

ವಿಜಯವಾಣಿ ಸುದ್ದಿಜಾಲ ಉಡುಪಿ
ನೂತನ ವಿಶ್ವಾವಸು ಸಂವತ್ಸರವು ಸಮಸ್ತ ಲೋಕಕ್ಕೆ ಶುಭವನ್ನು ತರಲಿ. ಎಲ್ಲರಿಗೂ ಧರ್ಮ ಮಾರ್ಗದಲ್ಲಿ ಮುನ್ನಡೆಯುವ ಸದ್ಬುದ್ಧಿ ಪ್ರಾಪ್ತಿಯಾಗಲಿ ಎಂದು ಉಡುಪಿ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಯುಗಾದಿ ಹಿನ್ನೆಲೆಯಲ್ಲಿ ಮಾ.29ರಂದು ಸಂದೇಶ ನೀಡಿದ ಶ್ರೀಗಳು, ಹೊಸ ವರ್ಷ ಎಂದೊಡನೆ ಎಲ್ಲರಿಗೂ ಹೊಸ ಹರುಷ ಉದಯವಾಗುತ್ತದೆ. ಆದರೆ, ಅದು ಆ ಒಂದು ದಿನ ಮಾತ್ರ ಸೀಮಿತವಾಗಿರಬಾರದು. ಸಂಪೂರ್ಣ ಸಂವತ್ಸರದಲ್ಲೂ ವ್ಯಾಪ್ತವಾದಾಗ ಹೊಸ ಸಂವತ್ಸರಕ್ಕೆ ವಿಶೇಷ ಅರ್ಥ ಲಭಿಸುತ್ತದೆ ಎಂದು ತಿಳಿಸಿದ್ದಾರೆ.
ಯುಗಾದಿಯ ಈ ಶುಭ ಸಂದರ್ಭದಲ್ಲಿ ಹಾಗೂ ಸಾರ್ಥಕ ಆಚರಣೆ ಹಿನ್ನೆಲೆಯಲ್ಲಿ ಯಾರು ಈವರೆಗೆ ಭಗವದ್ಗೀತೆ ಬರೆದಿಲ್ಲವೋ ಅವರು ಕೋಟಿ ಗೀತಾ ಲೇಖನ ಯಜ್ಞದಲ್ಲಿ ದೀಕ್ಷೆ ಪಡೆಯಬೇಕು. ಪ್ರತಿದಿನ ಗೀತೆ ಬರೆದು ಆ ಪುಸ್ತಕವನ್ನು ನ.30ರ ಗೀತಾ ಜಯಂತಿಯ ಒಳಗೆ ಖುದ್ದು ಉಡುಪಿ ಕೃಷ್ಣ ಸನ್ನಿಧಿಗೆ ಬಂದು ಅಥವಾ ಅಂಚೆಯ ಮೂಲಕವಾದರೂ ತಲುಪಿಸಬೇಕು. ನೂತನ ವಿಶ್ವಾವಸು ಸಂವತ್ಸರದಲ್ಲಿ ಭಗವದ್ಗೀತೆ ಬರೆಯುವ ಸಂಕಲ್ಪ ಮಾಡಿದರೆ ಅದು ಭಗವದ್ಗೀತಾ ಸಂವತ್ಸರವಾಗಿ ಪರಿವರ್ತನೆಗೊಳುತ್ತದೆ. ಗೀತಾಚಾರ್ಯನಾದ ಶ್ರೀಕೃಷ್ಣನ ಸಂಪೂರ್ಣ ಆಶೀರ್ವಾದ ಲಭಿಸುತ್ತದೆ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.