ನನಸಾಗುವತ್ತ ನಿರ್ಮಲ ನಗರದ ಕನಸು!

dj clk ugd
Published on

ಕೊರ್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ಹೆಚ್ಚುತ್ತಿರುವ ಜನಸಂಖ್ಯೆಯಿಂದ ವಿಸ್ತಾರವಾಗಿ ಬೆಳೆಯುತ್ತಿರುವ ಚಳ್ಳಕೆರೆ ನಗರದಲ್ಲಿ ಯುಜಿಡಿ ಸೌಲಭ್ಯ ಕಲ್ಪಿಸಲು 253 ಕೋಟಿ ರೂ. ಅನುದಾನ ಬೇಕೆಂದು ಶಾಸಕ ಟಿ. ರಘುಮೂರ್ತಿ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಚರಂಡಿ, ತ್ಯಾಜ್ಯ, ಕೊಳಚೆ ನೀರಿನ ಅವ್ಯವಸ್ಥೆ, ಅನೈರ್ಮಲ್ಯ ಸಮಸ್ಯೆಗಳಿಂದ ನಗರ ಇನ್ನು ಮುಕ್ತವಾಗಲಿದೆ ಎಂಬ ಕನಸು ನಾಗರಿಕರಲ್ಲಿ ಹುಟ್ಟಿಕೊಂಡಿದೆ.

ನಗರವನ್ನು 31 ವಾರ್ಡ್​ಗಳಾಗಿ ವಿಂಗಡಿಸಲಾಗಿದೆ. 16 ಸಾವಿರ ವಾಸದ ಮನೆಗಳಿರುವ ನಗರದಲ್ಲಿ ಪ್ರಸ್ತುತ 77 ಸಾವಿರ ಜನಸಂಖ್ಯೆ ಇದೆ ಎನ್ನಲಾಗಿದೆ. ಪ್ರತಿ ವ್ಯಕ್ತಿಗೆ 135 ಲೀಟರ್ ಲೆಕ್ಕದಂತೆ ನೀರಿನ ಲಭ್ಯತೆಯಲ್ಲಿ ಯಾವುದೇ ಕೊರತೆ ಇಲ್ಲ. ನಗರದಲ್ಲಿರುವ ಕೊಳವೆಬಾವಿಗಳ ಜತೆಗೆ ವಿವಿ ಸಾಗರದ ನೀರಿನ ಸರಬರಾಜು ವ್ಯವಸ್ಥೆ ಇದೆ.

ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಳ ಮತ್ತು ವಿಸ್ತರಣೆಗುತ್ತಿರುವ ನಗರದ ಮುಂದಿನ 30 ವರ್ಷಗಳವರೆಗೆ ಸುರಕ್ಷತೆ ದೃಷ್ಟಿಯಿಂದ 2055ರ ಹೊತ್ತಿಗೆ 1.35 ಲಕ್ಷ ಜನಸಂಖ್ಯೆ ಅಂದಾಜಿನಲ್ಲಿ ಚರಂಡಿ, ಶೌಚಗೃಹ, ಸ್ವಚ್ಛತೆಯ ಸಮಸ್ಯೆ ಪರಿಹಾರಕ್ಕೆ ಯುಜಿಡಿ ಮಹತ್ವದ ಯೋಜನೆಯಾಗಿದೆ.

ಯೋಜನೆ ಸ್ವರೂಪ: ಬಳಸಿದ ನೀರನ್ನು (ತ್ಯಾಜ್ಯ ನೀರು) ಪರಿಷ್ಕರಿಸಿ ಮತ್ತೆ ಪರಿಸರಕ್ಕೆ ಬಿಡುವ ಉದ್ದೇಶ ಯುಜಿಡಿ ಯೋಜನೆಯದ್ದಾಗಿದೆ. ನಗರದ ಪ್ರತಿ ಓಣಿ, ರಸ್ತೆಗಳಲ್ಲಿ ಚೇಂಬರ್ ನಿರ್ಮಾಣ ಮಾಡಿ, ಪ್ರತಿ ಮನೆಗಳ ಶೌಚಗೃಹ, ತ್ಯಾಜ್ಯ ನೀರಿಗೆ ಪೈಪ್​ಲೈನ್ ಅಳವಡಿಕೆ ಮಾಡಲಾಗುವುದು.

ನಗರದಲ್ಲಿ 192 ಕಿಮೀ ಉದ್ದದ ಪೈಪ್​ಲೈನ್ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. ನಗರದ ತಗ್ಗು ಪ್ರದೇಶಗಳಾದ ರಹೀಂನಗರ ಹಳ್ಳ, ನಾಯಕನಹಟ್ಟಿ ರಸ್ತೆ ಮಾರ್ಗದ ವೆಂಕಟೇಶನಗರ, ಬಳ್ಳಾರಿ ರಸ್ತೆ, ಪಾವಗಡ ರಸ್ತೆಯಲ್ಲಿನ ಹಳ್ಳದ ಭಾಗದಲ್ಲಿ ನಾಲ್ಕು ತ್ಯಾಜ್ಯ ಸಂಸ್ಕರಣ ಘಟಕಗಳನ್ನು ಸ್ಥಾಪಿಸಲಾಗುತ್ತದೆ.

