

ಪ್ರಕಾಶ್ ಮಂಜೇಶ್ವರ, ಮಂಗಳೂರು
ದುರ್ಬಲ ವರ್ಗದ ಜನ ಲಾಕ್‌ಡೌನ್ ಸಂಕಷ್ಟದ ದಿನಗಳನ್ನು ಎದುರಿಸಲು ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಹಣ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ.
ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಹಾಗೂ ಫಲಾನುಭವಿಗಳ ಮೊಬೈಲ್ ನಂಬರ್ ಸೇರ್ಪಡೆಯಾಗಿರುವ ಎಲ್ಲ ಫಲಾನುಭವಿಗಳ ಖಾತೆಗೆ ಹಣ ತಲುಪಿದೆ. ಆದರೆ ಇವು ಜೋಡಣೆಯಾಗದ ಸಣ್ಣ ಪ್ರಮಾಣದ ಫಲಾನುಭವಿಗಳಿಗೆ ಮಾತ್ರ ಸಮಸ್ಯೆಯಾಗಿದೆ ಎಂದು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಚೀಫ್ ರೀಜನಲ್ ಮ್ಯಾನೇಜರ್ ರಮೇಶ್ ‘ವಿಜಯವಾಣಿ’ ಗೆ ತಿಳಿಸಿದ್ದಾರೆ.
ದಕ್ಷಿಣ ಕನ್ನಡದ 48,700 ಮತ್ತು ಉಡುಪಿಯ 28,000 ಬಡ ಕುಟುಂಗಳು ಯೋಜನೆಯ ಫಲಾನುಭವಿಗಳಾಗಲು ಅರ್ಹತೆ ಪಡೆದಿದ್ದು, ಬಹುಪಾಲು ಜನರು ಈಗಾಗಲೇ ಸೌಲಭ್ಯ ಪಡೆದಿದ್ದಾರೆ ಎಂದು ಉಡುಪಿ ಜಿಲ್ಲಾ ನೋಡೆಲ್ ಅಧಿಕಾರಿ ರೋಹಿತ್ ತಿಳಿಸಿದ್ದಾರೆ.
ಕೆಲ ಫಲಾನುಭವಿಗಳು ನೇರವಾಗಿ ಅಡುಗೆ ಅನಿಲ ಏಜೆನ್ಸಿಯವರನ್ನು ಸಂಪರ್ಕಿಸಿ ಉಚಿತ ಗ್ಯಾಸ್ ಒದಗಿಸುವಂತೆ ಕೇಳುತ್ತಿದ್ದಾರೆ. ಈ ಕ್ರಮ ಸರಿಯಲ್ಲ. ವಾಸ್ತವವಾಗಿ ಏಪ್ರಿಲ್, ಮೇ ಮತ್ತು ಜೂನ್(ಮೂರು ತಿಂಗಳು) ಆಧಾರ್ ಜೋಡಿಸಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಕೇಂದ್ರದ ಹಣ ಜಮಾವಣೆಯಾಗಲಿದೆ. ಫಲಾನುಭವಿಗಳು ತಮ್ಮ ಖಾತೆ ಸೇರಿದ ಗ್ಯಾಸ್ ರೀಫಿಲ್‌ನ ಪೂರ್ಣ ಹಣವನ್ನು ಪಡೆದು ಗ್ಯಾಸ್ ಏಜನ್ಸಿಯವರಿಗೆ ನೀಡಿ ಸಿಲಿಂಡರ್ ಪಡೆದುಕೊಳ್ಳಬೇಕಾಗಿದೆ.
ನಿರಂತರತೆ ಮುಖ್ಯ
ಮೂರು ತಿಂಗಳು ನಾಲ್ಕು ಅಥವಾ ಐದು ತಾರೀಕಿನ ಒಳಗೆ ಯೋಜನೆಯ ಎಲ್ಲ ಫಲಾನುಭವಿಗಳ ಖಾತೆಗೆ ಅಡುಗೆ ಅನಿಲ ರೀಫಿಲ್ ಮಾಡಿಕೊಳ್ಳಲು ಆವಶ್ಯ ಮೊತ್ತವನ್ನು ಕೇಂದ್ರ ಸರ್ಕಾರ ಪಾವತಿ ಮಾಡುತ್ತದೆ. ಆದರೆ ಒಂದು ತಿಂಗಳು ದೊರೆತ ಹಣದಿಂದ ಅಡುಗೆ ಅನಿಲ ಪಡೆದವರ ಬ್ಯಾಂಕ್ ಖಾತೆಗೆ ಮಾತ್ರ ನಂತರದ ತಿಂಗಳ ಹಣ ಜಮೆಯಾಗಲಿದೆ. ಯೋಜನೆ ದುರುಪಯೋಗ ತಡೆಯಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಫಲಾನುಭವಿಗಳಿಗೆ ನಿಬಂಧನೆ ಫಲಾನುಭವಿಗಳು ನೋಂದಾಯಿತ ಮೊಬೈಲ್ ಸಂಖ್ಯೆಯಿಂದಲೇ ಬುಕಿಂಗ್ ಮಾಡಬೇಕು. ನೋಂದಾಯಿತ ಸಂಖ್ಯೆಯನ್ನು ಗ್ರಾಹಕರು ಯೋಜನೆ ಅವಧಿಯ ಮೂರು ತಿಂಗಳು ಬದಲಾಯಿಸುವಂತಿಲ್ಲ. ಸಿಲಿಂಡರ್ ಪಡೆಯುವ ಸಂದರ್ಭ ಗ್ರಾಹಕರು ತಮ್ಮ ಮೊಬೈಲ್‌ಗೆ ಬಂದಿರುವ ಒಟಿಪಿಯನ್ನು (ವನ್ ಟೈಂ ಪಾಸ್‌ವರ್ಡ್)ಕಡ್ಡಾಯವಾಗಿ ಸಿಲಿಂಡರ್ ವಿತರಣೆ ಮಾಡುವ ವ್ಯಕ್ತಿಗೆ ನೀಡಬೇಕು. ಸಿಲಿಂಡರ್ ಪಡೆದ ಬಗ್ಗೆ ದಾಖಲಿಸಲು ಪಾಸ್‌ಬುಕ್ ಅನ್ನು ವಿತರಣೆ ನಡೆಸುವ ವ್ಯಕ್ತಿಗೆ ಒದಗಿಸಬೇಕು. ದೇಶದ ಒಟ್ಟು ಎಂಟು ಕೋಟಿ ಕುಟುಂಬಗಳು ಇದೇ ಏಪ್ರಿಲ್ ಒಂದರಿಂದ ಜೂನ್ 30 ತನಕ ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ.
ಉಜ್ವಲ ಉಚಿತ ಅಡುಗೆ ಅನಿಲ ಯೋಜನೆಯ ಹಣ ಅರ್ಹ ಎಲ್ಲ ಫಲಾನುಭವಿಗಳ ಖಾತೆಗೆ ಬಿಡುಗಡೆಯಾಗಿದೆ. ಈ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಈ ತಿಂಗಳು ಯೋಜನೆ ಹಣ ಬಳಸಿ ಅಡುಗೆ ಅನಿಲ ಪಡೆದವರಿಗೆ ಮೇ ತಿಂಗಳಲ್ಲಿ ಎರಡನೇ ಕಂತಿನ ಹಣ ಜಮೆ ಆಗಬಹುದು. ರಮೇಶ್, ಚೀಫ್ ರೀಜನಲ್ ಮ್ಯಾನೇಜರ್, ಎಚ್‌ಪಿಸಿಎಲ್