

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಹೊಸ ಕೋರ್ಟ್ ಸಂಕೀರ್ಣದ ಸಮೀಪವಿರುವ ಬಿಆರ್ಟಿಎಸ್ ಬಸ್ ಟರ್ವಿುನಲ್ನ ಹಿಂಭಾಗದಲ್ಲಿ ಕಳೆದ ಹಲವು ದಿನಗಳಿಂದ ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಪರಿಸ್ಥಿತಿ ಇನ್ನಷ್ಟು ಅಸಹನೀಯವಾಗಿದೆ. ಮಳೆಯ ನೀರು ಯಾವುದೊ? ಒಳಚರಂಡಿ ಕೊಳಚೆ ನೀರು ಯಾವುದೊ ? ಎಂಬುದು ತಿಳಿಯದಂತಾಗಿ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹತ್ತಿರದ ಅಂಗಡಿಕಾರರು ದುರ್ವಾಸನೆಯಿಂದ ಬೇಸತ್ತಿದ್ದಾರೆ. ಬಸ್ ನಿಲ್ದಾಣದಿಂದ ಹೊರಗೆ ಬರುವ ವಾಹನಗಳು ಈ ರಸ್ತೆಯಲ್ಲಿ ಹಾದು ಹೋಗುವಾಗ ಒಳಚರಂಡಿ ಕೊಳಚೆ ನೀರು ಜನರ ಮೈ, ಬಟ್ಟೆ ಮೇಲೆ ಸಿಂಚನವಾಗುತ್ತಿದೆ.
ಹೊಸ ಕೋರ್ಟ್ ಸಂಕೀರ್ಣ ಬಳಿ ಹಲವು ದಿನಗಳಿಂದ ಇದೇ ರೀತಿಯ ಸಮಸ್ಯೆ ಇತ್ತು. ಅದನ್ನು ಪಾಲಿಕೆಯ ವಲಯ ಕಚೇರಿ (ನಂ. 5) ಅಧಿಕಾರಿಗಳು ಶುಕ್ರವಾರವೇ ಸರಿಪಡಿಸಿದ್ದಾರೆ. ಇಲ್ಲಿಯವರೆಗೆ ವಲಯ ಕಚೇರಿ 5ರ ವ್ಯಾಪ್ತಿ ಕೊನೆಗೊಳ್ಳುತ್ತದೆ. ಇಲ್ಲಿಗೆ ಸಮೀಪದಲ್ಲಿರುವ ಬಿಆರ್ಟಿಎಸ್ ಬಸ್ ಟರ್ವಿುನಲ್ನ ಹಿಂಭಾಗದಲ್ಲಿ ರಸ್ತೆ ಮೇಲೆ ಒಳಚರಂಡಿ ನೀರು ಹರಿಯುವುದು ನಿಂತಿಲ್ಲ. ಈ ಪ್ರದೇಶ ಪಾಲಿಕೆಯ ವಲಯ ಕಚೇರಿ 9ರ ವ್ಯಾಪ್ತಿಗೆ ಒಳಪಡುತ್ತದೆ. ಅವರು ಈ ಸಮಸ್ಯೆಗೆ ಸ್ಪಂದಿಸಬೇಕಿದೆ.