

ಬೆಂಗಳೂರು: ಕರೊನಾದಿಂದ ತತ್ತರಿಸಿರುವ ಮುಂಬೈನಿಂದ ಉದ್ಯಾನ್ ಎಕ್ಸ್ಪ್ರೆಸ್ ವಿಶೇಷ ರೈಲು ಗುರುವಾರವೂ ಬೆಂಗಳೂರಿಗೆ ಆಗಮಿಸಿದ್ದು, ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ತಲೆನೋವು ಮತ್ತಷ್ಟು ಹೆಚ್ಚಿದೆ.
ಕಳೆದ 3 ದಿನಗಳಿಂದ ಉದ್ಯಾನ್ ಎಕ್ಸ್ಪ್ರೆಸ್ನಲ್ಲಿ 1,800 ಮಂದಿ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರಲ್ಲಿ 600ಕ್ಕೂ ಹೆಚ್ಚಿನವರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಿದರೆ, ಉಳಿದವರನ್ನು ಹೋಂ ಕ್ವಾರಂಟೈನ್ಗೆ ಕಳುಹಿಸಲಾಗಿದೆ.
ಗುರುವಾರ ಬೆಳಗ್ಗೆ 8.30ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ರೈಲು ಆಗಮಿಸಿತು. ರೈಲಿನಲ್ಲಿದ್ದ ಎಲ್ಲ 526 ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಿ, ಬಳಿಕ ಗಂಟಲು ದ್ರವ ಸಂಗ್ರಹಿಸಲಾಯಿತು. ಪ್ರಯಾಣದ ವಿವರ, ವಿಳಾಸ, ಮೊಬೈಲ್ ಸಂಖ್ಯೆ ಸೇರಿ ಅಗತ್ಯ ಮಾಹಿತಿ ಪಡೆದುಕೊಳ್ಳಲಾಯಿತು.
357 ಮಂದಿ ಹೋಂ ಕ್ವಾರಂಟೈನ್: ಗುರುವಾರ ಬಂದವರಲ್ಲಿ 357 ಪ್ರಯಾಣಿಕರಿಗೆ ಹೋಂ ಕ್ವಾರಂಟೈನ್ ಸೀಲ್ ಹಾಕಿ ಮನೆಗಳಿಗೆ ತೆರಳಲು ಅವಕಾಶ ಕಲ್ಪಿಸಲಾಯಿತು. ಉಳಿದ 169 ಪ್ರಯಾಣಿಕರ ಪೈಕಿ ಜ್ಞಾನಭಾರತಿ ಯೂನಿವರ್ಸಿಟಿ ಹಾಸ್ಟೆಲ್ನಲ್ಲಿ 99 ಮಂದಿ, ಎಚ್ಎಸ್ಆರ್ ಲೇಔಟ್ ಸರ್ಕಾರಿ ಬಾಲಕರ ವಿದ್ಯಾರ್ಥಿನಿಲಯದಲ್ಲಿ 51 ಹಾಗೂ ನಗರದ ವಿವಿಧ ಹೋಟೆಲ್ಗಳಲ್ಲಿ 19 ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಅಧಿಕಾರಿಗಳು ಒಳಪಡಿಸಿದರು.
ರೈಲು ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್
ಮುಂಬೈನಿಂದ ಬಂದ ಪ್ರಯಾಣಿಕರ ಪೈಕಿ ಕೆಲವರು ಸಾಂಸ್ಥಿಕ ಕ್ವಾರಂಟೈನ್ಗೆ ತೆರಳಲು ವಿರೋಧ ವ್ಯಕ್ತಪಡಿಸಿ ರೈಲು ನಿಲ್ದಾಣದಲ್ಲಿ ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿದರು. ಸಾಂಸ್ಥಿಕ ಕ್ವಾರಂಟೈನ್ ಬದಲು ಹೋಂ ಕ್ವಾರಂಟೈನ್ಗೆ ಕಳುಹಿಸುವಂತೆ ಪಟ್ಟು ಹಿಡಿದರು. ಮೊದಲ ದಿನದ ರಂಪಾಟದಿಂದ ಪಾಠ ಕಲಿತಿದ್ದ ಅಧಿಕಾರಿಗಳು ಹಾಗೂ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ರೈಲು ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಹೀಗಾಗಿ ಯಾವುದೇ ಪ್ರಯಾಣಿಕರು ಖಾಕಿ ಕಣ್ತಪ್ಪಿಸಿ ಪರಾರಿಯಾಗಲು ಸಾಧ್ಯವಾಗಲಿಲ್ಲ.
ದೆಹಲಿಯಿಂದ 386 ಮಂದಿ
ಗುರುವಾರ ಬೆಳಗ್ಗೆ ರಾಜಧಾನಿ ಎಕ್ಸ್ಪ್ರೆಸ್ ವಿಶೇಷ ರೈಲಿನಲ್ಲಿ ದೆಹಲಿಯಿಂದ ಬೆಂಗಳೂರಿಗೆ 386 ಮಂದಿ ಆಗಮಿಸಿದರು. ಅವರಲ್ಲಿ ಇಬ್ಬರನ್ನು ಮಾತ್ರ ಖಾಸಗಿ ಹೋಟೆಲ್ನಲ್ಲಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಉಳಿದವರ ಪೈಕಿ 271 ಮಂದಿಯನ್ನು ಹೋಂ ಕ್ವಾರಂಟೈನ್ ಸೀಲ್ ಹಾಕಿ ಕಳುಹಿಸಲಾಯಿತು. ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರ ಮಹಾರಾಷ್ಟ್ರ ಹೊರತುಪಡಿಸಿ ಉಳಿದ ರಾಜ್ಯದಿಂದ ಬರುವ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಲ್ಲ. ಒಂದು ವೇಳೆ ರೋಗ ಲಕ್ಷಣ ಕಂಡು ಬಂದರೆ ಮಾತ್ರ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗುತ್ತದೆ.
ವಿಮಾನದಿಂದಲೂ ಸಾವಿರಾರು ಜನ
ರೈಲಿನ ಮೂಲಕವಷ್ಟೇ ಅಲ್ಲದೆ, ವಿಮಾನಯಾನದ ಮೂಲಕವೂ ನಗರಕ್ಕೆ ಮುಂಬೈನಿಂದ ಸಾವಿರಾರು ಜನ ಬೆಂಗಳೂರಿಗೆ ಆಗಮಿಸಿದ್ದಾರೆ. ಈವರೆಗೆ 50ಕ್ಕೂ ಹೆಚ್ಚಿನ ವಿಮಾನಗಳು ಮುಂಬೈನಿಂದ ಕೆಐಎಗೆ ಆಗಮಿಸಿವೆ. ಅವುಗಳಲ್ಲಿ 5 ಸಾವಿರಕ್ಕೂ ಹೆಚ್ಚಿನ ಜನರು ನಗರಕ್ಕೆ ಆಗಮಿಸಿದ್ದು, ಅವರೆಲ್ಲರನ್ನೂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.