ಉಗ್ಗೆಹಳ್ಳಿ ಕಾಲನಿ ಜಲಾವೃತವಾಗುವ ಸಂಭವ

MDG ugeey
ಮೂಡಿಗೆರೆ ತಾಲೂಕಿನ ಕಲ್ಲುಗುಡ್ಡ ಗ್ರಾಮದಲ್ಲಿ ಮನೆ ಕುಸಿದಿರುವುದು.
Published on

ಮೂಡಿಗೆರೆ: ತಾಲೂಕಿನಲ್ಲಿ ಗುರುವಾರವೂ ಬಿಡುವು ನೀಡದೆ ಮಳೆಯಾಯಿತು. ಭಾರಿ ಮಳೆಗೆ ಮನೆಗಳು ಕುಸಿದಿವೆ. ಮರಗಳು ಬುಡಮೇಲಾಗಿವೆ. ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಉಗ್ಗೆಹಳ್ಳಿ ಗ್ರಾಮದ ಕಾಲನಿ ಜಲಾವೃತವಾಗುವ ಸಾಧ್ಯತೆಯಿದೆ.

ಕಲ್ಲುಗುಡ್ಡ ಗ್ರಾಮದ ಈರಮ್ಮ ಎಂಬುವರ ಮನೆ, ಗುತ್ತಿ ಗ್ರಾಮದ ಗಿರಿಜಮ್ಮ ಅವರ ಮನೆ, ಪಟ್ಟಣದ ತತ್ಕೊಳ ರಸ್ತೆಯಲ್ಲಿರುವ ಅಲ್ತಾಫ್ ಹುಸೇನ್ ಮನೆ ಸಂಪೂರ್ಣ ಕುಸಿದಿದೆ. ಬೆಳಗಲಿ ಗ್ರಾಮದಲ್ಲಿ ಗುಡ್ಡ ಕುಸಿದು ಶಕುಂತಲಾ ಎಂಬುವವರ ನಿರ್ಮಾಣ ಹಂತದ ಮನೆಗೆ ಹಾನಿಯಾಗಿದೆ.
ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು 6 ದಿನದಿಂದ ಜನ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಹೇಮಾವತಿ, ಜಪಾವತಿ, ಸುಂಡೆಕೆರೆ ಹಳ್ಳ, ಸುಣ್ಣದ ಹಳ್ಳ ಸೇರಿ ಎಲ್ಲ ಹಳ್ಳ, ನದಿಗಳು ಮೈದುಂಬಿ ಹರಿಯುತ್ತಿವೆ. ಬಿಳಗುಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯ ಸಾಲುಮರ ಬಿದ್ದು ಪ್ರಯಾಣಿಕರ ತಂಗುದಾಣ ಜಖಂಗೊಂಡಿದೆ. ಎರಡು ದಿನದ ಹಿಂದೆ ಬಿಳಗುಳ ಗ್ರಾಮದಲ್ಲಿ ಮರಬಿದ್ದು ಟ್ರಾನ್ಸ್‌ಫಾರ್ಮರ್ ಹಾಗೂ 4 ಕಂಬಗಳು ಜಖಂಗೊಂಡಿದ್ದವು. ಅವುಗಳನ್ನು ಇದುವರೆಗೂ ಸರಿಪಡಿಸಿಲ್ಲ. ಗೆಂಡೆಹಳ್ಳಿ-ಬೇಲೂರು ರಸ್ತೆಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಸೇತುವೆ ಕೊಚ್ಚಿಕೊಂಡು ಹೋಗಿ ವಾಹನ ಸಂಚಾರ ಬಂದ್ ಆಗಿತ್ತು. ಸಮೀಪದಲ್ಲಿ ಹೊಸ ಸೇತುವೆ ನಿರ್ಮಾಣ ಹಂತದಲ್ಲಿದೆ. ಅದಕ್ಕೆ ಅಧಿಕಾರಿಗಳು ತರಾತುರಿಯಲ್ಲಿ ಜಲ್ಲಿಕಲ್ಲು ಹಾಗೂ ಎಂ.ಸ್ಯಾಂಡ್ ಸುರಿದು ರಸ್ತೆ ನಿರ್ಮಿಸಿ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.
ಉಗ್ಗೆಹಳ್ಳಿ ಗ್ರಾಮದ ಕಾಲನಿ ತಗ್ಗು ಪ್ರದೇಶದ ಗದ್ದೆಯ ಬದಿಯಲ್ಲಿದೆ. ಪಕ್ಕದಲ್ಲಿ ಹೇಮಾವತಿ ನದಿ ಹರಿಯುತ್ತಿದೆ. ನದಿ ಉಕ್ಕಿದಾಗ ಕಾಲನಿಯ 51 ಮನೆಗಳು ಜಲಾವೃತವಾಗುತ್ತವೆ. 1993ರಿಂದ ನಾಲ್ಕೈದು ಬಾರಿ ಕಾಲನಿ ಜಲಾವೃತವಾಗಿದೆ. 2019ರ ಅತಿವೃಷ್ಟಿಯಿಂದ ಕಾಲನಿ ಜಲಾವೃತವಾದಾಗ 6 ಮನೆ ಸಂಪೂರ್ಣ ಕುಸಿದವು. 30 ಮನೆಗಳಿಗೆ ಭಾಗಶಃ ಹಾನಿಯಾಗಿತ್ತು. ಅಲ್ಲಿನ ನಿವಾಸಿಗಳನ್ನು ಗೋಣಿಬೀಡು ಸರ್ಕಾರಿ ಹಾಸ್ಟೆಲ್‌ನಲ್ಲಿ ನಿರ್ಮಿಸಿದ್ದ ಕಾಳಜಿ ಕೇಂದ್ರದಲ್ಲಿ ಒಂದು ತಿಂಗಳು ಇರಿಸಲಾಗಿತ್ತು. ಕಾಲನಿಯ 51 ಕುಟುಂಬಗಳಿಗೆ ಕಿರುಗುಂದ ಗ್ರಾಪಂ ಬೆಟ್ಟದಮನೆ ಗ್ರಾಮದ ಸುರಕ್ಷಿತ ಸ್ಥಳದಲ್ಲಿ ಮನೆ ನಿರ್ಮಾಣ ಕಾಮಗಾರಿ ಆರಂಭಗೊಂಡು 5 ವರ್ಷ ಕಳೆದರೂ ಮನೆ ನಿರ್ಮಿಸಿಲ್ಲ. ಈ ಬಾರಿ ಮತ್ತೆ ಕಾಲನಿ ಜಲಾವೃತವಾಗುವ ಸಾಧ್ಯತೆ ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net