ಜಿಲ್ಲಾದ್ಯಂತ ಯುಗಾದಿ ಸಡಗರ

kolara
Published on

ಕೋಲಾರ: ನಗರ ಸೇರಿ ಜಿಲ್ಲೆಯಾದ್ಯಂತ ಭಾನುವಾರ ಯುಗಾದಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ಭಕ್ತರು ದೇವಾಲಯಗಳಿಗೆ ತೆರಳಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು. ನಂತರ ದೇವರಿಗೆ, ಹಿರಿಯರಿಗೆ ನಮಸ್ಕರಿಸಿ, ಬೇವು-ಬೆಲ್ಲ ತಿಂದು, ಶುಭಾಶಯ ಕೋರಿದರು. ಮಧ್ಯಾಹ್ನ ಹೊಳಿಗೆ, ಪಾಯಸ ಸವಿದು ಸಂಭ್ರಮಿಸಿದರು. ಬೆಳಗ್ಗೆ ಹಿರಿಯ ಸಮಾಧಿಗಳಿಗೆ ಪೂಜೆ ಸಲ್ಲಿಸಿದರು.

ಭೂತಮ್ಮದೇವಿ ಹಾಗೂ ಮುನೇಶ್ವರನಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಅನಾದಿಕಾಲದಿಂದಲೂ ನಡೆದು ಬಂದಿದ್ದು, ಯುಗಾದಿ ಮಾರನೇ ದಿನ ಮಾಂಸಹಾರಿಗಳು ಭೂತಮ್ಮನಿಗೆ ಪೂಜೆ ಸಲ್ಲಿಸಿ ಮಾಂಸಹಾರ ಸೇವಿಸುತ್ತಿದ್ದರು. ಆದರೆ, ಈ ಬಾರಿ ಯುಗಾದಿ ಸೋಮವಾರ ಬಂದಿರುವುದರಿಂದ ಅಂದು ಮಾಂಸ ಸೇವಿಸದ ಕಾರಣ ಭೂತಮ್ಮನ ಪೂಜೆ ಮಂಗಳವಾರಕ್ಕೆ ಮೂಂದೂಡಲ್ಪಟ್ಟಿದೆ.

ಹಾಗೆಯೇ ನಗರದ ವೈಶ್ಯ ಸಮುದಾಯ ಹಾಗೂ ಸಸ್ಯಹಾರಿಗಳು ಮಾತ್ರ ಇಂದೇ ಭೂತಮ್ಮನಿಗೆ ಪೂಜೆ ಸಲ್ಲಿಸಿ ಪಕ್ಕದಲ್ಲಿದ್ದ ಮುನೇಶ್ವರನಿಗೆ ಪುರಿ ಚೆಲ್ಲಿ ಭಕ್ತಿ ತೋರಿದರು.

ಯುಗಾದಿಯ ಮಾರನೇ ದಿನ ಮಾಂಸದೂಟಕ್ಕೆ ಪ್ರಾಶಸವೆಂಬಂತೆ ಜನ ಆಚರಿಸಿಕೊಂಡು ಬಂದಿರುವುದು ವಿಶೇಷವಾಗಿದ್ದು, ಮಾಂಸದೂಟದ ವರ್ಷತೊಡಕಿಗೆ ಮುನ್ನಾ ಗಾಂಧಿ ನಗರ ಬಡಾವಣೆಯ ಜನತೆ ಇಲ್ಲಿನ ಭೂತಮ್ಮನಿಗೆ ಪೂಜೆ ಸಲ್ಲಿಸಿದ ನಂತರವೇ ತಮ್ಮ ಮಾಂಸದೂಟದ ಅಡುಗೆ ಮಾಡಲು ಮುಂದಾಗುತ್ತಾರೆ.

