ಸಕ್ಕರೆನಾಡಿನಲ್ಲಿ ಸಂಭ್ರಮದ ಯುಗಾದಿ: ದೇವಸ್ಥಾನದಲ್ಲಿ ಪೂಜೆ, ಮನೆಗಳಲ್ಲಿ ಸಡಗರ

Ugadi festival celebration Mandya
Published on

ಮಂಡ್ಯ: ಜಿಲ್ಲಾದ್ಯಂತ ಭಾನುವಾರ ‘ಯುಗಾದಿ’ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಹಬ್ಬದ ಅಂಗವಾಗಿ ಜಿಲ್ಲೆಯ ಬಹುತೇಕ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಬೆಳಗ್ಗೆಯಿಂದ ರಾತ್ರಿವರೆವಿಗೂ ಎಲ್ಲ ದೇವಾಲಯಗಳು ಭಕ್ತರಿಂದ ತುಂಬಿದ್ದವು. ದೇವಾಲಯಕ್ಕೆ ಹೋಗುತ್ತಿದ್ದ ಭಕ್ತರ ಪೈಕಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯೇ ಹೆಚ್ಚಾಗಿತ್ತು. ಬೇವು-ಬೆಲ್ಲವನ್ನು ಹಂಚಿಕೊಂಡು ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು.

ಯುಗಾದಿ ಅಂದಾಕ್ಷಣ ಬೇವು-ಬೆಲ್ಲದೊಂದಿಗೆ ನೆನಪಾಗುವುದು ಇಸ್ಪೀಟ್ ಜೂಜಾಟ. ರಸ್ತೆಗಳಲ್ಲಿ ಪೆಂಡಾಲ್ ಹಾಕಿಕೊಂಡು ಜೂಜಾಡುವುದು ಸಾಮಾನ್ಯ. ಆದರೆ, ಕಳೆದ ಕೆಲ ವರ್ಷದಿಂದ ಜೂಜಾಟಕ್ಕೆ ನಿಷೇಧ ಹೇರಲಾಗಿದೆ. ಇದರ ನಡುವೆಯೂ ಜನರು ಕದ್ದುಮುಚ್ಚಿ ಜೂಜಿನಲ್ಲಿ ತೊಡಗಿದ್ದರು. ನಗರವಾಸಿಗಳು ಗ್ರಾಮೀಣ ಭಾಗಕ್ಕೆ ತಮ್ಮ ಅಡ್ಡಗಳನ್ನು ಬದಲಿಸಿಕೊಂಡಿದ್ದರು.

ನಗರದ ಗಣಪತಿ ದೇವಾಲಯದಲ್ಲಿ ಯುಗಾದಿ ಹೊಸ ವರ್ಷದ ಪ್ರಯುಕ್ತ ಪಂಚಾಂಗದ ಶ್ರವಣ ಮತ್ತು ಪೂಜಾ ವಿಧಿಗಳನ್ನು ಆಚರಿಸಲಾಯಿತು. ಶನಿವಾರ ಅಮಾವಾಸ್ಯೆ ಪ್ರಯುಕ್ತ ಶನೇಶ್ಚರ ಹೋಮದ ಮೂಲಕ ಜನತೆಯ ಕಲ್ಯಾಣಕ್ಕಾಗಿ ವಿಶೇಷ ಪೂಜಾ ಕಾರ್ಯಕ್ರಮ ನಡೆಸಲಾಯಿತು.

ಪ್ರಧಾನ ಅರ್ಚಕ ವಿಶ್ವೇಶ್ವರ ದೀಕ್ಷಿತ್ ಅವರು ದೇವಾಲಯದ ಹೊಯ್ಸಳ ಸಭಾಂಗಣದಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರಮ ನಡೆಸಿಕೊಟ್ಟು ಹೊಸ ವರ್ಷದ ರಾಶಿ ಫಲ, ಮಳೆ , ಬೆಳೆ ಶಾಂತಿ ನೆಮ್ಮದಿಗಾಗಿ ಜನರು ಆಚರಿಸಬೇಕಾದ ಕ್ರಮಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net