ಬಳಿಕ ತ್ಯಾಜ್ಯ ನೀರಿನ ಶುದ್ಧೀಕರಣಕ್ಕೆ ನಗರದ ಹೊರವಲಯದ ಜಿಟಿಟಿಸಿ ತರಬೇತಿ ಕೇಂದ್ರದ ಸಮೀಪ ಈಗಾಗಲೇ ನಗರಸಭೆ ಗೊತ್ತುಪಡಿಸಿದ ಜಾಗದಲ್ಲಿ ಮಿಷನರಿ ಘಟಕ ಅಳವಡಿಸಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಮತ್ತೆ ಪರಿಸರಕ್ಕೆ ಬಿಡುವ ಕಾರ್ಯ ನಡೆಯಲಿದೆ.

ಯುಜಿಡಿಗೆ ನೀರಿನ ಅವಶ್ಯಕತೆ ಹೆಚ್ಚು ಇರುವುದರಿಂದ ನಗರ ವ್ಯಾಪ್ತಿಯ ನಾಲ್ಕು ಭಾಗದಲ್ಲಿ ತಲಾ 10 ಗುಂಟೆ ವ್ಯಾಪ್ತಿಯಲ್ಲಿ ನೀರಿನ ಸಂಗ್ರಹ ಟ್ಯಾಂಕ್​ಗಳ ಸ್ಥಾಪನೆಗೆ ಜಾಗ ಖರೀದಿ ನಡೆದಿದೆ. ಜಾಗ ಬಾಬ್ತು ಮೊತ್ತವನ್ನು ಈಗಾಗಲೇ ಉಪ ವಿಭಾಗಾಧಿಕಾರಿ ಖಾತೆಗೆ ನಗರಸಭೆಯಿಂದ 20 ಲಕ್ಷ ರೂ. ಸಂದಾಯ ಮಾಡಲಾಗಿದೆ.

ಯೋಜನೆಗೆ ಶೀಘ್ರ ಸರ್ಕಾರದಿಂದ ಅನುದಾನ ಸಿಕ್ಕಲ್ಲಿ 3 ವರ್ಷಗಳ ಅವದಿಯಲ್ಲಿ ಕಾಮಗಾರಿ ಮುಗಿಯಲಿದೆ. ನಂತರದ ಮೂರು ವರ್ಷಗಳ ಕಾಲ ಗುತ್ತಿಗೆದಾರರು ನಿರ್ವಹಣೆ ಮಾಡಲಿದ್ದಾರೆ. ಬಳಿಕ ನಗರಸಭೆಯಿಂದ ನಿರ್ವಹಣೆ ಆಗಲಿದೆ. ಪ್ರತಿ ಕುಟುಂಬಸ್ಥರು ಯುಜಿಡಿ ನಿರ್ವಹಣೆ ಬಾಬ್ತನ್ನು ಕರದ ರೂಪದಲ್ಲಿ ಕಟ್ಟಬೇಕಿದೆ.

ಪಟ್ಟುಬಿಡದ ಶಾಸಕರು: ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಶಾಸಕ ಟಿ. ರಘುಮೂರ್ತಿ, ಮೊದಲ ಅವಧಿಯಲ್ಲೇ 112 ಕೋಟಿ ರೂ. ವೆಚ್ಚದ ಯುಜಿಡಿ ಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಯಾವುದೇ ಹೊಸ ಯೋಜನೆಗೆ ಅನುಮತಿ ಇಲ್ಲ ಎಂದು ಸರ್ಕಾರದಿಂದ ತಿರಸ್ಕೃತವಾಗಿತ್ತು.

2017ರಲ್ಲಿ 197 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಪಡಿಸಿ ಪುನಃ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆಗಲೂ ಅನುಮತಿ ಸಿಕ್ಕಲಿಲ್ಲ. ಪ್ರಸ್ತುತ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಷ್ಕರಣ ದರ ಪಟ್ಟಿಯಂತೆ 253 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಪಡಿಸಿ, ಅನುದಾನ ಮಂಜೂರಾತಿಗೆ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಮುಂದಿಟ್ಟಿದ್ದಾರೆ.

ನಗರದಲ್ಲಿ ಯುಜಿಡಿ ಯೋಜನೆ ಜಾರಿಯಿಂದ ಇನ್ನಷ್ಟು ಸೌಲಭ್ಯಗಳು ಸಿಗಲಿವೆ. ಅನೈರ್ಮಲ್ಯ ಮತ್ತು ತ್ಯಾಜ್ಯ ಸಮಸ್ಯೆಯಿಂದ ನಗರ ಮುಕ್ತವಾಗಲಿದೆ. ಪ್ರತ್ಯೇಕ ನಗರ ನೀರು ಸರಬರಾಜು ಉಪವಿಭಾಗ ಸ್ಥಾಪನೆ ಆಗಲಿದೆ. | ಟಿ. ವಿಜಯಕುಮಾರ್, ನಗರಸಭೆ ಮಾಜಿ ಉಪಾಧ್ಯಕ್ಷ, ಚಳ್ಳಕೆರೆ. ನಗರದ ರಸ್ತೆ ಮತ್ತು ರಾಜ ಕಾಲುವೆಗಳ ಒತ್ತುವರಿಯಿಂದ ಮಳೆಗಾಲದಲ್ಲಿ ಅಪಾಯದ ಪರಿಸ್ಥಿತಿ ಉಂಟಾಗುತ್ತದೆ. ಯುಜಿಡಿ ನಿರ್ವಣದಿಂದ ನಗರದ ಸೌಂದರ್ಯ ಹೆಚ್ಚಿಸಲಿದೆ. ಕೊಳಚೆ, ತ್ಯಾಜ್ಯ ಮುಕ್ತವಾಗಲಿದೆ. | ಎಂ. ಚೇತನ್​ಕುಮಾರ್, ನಗರಸಭೆ ಮಾಜಿ ಸದಸ್ಯ, ಚಳ್ಳಕೆರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net