ಅಮಾನಿಹೊಸಕೆರೆ ತೋಟಗಳಿಗೆ ನುಗ್ಗಿದ ಯುಜಿಡಿ ತ್ಯಾಜ್ಯ ನೀರು

23Tmk_Ayyo_Prblm
Published on

ತುಮಕೂರು: ಸಂಸದ ಜಿ.ಎಸ್.ಬಸವರಾಜು ಹುಟ್ಟೂರು ಗಂಗಸಂದ್ರದ ಬಳಿಯ ಅಮಾನಿಹೊಸಕೆರೆ ತೋಟ ತುಡಿಕೆಗಳಿಗೆ ನಗರದ ಯುಜಿಡಿ ತ್ಯಾಜ್ಯ ನೀರು ನುಗ್ಗಿ ಜನರ ಬದುಕೇ ದುಸ್ತರವೆನಿಸಿದೆ.


ಎರಡು ವರ್ಷಗಳ ಹಿಂದೆ ವಾರ್ಡ್ ಸಂಖ್ಯೆ 11ರ ಗಂಗಸಂದ್ರದ ಸರ್ವೇ ನಂ.39ರಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲೂೃಎಸ್‌ಎಸ್‌ಬಿ) ನಿರ್ಮಿಸಿದ್ದ ಯುಜಿಡಿ ವೆಟ್‌ವೆಲ್‌ನಿಂದ ಉಂಟಾಗಿರುವ ಅವಾಂತರದಿಂದ ಗ್ರಾಮಾಂತರ ಕ್ಷೇತ್ರಕ್ಕೆ ಸೇರಿರುವ ಅಮಾನಿಹೊಸಕೆರೆಯ ಜನರ ಬದುಕು ಹೀನಾಯವೆನಿಸಿದೆ. ಹತ್ತಾರು ಎಕರೆ ತೆಂಗು-ಅಡಕೆ, ಬಾಳೆ ತೋಟಗಳು ತ್ಯಾಜ್ಯ ನೀರಿನಿಂದ ತುಂಬಿಹೋಗಿವೆ. ಇದರಿಂದಾಗಿ ತೆಂಗು-ಅಡಕೆ, ಬಾಳೆ ಕೊಳೆಯುತ್ತಿವೆ. ಅಮಾನಿಹೊಸಕೆರೆಯಲ್ಲಿ 15ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಯುಜಿಡಿ ತ್ಯಾಜ್ಯ ನೀರು ಮಳೆನೀರಿನ ಜತೆ ಜನವಸತಿ ಪ್ರದೇಶಕ್ಕೆ ನುಗ್ಗಿ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಧಾರಾಕಾರ ಮಳೆ ಜನರ ಬದುಕನ್ನೇ ನರಕವನ್ನಾಗಿಸಿದೆ. ಪಾಲಿಕೆಯಾಗಲಿ, ತಾಲೂಕು ಆಡಳಿತವಾಗಲೀ ಈ ಜನರ ಕೂಗಿಗೆ ಈವರೆಗೆ ಸ್ಪಂದಿಸಿಲ್ಲ.

ಡಿಸಿಗೆ ದೂರು: ಯುಜಿಡಿ ವೆಟ್‌ವೆಲ್‌ನಿಂದ ಭೀಮಸಂದ್ರ ಎಸ್‌ಟಿಪಿ ಘಟಕಕ್ಕೆ ತ್ಯಾಜ್ಯ ನೀರು ಪಂಪ್ ಮಾಡಲಿದ್ದು, ಇಲ್ಲಿ ಸೂಕ್ತ ನಿರ್ವಹಣೆಯಿಲ್ಲದೆ ತ್ಯಾಜ್ಯ ನೀರು ತೋಟ-ತುಡಿಕೆಗಳಿಗೆ ನುಗ್ಗುತ್ತಿದೆ. ಹಾಗಾಗಿ, ಬೆಳೆದುನಿಂತಿರುವ ತೋಟಗಳು ಸಂಪೂರ್ಣ ಹಾಳಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೂ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೂ ಇತ್ತ ಕಡೆ ತಿರುಗಿನೋಡಿಲ್ಲ. ಅಧಿಕಾರಿಗಳ ನಿರ್ಲಕ್ಷೃದಿಂದ ಜನರು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ. ನೀರು ಕಲುಷಿತಗೊಂಡು ಜನರು ಪ್ರಾಣಾಪಾಯಕ್ಕೆ ಗುರಿಯಾಗುವ ಮುನ್ನ ಪಾಲಿಕೆ ಎಚ್ಚೆತ್ತುಕೊಳ್ಳಬೇಕಿದೆ.

ಯುಜಿಡಿ ವೆಟ್‌ವೆಲ್ ಸೂಕ್ತ ನಿರ್ವಹಣೆ ಇಲ್ಲದೆ ಮಳೆ ನೀರಿನ ಜತೆ ತುಮಕೂರಿನ ತ್ಯಾಜ್ಯ ನೀರೆಲ್ಲಾ ತೋಟಗಳಿಗೆ ನುಗ್ಗುತ್ತಿದೆ. ಇದರಿಂದ ತೆಂಗು-ಅಡಕೆ, ಬಾಳೆ ಕೊಳೆತುಹೋಗುತ್ತಿವೆ. ಇನ್ನೂ ಮನೆಗಳಿಗೂ ತ್ಯಾಜ್ಯ ನೀರು ನುಗ್ಗಿ ನಮ್ಮ ಬದುಕು ಹೀನಾಯವೆನಿಸಿದೆ. ಹತ್ತಾರುಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದೂರು ಕೊಟ್ಟರು ಯಾರೊಬ್ಬರು ಗಮನಹರಿಸಿಲ್ಲ.
- ಕೆ.ಎಸ್.ನಾಗರಾಜು ಸ್ಥಳೀಯ ನಿವಾಸಿ

ಕ್ಯಾತಸಂದ್ರದಿಂದ ಆರಂಭವಾಗುವ ರಿಂಗ್ ರಸ್ತೆಯ ಎರಡು ಭಾಗಗಳ ಬಡಾವಣೆಯ ಯುಜಿಡಿ ಸಂಪರ್ಕವನ್ನು ಗಂಗಸಂದ್ರದ ಬಳಿ ನಿರ್ಮಿಸಿರುವ ವೆಟ್‌ವೆಲ್‌ಗೆ ಕಲ್ಪಿಸಲಾಗಿದೆ. ಇಲ್ಲಿಂದ ಭೀಮಸಂದ್ರ ಎಸ್‌ಟಿಪಿ ಘಟಕಕ್ಕೆ ಪಂಪ್ ಮಾಡಲಾಗುವುದು. ಮಳೆ ನೀರು ಯುಜಿಡಿಗೆ ಸೇರಿ ಈ ಸಮಸ್ಯೆ ಉದ್ಭವಿಸಿದೆ. ವೆಟ್‌ವೆಲ್ ಅನ್ನು ಪಾಲಿಕೆಗೆ ಹಸ್ತಾಂತರಿಸಲಾಗಿದ್ದು ಸೂಕ್ತ ನಿರ್ವಹಣೆ ಮಾಡಬೇಕಿದೆ.
-ಕಾಶಿವಿಶ್ವನಾಥ್ಎಇಇ ಕೆಯುಡಬ್ಲೂೃಎಸ್‌ಎಸ್‌ಬಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net