ಎಲ್ಲರನ್ನೂ ಒಂದೆಡೆ ಸೇರಿಸುವ ಹಬ್ಬ ಯುಗಾದಿ

SIRSI SHOBHA YATRE
Published on

ಶಿರಸಿ: ಪ್ರತಿ ಮನುಜನ ಹಿಂದಿನ ಪಾಪಕರ್ಮಗಳನ್ನೆಲ್ಲ ತೊಡೆದು ಹಾಕುವ ಅದ್ಭುತ ಸಮಯ ಯುಗಾದಿ. ಗಂಗೆಯನ್ನು ನೆನೆಯುವ ಮೂಲಕ ದಿನವನ್ನು ಆರಂಭಿಸುವ ಸ್ವಭಾವ ಬೆಳೆಸಿಕೊಳ್ಳಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಯುಗಾದಿ ಉತ್ಸವದ ಅಂಗವಾಗಿ ನಗರದಲ್ಲಿ ಯುಗಾದಿ ಉತ್ಸವ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಶೋಭಾ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಹಿಂದುತ್ವದ ಭಾವ ಬುನಾದಿಯಾದ ಯುಗಾದಿ ಹಬ್ಬ ಎಲ್ಲರನ್ನೂ ಒಂದೆಡೆ ಸೇರಿಸುವ ಹಬ್ಬವಾಗಿದೆ. ಸೂರ್ಯ ನಮಸ್ಕಾರ, ಭಗವದ್ಗೀತಾ ಪಠಣ, ಭಜನೆಯಂಥ ಒಳ್ಳೆಯ ಅಭ್ಯಾಸಗಳನ್ನು ಜೀವನದಲ್ಲಿ ಹೊಂದುವುದರಿಂದ ಅತ್ಯುತ್ತಮ ಪರಿವರ್ತನೆ ಹೊಂದಲು ಸಹಾಯಕವಾಗಲಿದೆ. ದೇವರಲ್ಲಿ ಭಕ್ತಿ ಬೆಳೆಸಿಕೊಂಡಷ್ಟು ಪರಿಪೂರ್ಣವಾಗಲು ಸಾಧ್ಯ’ ಎಂದರು.

ಸೋಂದಾ ಜೈನ ಮಠದ ಶ್ರೀ ಭಟ್ಟಾಕಳಂಕ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಮೋಹ, ಲೋಭ, ಮದ, ಮಾತ್ಸರ್ಯಗಳನ್ನು ತೊರೆದು ಉತ್ತಮ ಜೀವನಕ್ಕೆ ಮುಂದಡಿಯಿಡಲು ಯುಗಾದಿ ಪರ್ವಕಾಲ, ಸಕಾಲವಾಗಿದೆ. ದುಶ್ಚಟ, ದುರ್ಗಣಗಳನ್ನು ಬಿಟ್ಟು ಮನಃಪರಿವರ್ತನೆ ಮಾಡಿಕೊಂಡು ಹೊಸ ಸಂವತ್ಸರಕ್ಕೆ ಹೊಸ ಜೀವನ ಆರಂಭಿಸಬೇಕು ಎಂದರು.

ಬಣ್ಣದಮಠದ ಮು.ನಿ.ಪ್ರ ಶ್ರೀ ಶಿವಲಿಂಗ ಸ್ವಾಮೀಜಿ ಮಾತನಾಡಿ, ನಮ್ಮ ಮೂಲ ಬೇರನ್ನು ಮರೆತು ಉಳಿದೆಡೆ ಕೈ ಚಾಚುತ್ತಿದ್ದೇವೆ. ಪಾಶ್ಚಾತ್ಯ ಸಂಸ್ಕೃತಿಯಿಂದ ನಮ್ಮ ಮೂಲ ಶಿಕ್ಷಣ ಪದ್ಧತಿಯೇ ಕಣ್ಮರೆಯಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಪಾಶ್ಚಾತ್ಯರು ನಮ್ಮ ಸಂಸೃ್ಕಯತ್ತ ಮುಖಮಾಡುತ್ತಿದ್ದಾರೆ. ನಮ್ಮವರು ವಿಮುಖರಾಗುತ್ತಿರುವುದು ವಿಷಾದನೀಯ ಸಂಗತಿ ಎಂದರು.

ಧರ್ಮದಿಂದ ಎಲ್ಲವನ್ನೂ ಜಯಿಸಲು ಸಾಧ್ಯ. ಆದ್ದರಿಂದ ಧರ್ಮ ಪ್ರಚಾರ ಕಾರ್ಯದಲ್ಲಿ ಹೆಚ್ಚಾಗಿ ತೊಡಗಬೇಕು. ಸತ್ಕಾರ್ಯಗಳು ಹೆಚ್ಚಾದಂತೆ ಸಮಾಜದಲ್ಲಿನ ವಿಕೃತಿಗಳ ಪ್ರಮಾಣ ಕ್ಷೀಣಿಸುತ್ತವೆ. ಹೆಚ್ಚುತ್ತಿರುವ ಭಯೋತ್ಪಾದನೆ ವಿನಾಶದ ದಾರಿಯನ್ನು ತೋರಿಸುತ್ತದೆ. ಇದರ ಕುರಿತಾಗಿ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದರು.

ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ರಮೇಶ ದುಬಾಶಿ, ಕಳೆದ 27ನೇ ವರ್ಷಗಳಿಂದ ನಗರದಲ್ಲಿ ಆಯೋಜಿಸುತ್ತಿರುವ ಯುಗಾದಿ ಉತ್ಸವವು ಸಾರ್ವಜನಿಕರ ಸಹಕಾರದಿಂದ ವಿಜೃಂಭಣೆಯಿಂದ ನಡೆಯುತ್ತಿದೆ. ಶಿರಸಿಯ ಯುಗಾದಿ ಉತ್ಸವ ರಾಜ್ಯದಲ್ಲಿಯೆ ಮಾದರಿಯಾಗಿದೆ ಎಂದರು.

ಯುಗಾದಿ ಸಮಿತಿ ಉಪಾಧ್ಯಕ್ಷ ಅಶ್ವಿನ್ ನಾಯ್ಕ, ಗೌರವಾಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ, ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ, ಕೃಷ್ಣ ಎಸಳೆ, ಸುರೇಶ ಶೆಟ್ಟಿ, ಗಣಪತಿ ನಾಯ್ಕ, ಇತರರು ಪಾಲ್ಗೊಂಡಿದ್ದರು.

ಬೃಹತ್ ಶೋಭಾ ಯಾತ್ರೆ

ನಗರದ ವಿಕಾಸಾಶ್ರಮ ಮೈದಾನದಿಂದ ಆರಂಭಗೊಂಡ ಶೋಭಾ ಯಾತ್ರೆಯಲ್ಲಿ ಸಾವಿರಾರು ಜನ ಪಾಲ್ಗೊಂಡರು. ಈ ವರ್ಷ ಗ್ರಾಮೀಣ ಪ್ರದೇಶವೂ ಸೇರಿ 50ಕ್ಕೂ ಅಧಿಕ ಸ್ತಬ್ಧ ಚಿತ್ರ, ಬಂಡಿಗಳ ಮೆರವಣಿಗೆ ನಡೆದಿದ್ದು ವಿಶೇಷವಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ಶೋಭಾ ಯಾತ್ರೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net