ಜಿಲ್ಲೆಯಲ್ಲಿ ಬೇವು-ಬೆಲ್ಲದ ಸಂಭ್ರಮ

UgadiVyapara
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ನಾಡಿನ ಜನರ ಹೊಸವರ್ಷವಾಗಿರುವ ಯುಗಾದಿ ಹಬ್ಬಕ್ಕೆ ಜಿಲ್ಲಾದ್ಯಂತ ಸಂಭ್ರಮದ ಸಿದ್ದತೆ ಕಂಡುಬಂತು. ಬೇವು-ಬೆಲ್ಲದ ಹಬ್ಬವೆಂದೇ ಕರೆಯಲ್ಪಡುವ ಅಚ್ಚ ಗ್ರಾಮೀಣ ಸೊಗಡಿನ ಯುಗಾಗಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ನಗರ ಪಟ್ಟಣ ಪ್ರದೇಶಗಳ ಮಾರುಕಟ್ಟೆಗಳಲ್ಲಿ ಗ್ರಾಹಕರು ಹಬ್ಬದ ಸಾಮಾಗ್ರಿ ಖರೀದಿಸಲು ಮುಗಿಬಿದ್ದಿದ್ದರು.

ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹೂಹಣ್ಣು ತರಕಾರಿ ಬೆಲೆ ಗ್ರಾಹಕರ ಜೇಬು ಸುಡುತ್ತಿದೆ ಎಂಬಷ್ಟು ದರಗಳಲ್ಲಿ ಏರಿಕೆ ಕಂಡುಬರುತ್ತಿದೆ, ಮಾರುಕಟ್ಟೆಗಳಲ್ಲಿ ಹೂ, ಹಣ್ಣು ಸೇರಿ ಹಬ್ಬದ ಸಾಮಗ್ರಿಗಳ ರಾಶಿ ರಾಶಿ ಕಂಡುಬರುತ್ತಿದೆ. ಮಾವಿನ ಸೊಪ್ಪು, ಬೇವಿನ ಸೊಪ್ಪು ದಂಡಿಯಾಗಿ ಬಂದಿದೆ. ಅದರಲ್ಲೂ ಚಿಗುರು ಮಾವಿನ ಸೊಪ್ಪಿಗೆ ಬಹಳ ಬೇಡಿಕೆ ಇದೆ. ವ್ಯಾಪಾರಿಗಳು ಹಬ್ಬದ ಮಾರಾಟದ ಬಿಜಿಯಾಗಿದ್ದು, ತಮಿಳುನಾಡು, ಆಂಧ್ರ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಕನಕಾಂಬರ, ಗುಲಾಬಿ, ಮಲ್ಲಿಗೆ, ಸಂಪಿಗೆ, ತಾವರೆ, ಸೇವಂತಿ ಸೇರಿ ತರಹೇವಾರಿ ಬಗೆಯ ಹೂವುಗಳ ರಾಶಿ ಮಾರುಕಟ್ಟೆಗಳಲ್ಲಿ ರಾರಾಜಿಸುತ್ತಿವೆ. ಕಳೆದ ಬಾರಿಯ ಉತ್ತಮ ಮಳೆಯಿಂದ ಬೇಸಿಗೆಯಲ್ಲಿಯೂ ನೀರಿಗೆ ಸಮಸ್ಯೆ ಎದುರಾಗಿಲ್ಲ, ಉತ್ತಮ ಬೆಳೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಕಳೆ ಕಟ್ಟಿದೆ.

ಜಿಲ್ಲಾಡಳಿತ ಭವನದಲ್ಲಿ ಭಣಭಣ: ಜಿಲ್ಲೆಯ ಶಕ್ತಿ ಕೇಂದ್ರ ದೇವನಹಳ್ಳಿಯಲ್ಲಿನ ಜಿಲ್ಲಾಡಳಿತ ಭವನ ಶನಿವಾರವೇ ಅಧಿಕಾರಿಗಳು, ಸಿಬ್ಬಂದಿಗಳಿಲ್ಲದೆ ಭಣಗುಟ್ಟುತ್ತಿತ್ತು. ಭಾನುವಾರ ಹಬ್ಬದ ಹಿನ್ನೆಲೆಯಲ್ಲಿ ಸಾಕಷ್ಟು ಸಿಬ್ಬಂದಿ ಶನಿವಾರವೇ ರಜೆ ಪಡೆದು ತೆರಳಿದ್ದರಿಂದ ಇಲಾಖೆಗಳ ಕೊಠಡಿಗಳು ಖಾಲಿಖಾಲಿಯಾಗಿದ್ದವು, ಇನ್ನು ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಸಾರ್ವಜನಿಕರು ಇತ್ತ ಸುಳಿಯದ ಹಿನ್ನೆಲೆಯಲ್ಲಿ ಜಿಲ್ಲಾಡಳಿತಭವನದಲ್ಲಿ ಆೋಷಿತ ಬಂದ್ ವಾತಾವರಣ ಕಂಡುಬಂತು.

