

ಮಂಡ್ಯ: ದೇಶದಲ್ಲಿ ಯಾರು ಯಾವ ದೇವರನ್ನು ಬೇಕಾದರೆ ಪೂಜೆ ಮಾಡಬಹುದು. ಆದರೆ ನಮ್ಮ ದೇವರನ್ನು ಪೂಜೆ ಮಾಡುವುದಕ್ಕೆ ಅಡ್ಡಿಪಡಿಸುವುದು ಹಾಗೂ ಶ್ರದ್ದಾ ಕೇಂದ್ರಗಳನ್ನು ಒಡೆದು ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಆಹ್ವಾನಿತ ಸದಸ್ಯ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ವತಿಯಿಂದ ಆಯೋಜಿಸಿದ್ದ ಯುಗಾದಿ ಉತ್ಸವದ ಬಳಿಕ ಮಾತನಾಡಿದ ಅವರು, ಹಿಂದು ರಾಷ್ಟ್ರದೊಳಗೆ ಎಲ್ಲರಿಗೂ ಬದುಕುವ ಅವಕಾಶ ಇದೆ. ಆದರೆ ಹಿಂದುಗಳ ಮೇಲೆ ದೌರ್ಜನ್ಯ ನಡೆಸಿ ಎಲ್ಲ ಮೀರಿ ಹೋಗುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಇಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಹಾಗೆಂದ ಮಾತ್ರಕ್ಕೆ ಹಿಂದುಗಳ ಮೇಲೆ ದೌರ್ಜನ್ಯ ನಡೆಸಿ, ನಮ್ಮ ಹೆಣ್ಣು ಮಕ್ಕಳನ್ನು ಅಪಹರಿಸುವುದು, ಹಿಂದುಗಳ ಮೇಲೆ ದೌರ್ಜನ್ಯ ನಡೆಸುವುದು. ದೇವರು ಮತ್ತು ಉತ್ಸವಕ್ಕೆ ಅಡ್ಡಿಪಡಿಸುವುದು ಎಷ್ಟು ಸರಿ. ನಾವು ಏನಾದರೂ ಹಾಗೆ ಮಾಡಿದ್ದೇವಾ?. ಎಲ್ಲರೂ ಶಾಂತಿ-ಸಹಬಾಳ್ವೆಯಿಂದ ಬದುಕುವುದಕ್ಕೆ ಯಾವ ಆತಂಕವೂ ಇಲ್ಲ. ವಕ್ಫ್ ಬಂದಾಗಿನಿಂದ ನಮ್ಮ ಭೂಮಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಈಗಾಗಲೇ ಎಚ್ಚರಿಕೆ ಕೊಡಲಿಲ್ಲ ಎಂದರೆ ಸಮಸ್ಯೆ ಮತ್ತಷ್ಟು ಉಲ್ಬಣವಾಗುತ್ತದೆ ಎಂದು ಹೇಳಿದರು.
ನಾಗಮಂಗಲದಲ್ಲಿ ಗಣೇಶನ ಮೆರವಣಿಗೆ ವೇಳೆ ಗಲಾಟೆ ಮಾಡುತ್ತಾರೆ. ಅನೇಕ ಕಡೆಗಳಲ್ಲಿ ದೇವರ ಮೆರವಣಿಗೆಯಲ್ಲಿ ಗದ್ದಲ ನಡೆಸುತ್ತಾರೆ. ಮಂಗಳೂರಿನಲ್ಲಿ ಹಸುಗಳನ್ನು ಧಾರುಣವಾಗಿ ಕಸಾಯಿ ಖಾನೆಗೆ ಸಾಗಿಸುತ್ತಾರೆ. ಇದನ್ನು ತಡೆಯಲು ಹೋದರೆ ನಮ್ಮ ಮೇಲೆ ಪ್ರಕರಣ ದಾಖಲಿಸುತ್ತಾರೆ. ಇಂತಹ ಕ್ರಮ ಸರಿಯಲ್ಲ. ಇದಕ್ಕೆ ರಾಜಕೀಯ ಬೆರಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದುತ್ವ ಎಂದು ಏನು ಬೇಕಾದರೂ ಮಾತನಾಡಬಹುದೇ, ಸಂಘಟನೆಯೊಳಗೆ ಇದ್ದಾಗ ಅದರ ಗಡಿ ಎಂಬುದಿರುತ್ತದೆ. ಯಾರೇ ಆದರೂ ಗಡಿ ಬಿಟ್ಟು ಆಚೆ ಹೋಗಬಾರದು. ಪಕ್ಷದ ಸಮಿತಿಯೊಳಗೆ ಎಷ್ಟು ಬೇಕಾದರೂ ಮಾತನಾಡಬಹುದು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬೇಸರ ವ್ಯಕ್ತಪಡಿಸಿದ ಅವರು, ಪಕ್ಷದ ವಿಚಾರವನ್ನು ಪಕ್ಷದೊಳಗೆ ಚರ್ಚೆ ಮಾಡಬೇಕು. ಅದು ಬಿಟ್ಟು ಹೊರಗೆ ಮಾತನಾಡುವುದು ಸರಿಯಲ್ಲ. ಅದು ಹಿಂದುತ್ವದ ಲಕ್ಷಣವಲ್ಲ. ನಾಮ ಹಾಕಿದರೆ ಮಾತ್ರವೇ ಹಿಂದುತ್ವವೇ, ಹಿಂದುತ್ವದಲ್ಲಿ ಒಂದು ಶಿಸ್ತಿದೆ ಎಂದರು.
ಲೆಕ್ಕಪರಿಶೋಧಕರು ಹಾಗೂ ತೆರಿಗೆ ಸಲಹೆಗಾರ ಕೆ.ರಾಮಲಿಂಗೇಗೌಡ, ನಗರ ನಿರ್ವಾಹಕ ಅಜಯ್, ರಮೇಶ್, ಪ್ರಾಧ್ಯಾಪಕ ಸುರೇಶ್ ಇದ್ದರು.