

ಮಲೇಬೆನ್ನೂರು: ಅಜ್ಜಯ್ಯನ ಸನ್ನಿಧಿಯಲ್ಲಿ ಶುಕ್ರವಾರ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಶ್ರೀ ಕರಿಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಭಕ್ತರು ಸ್ನಾನಘಟ್ಟದಲ್ಲಿ ಸ್ನಾನ ಮಾಡಿದರು. ಘಟ್ಟದ ದಡದಲ್ಲಿ ಕರಿಬಸವೇಶ್ವರ ಅಜ್ಜಯ್ಯ, ಆಂಜನೇಯ, ಪರಮೇಶ್ವರರ ಚಿತ್ರಗಳನ್ನು ಇಟ್ಟು ಕಳಸ ಹೂಡಿ, ಅರಿಷಿಣ, ಚಂದನ ಹಚ್ಚಿ, ತೆಂಗಿನ ಕಾಯಿ ಒಡೆದು, ಬಾಳೆಹಣ್ಣು ನೈವೇದ್ಯ ಅರ್ಪಿಸಿದರು.
ತಲೆ ಮೇಲೆ ಕಳಸ ಹೊತ್ತು ಕೈಯಲ್ಲಿ ಆರತಿ ಹಿಡಿದ ಭಕ್ತರು ಪೂಜೆ ಸಲ್ಲಿಸಿದರು. ಭೂತ ಪ್ರೇತಗಳ ನಿವಾರಣೆ, ಆರೋಗ್ಯ, ಸಂತಾನದ ಬಗ್ಗೆ ಅಜ್ಜಯ್ಯನಲ್ಲಿ ಹರಕೆ ಮಾಡಿಕೊಂಡರೆ ಖಂಡಿತ ಈಡೇರಿಸುತ್ತಾನೆ ಎಂಬುದು ಭಕ್ತರ ನಂಬಿಕೆ.
ಈ ಹಿಂದೆ ಹರಕೆ ಮಾಡಿಕೊಂಡ ಭಕ್ತರು ಪರಿಹಾರ ಕಂಡರೆ ಸಂಸಾರ ಸಮೇತ ಸನ್ನಿಧಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಅಂಗಡಿಗಳಲ್ಲಿ ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು. ದೇವಸ್ಥಾನದ ಟ್ರಸ್ಟ್ ಕಮಿಟಿ ವತಿಯಿಂದ ಅನ್ನದಾಸೋಹ ಏರ್ಪಡಿಸಲಾಗಿತ್ತು.