ಕೃಷ್ಣನ ಆರಾಧನೆಯಿಂದ ಜೀವನದ ಎಲ್ಲ ಸಂಕಷ್ಟ ದೂರ

UgadiAmerica
ಶಿವಳ್ಳಿ ಕುಟುಂಬ ಆಫ್​ ನಾರ್ಥ್​ ಅಮೆರಿಕ ಆಯೋಜಿಸಿದ್ದ ಯುಗಾದಿ ಕಾರ್ಯಕ್ರಮದಲ್ಲಿ ಡಿಜಿಟಲ್​ ವರ್ಚುಯಲ್​ ಮೂಲಕ ಪುತ್ತಿಗೆ ಹಾಗೂ ಪೇಜಾವರ ಶ್ರೀಗಳು ಆಶೀರ್ವಚನ ನೀಡಿದರು. ಸಂಟನೆಯ ವಿವಿಧ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Published on

ಪುತ್ತಿಗೆ ಸುಗುಣೇಂದ್ರ ಶ್ರೀ ಆಶೀರ್ವಚನ -- ಅಮೆರಿಕದಲ್ಲಿ ಯುಗಾದಿ ಆಚರಣೆ

ಉಡುಪಿ: ಜೀವನದಲ್ಲಿ ಎದುರಾಗುವ ಎಲ್ಲ ಸಂಕಷ್ಟಗಳು ಉಡುಪಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣನ ಆರಾಧನೆ ಮಾಡುವುದರಿಂದ ದೂರವಾಗಿ, ಮನಸ್ಸಿನ ಎಲ್ಲ ಅಭೀಷ್ಟಗಳು ಪೂರ್ಣವಾಗಿ, ಲೋಕಕ್ಕೆ ಕ್ಷೇಮವಾಗುವುದು ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವದಿಸಿದರು.

ಅಮೆರಿಕದಲ್ಲಿರುವ 'ಶಿವಳ್ಳಿ ಕುಟುಂಬ ಆಫ್​ ನಾರ್ಥ್​ ಅಮೆರಿಕ' ಸಂಟನೆಯು ಸೌರಮಾನ ಯುಗಾದಿ ಹಿನ್ನೆಲೆಯಲ್ಲಿ ಏ.27, 28ರಂದು ಡಿಜಿಟಲ್​ ವರ್ಚುಯಲ್​ ಮೂಲಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಉತ್ತರ ಅಮೆರಿಕದ ನೆಲೆಸಿರುವ ಶಿವಳ್ಳಿ ಕುಟುಂಬದ ಎಲ್ಲ ಸದಸ್ಯರಿಗೂ ಒಳ್ಳೆಯದಾಗಲಿ ಎಂದು ಹರಸಿದರು.

ಸನಾತನ ಸಂಸ್ಕೃತಿ ಉಳಿಸಿ

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಾತನಾಡಿ, ಎಲ್ಲಿಯೇ ಇದ್ದರೂ ನಮ್ಮೂರಿನ ಸಂಸ್ಕೃತಿ ಉಳಿಸಿಕೊಳ್ಳಬೇಕು. ಜತೆಗೆ ಮುಂದಿನ ಪೀಳಿಗೆಯ ಮಕ್ಕಳಿಗೆ ಸನಾತನ ಸಂಸ್ಕೃತಿ ಪರಿಚಯಿಸಿಕೊಡಬೇಕು ಎಂದರು. ಶ್ರೀರಾಮಚಂದ್ರನಿಗೆ ಅತಿಪ್ರಿಯವಾದ ದೇಶಸೇವೆಯಲ್ಲಿಯೂ ತೊಡಗಿಸಿಕೊಳ್ಳುತ್ತಿರುವ ಉತ್ತರ ಅಮೆರಿಕದ ಶಿವಳ್ಳಿ ಕುಟುಂಬದ ಸದಸ್ಯರಿಗೆಲ್ಲ ಉಡುಪಿ ಶ್ರೀಕೃಷ್ಣನ ಹಾಗೂ ಅಯೋಧ್ಯಾ ಶ್ರೀರಾಮನ ಪೂರ್ಣ ಅನುಗ್ರಹವಿರಲಿ ಎಂದು ಶುಭ ಹಾರೈಸಿದರು.

ರಾಶಿ ಫಲ ವಾಚನ

ಅಮೆರಿಕದ ಆಸ್ಟಿನ್​ ಶ್ರೀಕೃಷ್ಣ ಮಠದ ಮುಖ್ಯ ಅರ್ಚಕ ಅವಿನಾಶ್​ ಆಚಾರ್ಯ ಅವರು ಕ್ರೋಧಿನಾಮ ಸಂವತ್ಸರದ ರಾಶಿ ಫಲ ವಾಚಿಸಿ, ನಾವು ಪ್ರತಿನಿತ್ಯ ಜಪ-ಪೂಜೆಗಳನ್ನು ತಪ್ಪದೇ ಮಾಡಿದಲ್ಲಿ ರಾಶಿ ಫಲದಲ್ಲಿ ತೊಡಕಿದ್ದರೂ ಸಹ ಭಗವಂತನ ಕೃಪಾಕಟಾಕ್ಷ ಖಂಡಿತ ದೊರೆಯುತ್ತದೆ ಎಂದರು.

