ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ

Deeksha
Published on

ಬಿ.ಸೀತಾರಾಮ ತೋಳ್ಪಾಡಿತ್ತಾಯ ಶ್ಲಾಘನೆ

ಭರತನಾಟ್ಯ ವಿದುಷಿ ದೀಕ್ಷಾ ವಿ.ಗೆ ಸನ್ಮಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡುವುದು ತಿಳಿದಷ್ಟು ಸುಲಭವಲ್ಲ. ಅದಕ್ಕೆ ತಾಳ್ಮೆ, ದೈಹಿಕ ಸಾಮರ್ಥ್ಯ ಬೇಕಾಗುತ್ತದೆ. 9 ದಿನಗಳ ಕಾಲ ಭರತನಾಟ್ಯ ಪ್ರದರ್ಶಿಸುವ ಮೂಲಕ ವಿದುಷಿ ದೀಕ್ಷಾ ವಿ. ಅವರು ವಿಶ್ವದಾಖಲೆ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ನಾಟ್ಯ ಕಲೆಯಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ ಎಂದು ಧರ್ಮಸ್ಥಳ ಶಾಂತಿವನ ಟ್ರಸ್ಟ್​ (ರಿ.)ನ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ಶ್ಲಾಘಿಸಿದರು.

ಉಡುಪಿಯ ಪರೀಕದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನದ ಕ್ಷೇಮ ಹಾಲ್​ನಲ್ಲಿ ಸೆಪ್ಟೆಂಬರ್​ 8ರಂದು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಉಡುಪಿಯಲ್ಲಿ ನಿರಂತರ 216 (9 ದಿನ) ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶಿಸಿ ವಿಶ್ವ ದಾಖಲೆ ಮಾಡಿರುವ ವಿದುಷಿ ದೀಕ್ಷಾ ವಿ. ಅವರಿಗೆ ಸನ್ಮಾನಿಸಿ ಮಾತಮಾಡಿದರು.

ವಿಶ್ವವೇ ನಿಬ್ಬೆರಗಾಗುವಂತೆ ಸಾಧನೆ ಮಾಡಿರುವ ಅವರ ಶ್ರಮದ ಹಿಂದೆ ಪತಿ ರಾಹುಲ್​ ಅವರ ಬೆಂಬಲ ಮತ್ತು ಪ್ರೋತ್ಸಾಹ ಪ್ರಮುಖವಾಗಿದೆ ಎಂದರು.

ಹೆಬ್ರಿಯ ವಿದುಷಿ ಮಮತಾ ಮಯೂರಿ ಅಭಿನಂದನಾ ನುಡಿಗಳನ್ನಾಡಿದರು. ನಗರಸಭಾ ಮಾಜಿ ಸದಸ್ಯ ಹಾಗೂ ಮಣಿಪಾಲದ ರತ್ನ ಸಂಜೀವ ಕಲಾ ಮಂಡಳದ ಮಹೇಶ ಠಾಕೂರ್​ ಮಾತನಾಡಿ, ದೀಕ್ಷಾ ಅವರ ಈ ಸಾಧನೆಯ ಹಿಂದೆ ಇದ್ದ ಛಲ ಮತ್ತು ಇಚ್ಛಾಶಕ್ತಿ ಕಾರಣವಾಗಿದೆ. ನಿಜಕ್ಕೂ ಅಪೂರ್ವ ಸಾಧನೆ ಎಂದು ಬಣ್ಣಿಸಿದರು.

ಸನ್ಮಾನ ಸ್ವೀಕರಿಸಿದ ದೀಕ್ಷಾ ವಿ. ಮಾತನಾಡಿ, ಕಲಿತ ಕಲೆಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲವಿತ್ತು. ದೇವ-ದೈವ, ನೃತ್ಯ ಗುರುಗಳು ಹಾಗೂ ಜನರ ಆಶೀರ್ವಾದದಿಂದ ಈ ಸಾಧನೆ ಸಾಧ್ಯವಾಯಿತು ಎಂದರು.

ಮುಖ್ಯ ವೈದ್ಯಾಧಿಕಾರಿ ಡಾ. ಗೋಪಾಲ ಪೂಜಾರಿ ಶುಭಾಸಂಶನೆಗೈದರು. ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣಕುಮಾರ್​ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net