

ಉಜ್ಜಿನಿ: ಮುಂಗಾರು ಹಂಗಾಮಿನಲ್ಲಿ ಮಳೆರಾಯ ಮುನಿಸಿಕೊಂಡಿದ್ದು, ಬಿತ್ತನೆಗಾಗಿ ಬೀಜ ಖರೀದಿಸಲು ರೈತರು ಹಿಂದೇಟು ಹಾಕುವಂತಾಗಿದೆ. ವರುಣನ ವಿಳಂಬದಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದೆ.
ತಾಲೂಕಿನಲ್ಲಿ ಒಟ್ಟು 38,523 ಹೆಕ್ಟೇರ್ ನೀರಾವರಿ ಹಾಗೂ ಮಳೆಯಾಶ್ರಿತ ಕೃಷಿ ಭೂಮಿ ಇದೆ. ಮಳೆಯಾಶ್ರಿತ ಭೂಮಿಯಲ್ಲಿ ಇಲ್ಲಿವರೆಗೂ ಬಿತ್ತನೆಯಾಗಿಲ್ಲ. ಮಳೆ ಬರುವ ನಿರೀಕ್ಷೆಯಿಂದ ಬಿತ್ತಲಾಗಿದ್ದ ಬೆಳೆಗಳು ಒಣಗಳು ಆರಂಭಿಸಿವೆ.
ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಜೋಳ- 560 ಹೆಕ್ಟೇರ್‌ನಲ್ಲಿ, ಮೆಕ್ಕೆಜೋಳ-26, 954 ಹೆಕ್ಟೇರ್, ಸೂರ್ಯಕಾಂತಿ-1496 ಹೆಕ್ಟೇರ್, ಶೇಂಗಾ-870 ಹೆಕ್ಟೇರ್, ರಾಗಿ-3900 ಹೆಕ್ಟೇರ್, ನವಣೆ-400 ಹೆಕ್ಟೇರ್, ಈರುಳ್ಳಿ-1882 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ ಇದುವರೆಗೆ ಶೇ.9 ಮಾತ್ರ ಭೂಮಿ ಉಳುಮೆಯಾಗಿದೆ.
ಭೂಮಿಯನ್ನು ಹಸನುಗೊಳಿಸಿ ಬಿತ್ತನೆಗಾಗಿ ಕಾಯ್ದಿರುವ ರೈತರು, ಹನಿ ಮಳೆಗಾಗಿ ಚಡಪಡಿಸುವ ಸ್ಥಿತಿ ಬಂದಿದೆ. ತಾಲೂಕಿನ ಬಹುತೇಕ ಕೆರೆಗಳಲ್ಲಿ ನೀರಿನ ಪ್ರಮಾಣ ಕುಸಿತ ಕಂಡಿದೆ. ಇನ್ನು ಕೆಲ ಕೆರೆಗಳು ಬತ್ತಿ ಹೋಗಿವೆ.
ಅಂತರ್ಜಲದ ಮಟ್ಟ ಕುಸಿದು, ನೀರಿನ ಅಭಾವ ತಲೆದೋರುವ ಸನ್ನಿವೇಶ ಸೃಷ್ಟಿಯಾಗಿದೆ. ಹತ್ತು ದಿನದೊಳಗೆ ಮಳೆ ಬರದಿದ್ದರೆ ಕಷ್ಟದ ವಾತಾವರಣ ನಿರ್ಮಾಣವಾಗಲಿದೆ ಎಂದು ರೈತರು ಅಲವತ್ತುಕೊಂಡರು.