ಪುತ್ತೂರು: ಅಭಿವೃದ್ಧಿ ಕುರಿತು ಮಾತನಾಡುವ ರಾಜಕರಣಿಗಳೇ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಅನುಕೂಲಕ್ಕಾಗಿ ನಗರದ ಬೆಳವಣಿಗೆಗೆ ಅಡ್ಡಿಯಾಗುವಂತೆ ಯುಜಿಡಿ ಕೈಬಿಡಲು ಷಡ್ಯಂತ್ರ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸಿನ ಕೂಟವೊಂದು ಇದಕ್ಕೆ ಬೆಂಬಲ ನೀಡುತ್ತಿದೆ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಹೇಳಿದರು.
ಒಳಚರಂಡಿ ಘಟಕ ಸ್ಥಾಪಿಸಲು ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆ ಎಂಬಲ್ಲಿ ನಗರಸಭೆ ಈಗಾಗಲೇ ೫.೫೦ ಎಕರೆ ಜಾಗ ಮೀಸಲಿಟ್ಟಿದೆ. ಈ ಘಟಕಕ್ಕೆ ಸಂಬಂಽಸಿದ ಜಾಗದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಲೇಔಟ್ ಮಾಡಲು ಹೊರಟಿದ್ದು, ಒಳಚರಂಡಿ ಘಟಕಕ್ಕೆ ಮೀಸಲಿಟ್ಟ ಜಾಗವನ್ನೂ ಅತಿಕ್ರಮಣ ಮಾಡಿದ್ದಾರೆ. ನಗರಸಭೆ ಪೌರಾಯುಕ್ತರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರೂ ನಗರಸಭೆಯಿಂದ ತೆರವು ಕಾರ್ಯ ಏಕೆ ಇನ್ನೂ ನಡೆದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಉಚ್ಚ ನ್ಯಾಯಾಲಯದಿಂದ ಉದ್ಯಮಿಯು ತಡೆಯಾಜ್ಞೆ ತಂದಿದ್ದಾರೆ. ಬಡವಾಣೆ ನಿರ್ಮಾಣಕ್ಕಾಗಿ ಈತ ನಗರ ಯೋಜನಾ ಪ್ರಾಽಕಾರಕ್ಕೆ ನೀಡಿದ ಅರ್ಜಿ ಅನುಮೋದನೆಗಾಗಿ ಪುಡಾ ಕಚೇರಿಯಲ್ಲಿದೆ. ಪುಡಾ ಮತ್ತು ನಗರಸಭೆಗೆ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದ್ದರೂ ರಸ್ತೆ ಹಾಗೂ ಒತ್ತುವರಿ ಜಾಗ ತೆರವುಗೊಳಿಸದಿರುವುದು ಉದ್ಯಮಿಯ ಕಾನೂನುಬಾಹಿರ ಕೃತ್ಯಕ್ಕೆ ಬೆಂಬಲ ನೀಡಿದಂತೆ ಎಂದು ಆರೋಪಿಸಿದರು.
ನಗರಸಭಾ ಸದಸ್ಯ ಮಹಮ್ಮದ್ ರಿಯಾಜ್, ಕಾಂಗ್ರೆಸ್ ಮುಖಂಡರಾದ ಆಲಿಕುಂಞಿ ಕೊರಿಂಗಿಲ, ಸೈಮನ್ ಗೋನ್ಸಾಲ್ವಿಸ್, ರಾಮಣ್ಣ ನಾಯ್ಕ ಉಪಸ್ಥಿತರಿದ್ದರು.