ಬಾಡೂಟ ಪೋಸ್ಟ್‌ಪೋನ್: ಸಿಹಿ ಹೋಳಿಗೆ ಹಬ್ಬವಾದ ಯಗಾಗಿ ಮಾರನೇ ದಿನ ಹೊಸತೊಡಕಿನ ಸಂಭ್ರಮವಿರುತ್ತದೆ ಆದರೆ ಈ ಬಾರಿ ಭಾನುವಾರ ಹಬ್ಬ ಬಂದಿರುವುದರಿಂದ ಸಾಮಾನ್ಯವಾಗಿ ಸೋಮವಾರ ಮಾಂಸದೂಟದ ಹೊಸತೊಡಕು ಹಬ್ಬ ಆಚರಣೆ ಇಲ್ಲ ಬದಲಾಗಿ ಮಂಗಳವಾರಕ್ಕೆ ಕೆಲವರು ಬುಧವಾರಕ್ಕೆ ಮುಂದೂಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಗುಡ್ಡೆ ಮಾಂಸಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಜತೆಗೆ ಗುಡ್ಡೆ ಮಾಂಸದ ಚೀಟಿಯೂ ಜನಜನಿತವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಹೊಡತೊಡಕಿಗೆ ಕುರಿಮೇಕೆಗಳ ಬಲಿಗೆ ಸಿದ್ದತೆ ನಡೆದಿದೆ.

ಗ್ರಾಮೀಣ ಭಾಗದಲ್ಲಿ ಜೂಜಾಟ : ಯುಗಾದಿ ಹಬ್ಬಕ್ಕೂ ಜೂಜಾಟಕ್ಕೂ ಅವಿನಾಭಾವ ಸಂಬಂಧವಿದೆ, ಸಾಮಾನ್ಯವಾಗಿ ಯಾವುದೇ ಹಬ್ಬಗಳಲ್ಲಿ ಕಾಣದ ಜೂಜಾಟ ಗ್ರಾಮೀಣ ಪ್ರದೇಶಗಳಲ್ಲಿ ಈ ಹಬ್ಬದಂದು ಹೆಚ್ಚು ಕಂಡುಬರುತ್ತದೆ, ಜೂಜಾಟ ಕಾನೂನುಬಾಹಿರವಾಗಿರುವುದರಿಂದ ಪೊಲೀಸರ ಕಣ್ತಪ್ಪಿಸಿ ಜೂಜಾಟ ನಡೆಯುತ್ತದೆ, ಇನ್ನೂ ಕುಟುಂಬಸ್ಥರೇ ಸೇರಿಕೊಂಡು ಸಾಂಪ್ರದಾಯಿಕವಾಗಿ ಮನೆಗಳಲ್ಲೇ ಜೂಜಾಟ ಮಾಡುವುದು ಈ ಹಬ್ಬದ ವಿಶೇಷವಾಗಿದೆ.

ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೂವಿನ ದರ ತೀರ ಏರಿಕೆಯಾಗಿಲ್ಲ, ಸಾಮಾನ್ಯವಾಗಿ ಹಬ್ಬದ ವೇಳೆ ಹೆಚ್ಚು ಬೇಡಿಕೆ ಹಿನ್ನೆಲೆಯಲ್ಲಿ ತುಸು ದರ ಏರಿಕೆಯಾಗಿದೆಯಷ್ಟೇ,

ಈ ಬಾರಿಯ ಯುಗಾದಿಯಲ್ಲಿ ಉತ್ತಮ ವ್ಯಾಪಾರ ನಡೆಯುವ ನಿರೀಕ್ಷೆ ಇದೆ. ಈಗಾಗಲೇ ತರಹೇವಾರಿ ಹೂಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಗ್ರಾಹಕರಿಂದಲೂ ಬೇಡಿಕೆ ಕಂಡುಬರುತ್ತಿದೆ,

ವೆಂಕಟಪ್ಪ, ಹೂ ವ್ಯಾಪಾರಿ, ಹೊಸಕೋಟೆ

ಗಿಡಮರಗಳು ಹೊಸಚಿಗುರುಗಳನ್ನು ಮೈದುಂಬಿಕೊಂಡು ಪರಿಸರಕ್ಕೆ ಹೊಸ ರೂಪ ನೀಡುವ ನಮ್ಮ ಜೀವನದಲ್ಲಿ ಕಹಿಸಿಹಿ ಎರಡೂ ಸಮನಾಗಿ ಸ್ವೀಕರಿಸುವಂತೆ ಯುಗಾದಿ ಹಬ್ಬ ಪ್ರತಿಯೊಬ್ಬರ ಮನೆಮನಗಳನ್ನು ಸಂತೋಷಗೊಳಿಸಲಿ, ಯುಗಾದಿ ನಾಡಿನ ಪ್ರಮುಖ ಹಬ್ಬವಾಗಿದ್ದು ಮನೆಗಳಲ್ಲಿ ಭಾರಿ ಸಂಭ್ರಮದಿಂದ ಆಚರಣೆ ಮಾಡುವುದರಿಂದ ವಸ್ತುಗಳ ಬೆಲೆ ಹೆಚ್ಚಾದರೂ ಖರೀದಿ ಮಾಡಿ ಹಬ್ಬವನ್ನು ಆಚರಣೆ ಮಾಡುತ್ತೇವೆ.

ಆರ್.ಸುನೀತಾ, ಗೃಹಿಣಿ ಕುಂದಾಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net