

ತಿಪಟೂರು: ಯುಜಿಡಿ ತ್ಯಾಜ್ಯದಿಂದ ತಿಪಟೂರು ನಗರದ ಜನತೆಗೆ ಸದ್ಯಕ್ಕೆ ಮುಕ್ತಿ ಇಲ್ಲದಂತಾಗಿದ್ದು, ಈ ಕಲುಷಿತ ನಗರಕ್ಕೆ ಕುಡಿಯುವ ನೀರು ಪೂರೈಸುವ
ಈಚನೂರು ಕೆರೆ ಸೇರುವ ಅಪಾಯ ಎದುರಾಗಿದೆ.
ಹೌದು...ಯಾವುದೇ ಕಾರಣಕ್ಕೂ ಇನ್ನು ಮುಂದೆ ಯುಜಿಡಿ ತ್ಯಾಜ್ಯ ಕುಡಿಯುವ ನೀರಿನ ಕೆರೆಗೆ ಸೇರುವ ಸಂಭವ ಇಲ್ಲವೇ ಇಲ್ಲವೆಂದು ಜನತೆಗೆ ಶಾಸಕರು ಮತ್ತು ನಗರಾಯುಕ್ತರು ನೀಡಿದ ಭರವಸೆ ಶುಕ್ರವಾರ ಅರ್ಧ ಗಂಟೆ ಸುರಿದ ಮಳೆಯಲ್ಲಿ ಕೊಚ್ಚಿಕೊಂಡುಹೋಗಿದೆ.
ಎಸ್ಟಿಪಿ ಟಕಕ್ಕೆ ಸಾಗಿಸುವ ಯುಜಿಡಿ ಛೇಂಬರ್ಗಳು ಉಕ್ಕಿ ಹರಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅವ್ಯವಸ್ಥೆ ಸೃಷ್ಟಿಸಿದ್ದು, ಈ ತ್ಯಾಜ್ಯ ಹಳ್ಳ, ಕೊಳ್ಳದ
ಮೂಲಕ ಹಿಂಡಿಸ್ಕೆರೆಗೆ ಹರಿಯುತ್ತಿದ್ದು, ಮುಂದೆ ಈಚನೂರು ಕೆರೆ ಸೇರುವ ಅಪಾಯ ಎದುರಾಗಿದೆ.
ಜು.26ರಂದು ಶಾಸಕರ ಕಚೇರಿಯಲ್ಲಿ ಮಾತಾಡಿದ್ದ ಆಯುಕ್ತ ವಿಶ್ವೇಶ್ವರ ಬದರಗಡೆ, ಕಳೆದ ವರ್ಷ ಅಚಾತುರ್ಯದಿಂದ ಯುಜಿಡಿ ತ್ಯಾಜ್ಯ ಕುಡಿಯುವ ನೀರು ಸಂಗ್ರಹಾಗಾರ ಈಚನೂರು ಕೆರೆ ಸೇರಿದ್ದು ಸತ್ಯ. ಈಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಗಾಂಧಿನಗರ ಪ್ರದೇಶದಿಂದ ಹರಿದು
ಬರುತ್ತಿದ್ದ ಯುಜಿಡಿ ತ್ಯಾಜ್ಯ ರಾಜಕಾಲುವೆಗೆ ಸೇರದಂತೆ ನಗರ ಸಮೀಪದ ಗೊರಗೊಂಡನಹಳ್ಳಿ ಬಳಿ ಪ್ರತ್ಯೇಕವಾಗಿ ವೆಟ್ವೆಲ್ ನಿರ್ಮಿಸಿ, ತ್ಯಾಜ್ಯ ನೀರನ್ನು ಬೇರ್ಪಡಿಸಲಾಗುತ್ತೆ. ಈಡೇನಹಳ್ಳಿಯ ವೆಟ್ವೆಲ್ಗೂ ಸಮರ್ಪಕ ಮೋಟಾರ್ ಅಳವಡಿಸಲಾಗಿದ್ದು. ಇನ್ನು ಮುಂದೆ ಯುಜಿಡಿ ಛೇಂಬರ್ಗಳು ಉಕ್ಕಿ ಹರಿದು ರಸ್ತೆ, ಹಳ್ಳ ಸೇರದಂತೆ ಎಚ್ಚರ ವಹಿಸಲಾಗಿದೆ ಎಂದು ಹೇಳಿದ್ದರು. ಭರವಸೆ ನೀಡಿದ 15 ದಿನದಲ್ಲಿ ಛೇಂಬರ್ನಿಂದ ಉಕ್ಕಿಹರಿದ
ದುರ್ನಾತ ಬೀರುವ ಯುಜಿಡಿ ತ್ಯಾಜ್ಯ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಹರಿದು ಸಂಚಾರ ಅವ್ಯವಸ್ಥೆ ಸೃಷ್ಟಿಸಿದೆ.
