ಸ್ಥಳದಲ್ಲೇ 26 ಅಭ್ಯರ್ಥಿಗಳಿಗೆ ನೌಕರಿ: ಹಲವರ ಬದುಕಿಗೆ ನೆರವಾದ ಉದ್ಯೋಗ ಮೇಳ

Tulasi-2
Published on

ಮಂಡ್ಯ: ನಗರದ ಎಸ್.ಬಿ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಉದ್ಯೋಗ ಮೇಳದಲ್ಲಿ 26 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಯಿತು. ಅಂತೆಯೇ 100ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಎರಡನೇ ಹಂತಕ್ಕೆ ಆಯ್ಕೆಯಾದರು.
ಸಮರ್ಥನಂ ಅಂಗವಿಕಲರ ಸಂಸ್ಥೆ, ಎಸ್.ಬಿ ಎಜುಕೇಷನ್ ಟ್ರಸ್ಟ್, ತಾವರಗೆರೆ ಕೈಗಾರಿಕಾ ತರಬೇತಿ ಕೇಂದ್ರ, ಮಾಂಡವ್ಯ ಕೈಗಾರಿಕಾ ತರಬೇತಿ ಕೇಂದ್ರ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ ಮೇಳದಲ್ಲಿ ಐಟಿ, ಆಟೋಮೊಬೈಲ್, ಮೆಕ್ಯಾನಿಕಲ್, ಕಟ್ಟಡ ನಿರ್ಮಾಣ, ಮಾರ್ಕೆಟಿಂಗ್, ಸೆಲ್ಸ್ ಆ್ಯಂಡ್ ರೀಟೆಲ್, ಟೆಲಿಕಾಂ, ಬಿಪಿಒ, ಟೆಕ್ಸಟೈಲ್ಸ್, ಬ್ಯಾಂಕಿಂಗ್, ಫೈನಾನ್ಸ್, ಇನ್ಸುರೆನ್ಸ್ ಸೇರಿದಂತೆ ವಿವಿಧ ಕ್ಷೇತ್ರದ 32 ಕಂಪನಿಗಳು ಭಾಗವಹಿಸಿದ್ದರು. ಜಿಲ್ಲೆಯ ವಿವಿಧೆಡೆಯಿಂದ 450ಕ್ಕೂ ಹೆಚ್ಚು ಅಭ್ಯರ್ಥಿಗಳು ಆಗಮಿಸಿದ್ದರು.
ವೇದಿಕೆ ಕಾರ್ಯಕ್ರಮದಲ್ಲಿ ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಮಾತನಾಡಿ, ಕೌಶಲಾಧಾರಿತ ಶಿಕ್ಷಣ ಪಡೆದುಕೊಂಡರೆ ಅದನ್ನು ಕಾರ್ಯರೂಪಕ್ಕೆ ತರುವುದು ಅಗತ್ಯ. ಕಂಪನಿಗಳಲ್ಲಿ ಉದ್ಯೋಗ ಮಾಡಬಹುದು. ಇಲ್ಲವೇ ಉದ್ದಿಮೆ ಸ್ಥಾಪಿಸಿ ಆ ಮೂಲಕ ಇತರರಿಗೆ ಕೆಲಸ ಕೊಡುವ ಕೆಲಸವನ್ನೂ ಮಾಡಬಹುದು ಎಂದು ಸಲಹೆ ನೀಡಿದರು.
ಒಂದು ಸಲ ಉದ್ಯೋಗಕ್ಕೆ ಸೇರಿಕೊಂಡರೆ ಅದು ಶಿಸ್ತು ಮತ್ತು ಅಳತೆಗೋಲಲ್ಲಿ ನಿಮ್ಮನ್ನು ನೀವು ರೂಪಿಸಿಕೊಳ್ಳುತ್ತೀರಿ. ನಿಮ್ಮ ಜೀವನ ಸುಂದರವಾಗಿರುತ್ತದೆ. ವ್ಯಕ್ತಿತ್ವ ಬೆಳೆಯುತ್ತದೆ. ಉದ್ಯೋಗವನ್ನು ಎಲ್ಲಾದರು ಒಂದು ಕಡೆ ಕಂಡುಕೊಳ್ಳುವ ಪ್ರಯತ್ನ ಮಾಡಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮೇಳ ಉದ್ಘಾಟಿಸಿದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮೈಸೂರು ವಿಭಾಗೀಯ ಸಹಾಯಕ ನಿರ್ದೇಶಕ ಕೆ.ಎಚ್.ನಾಗರಾಜು ಮಾತನಾಡಿ, ಕೌಶಲಾಧಾರಿತ ತರಬೇತಿ ಪಡೆದಲ್ಲಿ ಎಲ್ಲರಿಗೂ ಉದ್ಯೋಗ ದೊರೆಯಲಿದೆ. ಅದಕ್ಕಾಗಿ ಕಂಪನಿಗಳಲ್ಲಿ ಅಪ್ರೆಂಟಿಷ್ ತರಬೇತಿ ಪಡೆಯುವುದು ಅಗತ್ಯ ಎಂದು ಸಲಹೆ ನೀಡಿದರು.
ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಎನ್.ಆರ್.ವೇಣುಗೋಪಾಲ್ ಮಾತನಾಡಿ, ಹಿಂದೆಲ್ಲ ಉದ್ಯೋಗಂ ಪುರುಷ ಲಕ್ಷಣಂ ಎಂದು ಹೇಳುತ್ತಿದ್ದರು. ಇಂದು ಉದ್ಯೋಗಂ ಮನುಷ್ಯ ಲಕ್ಷಣಂ ಆಗಿದೆ. ಲಿಂಗ ಬೇಧವಿಲ್ಲದೆ ಎಲ್ಲರೂ ಸಮಾನವಾಗಿ ದುಡಿಯುತ್ತಿದ್ದಾರೆ. ಯುವ ಸಮೂಹ ವಿದ್ಯಾಭ್ಯಾಸ ಮುಗಿಸಿದ ಮೇಲೆ ಹೆಚ್ಚಾಗಿ ತಾವಿದ್ದಲ್ಲಿಯೇ ದುಡಿಮೆಯ ಮಾರ್ಗ ಕಂಡುಕೊಳ್ಳಬೇಕು ಎಂದರು.
ಸಮರ್ಥನಂ ಸಂಸ್ಥೆಯ ಅಖಿಲ ಭಾರತ ಉದ್ಯೋಗ ಅಧಿಕಾರಿ ಕೆ.ಸತೀಶ್, ಎಚ್‌ಆರ್ ಮಲ್ಲಿಕಾರ್ಜುನ ನಾಡಗೌಡ, ಭವಾನಿಶಂಕರ್, ಲೋಹಿತ್, ಪ್ರವೀಣ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net