳಲು ತೋಡಿಕೊಂಡರು.
ಮಹಾರಾಷ್ಟ್ರದಲ್ಲಿ ಎಷ್ಟು ಮಳೆ ಆಗತೈತಿ, ನದಿಗೆ ಎಷ್ಟು ನೀರು ಬರುತೈತಿ ಎಂಬುದು ಸರ್ಕಾರಕ್ಕೆ ಗೊತ್ತಿರತೈತಿ. ಸರ್ಕಾರವೇ ಜಾಗೃತವಾಗಿ ಆಲಮಟ್ಟಿಯಿಂದ ಬಂದಷ್ಟು ನೀರನ್ನು ಹೊರಬಿಟ್ಟಿದ್ದರ ನಮಗ್ಯಾಕ್ ಇಂತ ಪರಿಸ್ಥಿತಿ ಬರತ್ತಿತ್ತು. ಇಲ್ಲಸಲ್ಲದ ನೆಪ ಹೇಳಿಕೊಂಡು ನಮಗೀಗ ಸುರಕ್ಷಿತ ಸ್ಥಳಕ್ಕೆ ಹೋಗ್ರಿ ಅಂತಾರೆ ಎಂದು ಗ್ರಾಮದ ಪ್ರಮುಖ ಮಲ್ಲು ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.