ಮಹತ್ವಾಕಾಂಕ್ಷೆ ಯೋಜನೆ ನನೆಗುದಿ
ಆರೋಗ್ಯ ಮತ್ತು ಪರಿಸರ ನೈರ್ಮಲ್ಯದ ಪಾಠ ಹೇಳುವ ನಗರಸಭೆ, 2013ರಲ್ಲಿ ಅಂದಾಜು 42 ಕೋಟಿ ರೂ. ವೆಚ್ಚದ ಯುಜಿಡಿ ಯೋಜನೆ ಪ್ರಾರಂಭಿಸಿತ್ತು. 2013ರಲ್ಲಿ ಮೊದಲ ಹಂತ ಮತ್ತು 2019-20ರಲ್ಲಿ ಎರಡನೇ ಹಂತದಲ್ಲಿ ಕಾಮಗಾರಿ ಮುಗಿಯಬೇಕಿತ್ತು. ಆದರೆ ಯೋಜನೆ ಪ್ರಾರಂಭವಾಗಿ 12 ವರ್ಷಗಳಾದರೂ ನಗರದಾದ್ಯಂತ ಯುಜಿಡಿ ಸಂಪರ್ಕ ಪಡೆದಿರುವ ಮನೆಗಳು ಕೇವಲ 4,800. ಇನ್ನೂ 6 ಸಾವಿರಕ್ಕೂ ಹೆಚ್ಚು ಮನೆಗಳು ಯುಜಿಡಿ ಸಂಪರ್ಕ ಪಡೆದಿಲ್ಲದಿರುವುದು ನಗರಸಭೆಯ ಕಾರ್ಯವೈಖರಿಗೆ ಸಾಯಾಗಿದೆ.
ಹೇಮೆ ನೀರಿನಿಂದ ವಂಚಿತ
ಈಚನೂರು ಕೆರೆ ಸಮೀಪದಲ್ಲೇ ಹೇಮಾವತಿ ನೀರು ಹರಿಯುತ್ತಿದ್ದರೂ ನಗರದ ಜನತೆಗೆ ಶುದ್ಧ ಹೇಮಾವತಿ ನೀರು ಇಲ್ಲದಂತಾಗಿದೆ. ಜನತೆಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ತಾಲೂಕು ಆಡಳಿತ ರ್ನಿಲಕ್ಷ$್ಯ ವಹಿಸಿದೆ. ರಸ್ತೆಯಲ್ಲಿ ಹರಿದು ಹಳ್ಳ ಸೇರಿದ ಯುಜಿಡಿ ತ್ಯಾಜ್ಯವನ್ನು ಸಾರ್ವಜನಿಕರು ಕಣ್ಣಾರೆ ನೋಡಿದ್ದಾರೆ. ಆದರೂ ನಾಲೆಯಿಂದ ನೇರವಾಗಿ ಪಂಪ್ ಮಾಡಿ ನೀರು ಕೊಡುತ್ತಿದ್ದೇವೆ. ನಮ್ಮನ್ನು ನಂಬಿ ಎಂದು ನಗರಸಭೆ ಜನರನ್ನು ನಂಬಿಸುವ ಪ್ರಯತ್ನ ಮಾಡುತ್ತಿದೆ. ಯುಜಿಡಿ ಸಂಪರ್ಕ ಪಡೆಯದ ಮನೆಗಳ ತ್ಯಾಜ್ಯ ಚರಂಡಿ ಮೂಲಕ ರಾಜಕಾಲುವೆ ಸೇರಿ ನಂತರ ಕುಡಿಯುವ ನೀರಿನ ಕೆರೆಗಳಿಗೆ ಸೇರುತ್ತದೆ. ಯುಜಿಡಿ ಸಂಪರ್ಕದ ಬಗ್ಗೆ ಅಧಿಕಾರಿಗಳು ನೀಡುವ ಹೇಳಿಕೆ ಗೊಂದಲ ಸೃಷ್ಟಿಸಿದೆ. ನಗರಾಯುಕ್ತರು 2638 ಮನೆಯ ಸಂಪರ್ಕ ಬಾಕಿ ಇದೆ ಎಂದರೆ, ಇನ್ನೋರ್ವ ಅಧಿಕಾರಿ 6 ಸಾವಿರ ಬಾಕಿ ಉಳಿದಿವೆ ಎನ್ನುತ್ತಾರೆ. ಇನ್ನೊಂದೆಡೆ 4 ಸಾವಿರ ಸಂಪರ್ಕ ಬಾಕಿ ಎಂದು ತೋರಿಸಲಾಗಿದೆ. ಈ ಮಧ್ಯೆ ಬಾಕಿ ಉಳಿದಿರುವ ಯುಜಿಡಿ ಸಂಪರ್ಕ ಮತ್ತು ಯುಜಿಡಿ ಯೋಜನೆಯನ್ನು ಮೇಲ್ದರ್ಜೆಗೇರಿಸಲು ಕರ್ನಾಟಕ ನಗರ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದಿಂದ 19 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಆಯುಕ್ತರು ರಜೆ ಮೇಲೆ ತೆರಳಿದ್ದಾರೆ. ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತಾಡಿ ಸೂಕ್ತ ಕ್ರಮ ವಹಿಸಲಾಗುವುದು. - ಕೆ.ಷಡಕ್ಷರಿ ಶಾಸಕ ತಿಪಟೂರು