

ಹಿರಿಯೂರು: ದೈಹಿಕ-ಮಾನಸಿಕ ಆರೋಗ್ಯ ಭಾಗ್ಯ ಪಡೆಯಲು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯಕ ಎಂದು ಪವರ್ ಗ್ರಿಡ್ ವ್ಯವಸ್ಥಾಪಕ ಹರೀಶಕುಮಾರ್ ನಾಯರ್ ಹೇಳಿದರು.
ತಾಲೂಕಿನ ಉಡುವಳ್ಳಿ ಜವಾಹರ್ ನವೋದಯ ವಿದ್ಯಾಲಯದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಅಂತರ ಜಿಲ್ಲಾ ವಿಭಾಗೀಯ (ಹೈದರಬಾದ್ ವಲಯ) ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿ ದಿಸೆಯಿಂದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಬೇಕು. ದೇಶದೆಲ್ಲೆಡೆ ಆದರ್ಶ ಕನಸು, ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಗಳಲ್ಲಿ ಶಿಸ್ತು, ಕೌಶಲ ಅಭಿವೃದ್ಧಿ ಉದ್ದೇಶದೊಂದಿಗೆ ಸ್ಥಾಪಿತಗೊಂಡಿರುವ ನವೋದಯ ವಿದ್ಯಾಲಯಗಳು ಪಾತ್ರ ಅನನ್ಯ ಎಂದು ಶ್ಲಾಘೀಸಿದರು.
ಪ್ರಾಚಾರ್ಯ ಡ್ಯಾನಿಯಲ್ ರತನ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಲಯದಲ್ಲಿ ಸಿಗುವ ಶೈಕ್ಷಣಿಕ ಸೌಲಭ್ಯ, ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು.
ಸತತ ಪರಿಶ್ರಮದಿಂದ ಸ್ಪಷ್ಟ ಗುರಿ, ಬದ್ಧತೆಯೊಂದಿಗೆ ನಾನಾ ಕ್ಷೇತ್ರಗಳಲ್ಲಿ ಮಹತ್ಸಾಧನೆ ಮಾಡಿ ದೇಶದ ಹಿರಿಮೆಯನ್ನು ಎತಿ ಹಿಡಿಯಬೇಕು ಎಂದು ಹೇಳಿದರು.
ಅಂತರ ಜಿಲ್ಲಾ ವಿಭಾಗೀಯ ಕ್ರೀಡಾಕೂಟದಲ್ಲಿ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ, ಹಾವೇರಿ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ವಿದ್ಯಾಲಯದ 200 ಬಾಲಕರು, 168 ಬಾಲಕಿಯರು ಭಾಗವಹಿಸಿದ್ದರು.
ಕಬ್ಬಡಿ, ಖೋ-ಖೋ, ಯೋಗ, ಚೆಸ್, ಬ್ಯಾಟ್ ಮಿಟನ್, ಟೆಬಲ್ ಟೆನ್ನಿಸ್ ಇತರ ಪಂದ್ಯಾವಳಿ ಆಯೋಜಿಸಲಾಗಿತ್ತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಸಿಗಲಿದೆ.
ದೈಹಿಕ ಶಿಕ್ಷಣ ಶಿಕ್ಷಕರಾದ ಮೋಹನ್, ಮನೋಹರ್, ಹರ್ಷ, ಪ್ರಕಾಶ್, ಚೇತನ್, ಪ್ರಶಾಂತ್ ಇತರರಿದ್ದರು.