ವರ್ಷಕ್ಕೊಮ್ಮೆ ಇಲ್ಲಿ ಪೂಜೆ ಮಾಡುವುದರಿಂದ ತಮ್ಮ ಮಕ್ಕಳು ಭೂತ ಚೇಷ್ಟೆ, ತೊಂದರೆಗಳಿಂದ ದೂರವಾಗುತ್ತಾರೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

ಯುಗಾದಿ ಮಾರನೇ ದಿನ ವರ್ಷದ ತೊಡಕು ಆಚರಿಸಿಕೊಂಡು ಬರುವುದು ವಾಡಿಕೆಯಾಗಿದ್ದು, ಸೋಮವಾರ ಆಗಿದ್ದ ಕಾರಣ ವರ್ಷದ ತೊಡಕು ಆಚರಣೆ ಮಂಗಳವಾರ ಮುಂದೂಡಲಾಗಿದೆ. ಮಾಂಸ ಮಾರಾಟ ಜೋರಾಗುವ ನೀರಿಕ್ಷೆಯಲ್ಲಿ ವ್ಯಾಪಾರಸ್ಥರು ತಯಾರಿ ನಡೆಸಿದ್ದಾರೆ. ಯುಗಾದಿ ಮತ್ತು ರಂಜಾನ್​ ಒಂದೇ ಬಾರಿ ಇರುವುದರಿಂದ ಗ್ರಾಹಕರಿಗೆ ಮಾಂಸದ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ನಗರದ ಅಮ್ಮವಾರಿಪೇಟೆ, ಕ್ಲಾಕ್​ ಟವರ್​, ಎಂ.ಬಿ.ರಸ್ತೆ ಸುತ್ತಮುತ್ತಲಿನ ಕೋಳಿ ಹಾಗೂ ಕುರಿ ಮಾಂಸದ ಅಂಗಡಿಗಳು ಹೆಚ್ಚಾಗಿದ್ದು, ಸೋಮವಾರ ಮಧ್ಯ ರಾತ್ರಿಯಿಂದಲೇ ಕೋಳಿ, ಕುರಿ, ಮೇಕೆ ವ್ಯಾಪಾರ ನಡೆಯಿತು.

ತಾಲೂಕಿನ ವಕ್ಕಲೇರಿ, ವೇಗಮಲ್​, ಕ್ಯಾಲನೂರು, ರೋಜೋರನಹಳ್ಳಿ, ಟಮಕ, ತಂಬಿಹಳ್ಳಿ, ಭಟ್ರಹಳ್ಳಿ ಗ್ರಾಮಗಳಲ್ಲೂ ಮಾಂಸದ ಮಾರಾಟ ಜೋರಾಗಿಯೆ ನಡೆಯಲಿದೆ. ಈಗಾಗಲೇ ಮಾಂಸ ಮಿತ್ರರು ಹಳ್ಳಿಗಳಿಗೆ ಭೇಟಿ ನೀಡಿ ನಾಟಿ ಕೋಳಿ ಖರೀದಿ ಮಾಡುತ್ತಿರುವುದು ಕಂಡು ಬಂದಿದ್ದು, ಕೆಜಿ ಕೋಳಿ 550 ರೂ.ಗೆ ಮಾರಾಟವಾಗುತ್ತಿದೆ.

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಕುರಿ ಮತ್ತು ಮೇಕೆ ಮಾಂಸದ ಬೆಲೆ ಕೆಜಿಗೆ 700 ರೂ. ಇತ್ತು. ಫಾಮ್​ರ್ ಹಾಗೂ ಬಾಯ್ಲರ್​ ಕೋಳಿ ಮಾಂಸ ಕೆಜಿಗೆ 200 ರೂ. ಹಾಗೂ ನಾಟಿ ಕೋಳಿ ಮಾಂಸ 700ರೂ.ಗೆ ಮಾರಾಟವಾಯಿತು. ಬಾಡೂಟ ತಯಾರಿಕೆಗೆ ಅಗತ್ಯ ಕೊತ್ತಂಬರಿ ಸೊಪ್ಪಿನ ಬೆಲೆಯು ಗ್ರಾಹಕರಿಗೆ ತಟ್ಟಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net