ಭರತನಾಟ್ಯ ಕಲೆ ಉಳಿಸೋಣ

ವಿದೂಷಿ ಭ್ರಮರಿ ಶಿವಪ್ರಕಾಶ್​ ಮಾತನಾಡಿ, ಭರತನಾಟ್ಯ ಶಾಸ್ತ್ರವು ಬ್ರಹ್ಮನೇ ಸೃಷ್ಟಿಸಿದ ಐದನೇ ವೇದವಾಗಿದೆ. ಪಾಶ್ಚಿಮಾತ್ಯ ಕಲೆಯ ಅಬ್ಬರದ ನಡುವೆಯೂ ಈ ಕಲೆ ಜೀವಂತವಾಗಿದೆ. ಅದನ್ನು ನಾವು ಉಳಿಸಿ, ಬೆಳೆಸೋಣ ಎಂದರು.

ಕಾರ್ಯಾಧ್ಯಕ್ಷ ಶ್ರೀಶ ಜಯಸೀತಾರಾಂ, ನಿರ್ದೇಶಕರಾದ ರಾಜೇಂದ್ರ ಕೆದ್ಲಾಯ, ಮನಮೋಹನ್​ ಕಟಪಾಡಿ, ಹಾಗೂ ಪ್ರಶಾಂತ ಕುಮಾರ್​ ಮಾತನಾಡಿ, ಕುಟುಂಬದ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕುಟುಂಬದ ಅಧ್ಯಕ್ಷ ಸಂತೋಷ್​ ಗೋಳಿ, ಉಪಾಧ್ಯಕ್ಷ ಪ್ರಕಾಶ್​ ಉಡುಪ ಅವರು ಎಲ್ಲ ಸದಸ್ಯರ ಸಹಕಾರ ಕೋರಿದರು.

ಶಿವಳ್ಳಿ ಕುಟುಂಬದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಸಂದೇಶ್​ ಭಾರ್ಗವ್​ ಸ್ವಾಗತಿಸಿದರು. ಸದಸ್ಯೆ ಮೇಘಾ ರಾವ್​ ವಂದಿಸಿದರು.

ಶಿವಳ್ಳಿ ಕುಟುಂಬ ಆಫ್​ ನಾರ್ಥ್​ ಅಮೆರಿಕ

ಅವಿಭಾಜಿತ ದಕ್ಷಿಣ ಕನ್ನಡ, ಉಡುಪಿ ಪ್ರದೇಶದಿಂದ ವಲಸೆ ಹೋಗಿ ಉತ್ತರ ಅಮೆರಿಕದ ವಿವಿಧ ಪ್ರದೇಶಗಳಲ್ಲಿ ಅನೇಕ ವಿಪ್ರ ಕುಟುಂಬಗಳು ನೆಲೆಸಿವೆ. ಆ ಕುಟುಂಬಗಳನ್ನೆಲ್ಲ ಒಟ್ಟು ಸೇರಿಸಿ, ಮುಂದಿನ ತಲೆಮಾರಿಗೂ ಶಿವಳ್ಳಿ ಹಾಗೂ ಊರಿನ ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸುವ ಉದ್ದೇಶದಿಂದಲೇ 'ಶಿವಳ್ಳಿ ಕುಟುಂಬ ಆಫ್​ ನಾರ್ಥ್​ ಅಮೆರಿಕ' ಎಂಬ ಸಂಘಟನೆ ಸ್ಥಾಪಿಸಲಾಗಿದೆ. ಯುಗಾದಿ ಆಚರಣೆ ಹಿಂದುಗಳಿಗೆ ಪ್ರಮುಖವಾಗಿರುವುದರಿಂದ ಸಂಘಟನೆ ನೇತೃತ್ವದಲ್ಲಿ ಎರಡು ದಿನ ಸಂಭ್ರಮದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉತ್ತರ ಅಮೆರಿಕದ ಶಿವಳ್ಳಿ ಕುಟುಂಬದ ಸದಸ್ಯರು ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳು ಪ್ರಸ್ತುತ ಪಡಿಸಿದ ವಿವಿಧ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ ಮತ್ತು ನೃತ್ಯ ಪ್ರದರ್ಶನ ಗಮನ ಸೆಳೆಯಿತು.

ಪ್ರತಿಯೊಬ್ಬರೂ ವರ್ಷದಲ್ಲಿ 3 ಅಭ್ಯಂಗ ಸ್ನಾನ ಮಾಡುವುದು ಅತ್ಯಗತ್ಯ, ಅದು ಯಾವುದೆಂದರೆ, ಸೌರಮಾನ ಯುಗಾದಿ, ಚಾಂದ್ರಮಾನ ಯುಗಾದಿ ಮತ್ತು ನರಕ ಚತುರ್ದಶಿ. ವಿಷುಕಣಿ, ಪಂಚಾಂಗ ಶ್ರವಣ ಮತ್ತು ಯುಗಾದಿಯ ಆಚರಣೆ ಮತ್ತು ಮಹತ್ವವನ್ನೂ ಎಲ್ಲರೂ ತಿಳಿದುಕೊಳ್ಳಬೇಕಿದೆ. ವಿದ್ವಾನ್​ ಕೃಷ್ಣರಾಜ್​ ಭಟ್​ ಕುತ್ಪಾಡಿ. ಕಾರ್ಯಕ್ರಮದ ಅತಿಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net