

ಹರಿಹರ: ಸತತ ಮಳೆಯಾಗುತ್ತಿರವ ಕಾರಣ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ದಿನೇ ದಿನೆ ಹೆಚ್ಚಳವಾಗುತ್ತಿದ್ದು ಇದರ ಪರಿಣಾಮ ಹರಿಹರ ತಾಲೂಕಿನ ಉಕ್ಕಡಗಾತ್ರಿ ಮತ್ತು ಫತ್ಯಾಪುರ ನಡುವಿನ ರಸ್ತೆ ಮುಳುಗಡೆಯಾಗಿದೆ.
ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ ತುಂಗಭದ್ರಾ ನದಿಗೆ ನೀರು ಬಿಡಲಾಗಿದೆ.
ಮಂಗಳವಾರ ಸಂಜೆಯಿಂದಲೇ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿತ್ತು. ಬುಧವಾರ ಬೆಳಗ್ಗೆ ಸಂಪೂರ್ಣ ಏರಿಕೆಯಾಗಿ ನದಿ ಮೈದುಂಬಿ ಹರಿಯುತ್ತಿದೆ. ಇದರ ಪರಿಣಾಮ ಉಕ್ಕಡಗಾತ್ರಿ ಮತ್ತು ಫತ್ಯಾಪುರ ನಡುವಿನ ರಸ್ತೆ ಮುಳುಗಡೆ ಜತೆಗೆ ಪುಣ್ಯಕ್ಷೇತ್ರ ಕರಿಬಸವೇಶ್ವರ ದೇವಸ್ಥಾನದ ಸ್ನಾನಘಟ್ಟವೂ ಮುಳುಗಿದೆ.
ಉಕ್ಕಡಗಾತ್ರಿ ಕರಿಬಸವೇಶ್ವರ ದೇವಸ್ಥಾನದ ಸಮಿತಿಯವರು ಮುಂಜಾಗೃತ ಕ್ರಮವಾಗಿ ಸ್ನಾನಘಟ್ಟದ ಬಳಿ ಕಬ್ಬಿಣದ ಗೇಟ್‌ನ್ನು ಹಾಕಿ ಬರುವ ಭಕ್ತರಿಗೆ ನದಿಯಲ್ಲಿ ಸ್ನಾನಕ್ಕೆ ಇಳಿಯದಂತೆ ಅಲ್ಲಲ್ಲಿ ಫಲಕಗಳನ್ನು ಹಾಕಿದ್ದಾರೆ.
ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ನದಿಪಾತ್ರದ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು. ನದಿಗೆ ಇಳಿಯುವುದು, ಈಜಾಡುವುದು, ಜಾನುವಾರುಗಳನ್ನು ನದಿಪಾತ್ರದಲ್ಲಿ ಮೇಯಿಸಲು ಬಿಡದಂತೆ ಹಾಗೂ ಮಕ್ಕಳ ಮೇಲೆ ನಿಗಾ ವಹಿಸುವಂತೆ ತಾಲೂಕು ಆಡಳಿತದ ಸೂಚನೆ ಪ್ರಕಾರ ಗ್ರಾಮ ಪಂಚಾಯಿತಿಯಿಂದ ಟಾಮ್ ಟಾಮ್ ಹೊಡಿಸಲಾಗುತ್ತಿದೆ.
ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ಮೇಲಧಿಕಾರಿಗಳಿಗೆ ವರದಿ ನೀಡಿದ್ದಾರೆ. ಮುಂಜಾಗೃತವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹೊಳೆಸಿರಿಗೆರೆಯಲ್ಲಿ ಅಧಿಕ ಮಳೆ: ಮಳೆಯ ವಿವರ: ಹರಿಹರ 4, ಕೊಂಡಜ್ಜಿ 4.2, ಹೊಳೆಸಿರಿಗೆರೆ 8, ಮಲೇಬೆನ್ನೂರು 5.6 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.
ಉಕ್ಕಡಗಾತ್ರಿ ಅಜ್ಜಯ್ಯನ ದೇಗುಲ ಜಲಾವೃತ: ಮಲೇಬೆನ್ನೂರು: ಕಳೆದ ವಾರದಿಂದ ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ಸಮೀಪದ ಉಕ್ಕಡಗಾತ್ರಿಯಲ್ಲಿ ನದಿ ತೀರದ ಜಮೀನು- ತೋಟಗಳು ಜಲಾವೃತಗೊಂಡಿವೆ. ಕರಿಬಸಜ್ಜಯ್ಯನ ದೇಗುಲದ ಸುತ್ತಲೂ ಬುಧವಾರ ನೀರು ಆವರಿಸಿದ್ದು, ಅಪಾಯದ ಭೀತಿ ಎದುರಾಗಿದೆ.
ತುಂಗಭದ್ರಾ ನದಿಯಲ್ಲಿ ಮಂಗಳವಾರ ರಾತ್ರಿಯಿಂದ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ಉಕ್ಕಡಗಾತ್ರಿ- ಪತ್ತೆಪುರ ರಸ್ತೆ ಇಕ್ಕೆಲದ ಜಮೀನುಗಳಿಗೆ ನೀರು ನುಗ್ಗಿದೆ. ಮೆಕ್ಕೆಜೋಳ, ಭತ್ತ, ತರಕಾರಿ ಬೆಳೆ, ತೆಂಗಿನ ತೋಟಗಳು, ಕೃಷಿ ಪಂಪ್‌ಸೆಟ್‌ಗಳು ಜಲಾವೃತಗೊಂಡಿವೆ. ಲಕ್ಷಾಂತರ ರೂ. ಹಾನಿಯಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಶ್ರೀ ಕರಿಬಸವೇಶ್ವರ ಅಜ್ಜಯ್ಯನ ದೇವಾಲಯವನ್ನು ನದಿ ನೀರು ಸುತ್ತುವರಿದಿದ್ದು, ನದಿಪಾತ್ರದಲ್ಲಿದ್ದ ಜವಳ ಮಂದಿರ ಹಾಗೂ ಸ್ನಾನ ಘಟ್ಟಗಳು ಸಂಪೂರ್ಣ ಮುಳುಗಡೆಯಾಗಿವೆ. ದೇವಾಲಯ ಎತ್ತರದ ಸ್ಥಳದಲ್ಲಿರುವುದರಿಂದ ನದಿ ಈ ಹಿಂದೆ ಅಪಾಯ ಮಟ್ಟ ಮೀರಿದಾಗಲೂ ದೇವಾಲಯ ಪ್ರವೇಶಿಸಿಲ್ಲ.