

ವಿಜಯವಾಣಿ ಸುದ್ದಿಜಾಲ ಉಡುಪಿ
ಕಾಲೇಜು ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲ ಶಿಕ್ಷಣ ನೀಡಲು ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರವು ಡಾ. ಟಿಎಂಎ ಪೈ ಫೌಂಡೇಷನ್ನ ಅಂಗ ಸಂಸ್ಥೆಯಾದ ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನೊಂದಿಗೆ ಜೂನ್ 9ರಂದು ಒಡಂಬಡಿಕೆ (ಎಂಒಯು) ಮಾಡಿಕೊಂಡಿದೆ.
ಕೌಶಲಾಧಾರಿತ ಕೋರ್ಸ್ಗಳ ರಚನೆ, ಅಭಿವೃದ್ಧಿ ಮತ್ತು ನಿರ್ವಹಣೆ, ಉದ್ಯೋಗ ಕೌಶಲ ವೃದ್ಧಿ, ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್, ವಿವಿಧ ಶೈಕ್ಷಣಿಕ ಮತ್ತು ವೃತ್ತಿಪರ ಕಾರ್ಯಾಗಾರ, ಕೈಗಾರಿಕಾ ವಾತಾವರಣ ಪರಿಚಯಿಸುವಿಕೆ, ಎರಡೂ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳ
ವಿನಿಮಯ ಮತ್ತು ಪದವಿಯೊಂದಿಗೆ ಕೌಶಲ ಕೋರ್ಸ್ಗಳ ಶಿಕ್ಷಣದ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ನ ಚೇರ್ಮನ್ ಡಾ. ಸುರ್ಜಿತ್ ಸಿಂಗ್ ಪಾಬ್ಲಾ ಮಾತನಾಡಿ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಕೌಶಲ ತೀರಾ ಅಗತ್ಯ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಗತ್ಯವಾದ ತಯಾರಿ ಮತ್ತು ಜ್ಞಾನ ಅಗತ್ಯ. ಸ್ವ-ಉದ್ಯೋಗಕ್ಕೆ ಸಂಬಂಧಿಸಿ ವಿವಿಧ ಕೋರ್ಸ್ಗಳಾದ ಸಿಎನ್ಸಿ ಮಶೀನ್ಸ್, ಕ್ಯಾಡ್ ಸೆಂಟರ್, ಫ್ಯಾಶನ್ ಡಿಸೈನ್, ರೊಬಾಟಿಕ್ಸ್, ತ್ರಿಡಿ, ಅನಿಮೇಷನ್ ಟೆಕ್ನಾಲಜಿ, ಆಟೊ ಮೋಟಿವ್ ಸರ್ವೀಸ್, ಇಂಟೀರಿಯರ್ ಡಿಸೈನ್, ಫರ್ನೀಚರ್ ಆ್ಯಂಡ್ ಪಿಕ್ಸ್ಚರ್ಸ್, ಆಟೋಮೇಷನ್, ಎಐ, ಎಂಎಲ್, ಸೈಬರ್ ಸೆಕ್ಯೂರಿಟಿ, ಇವಿ ಟೆಕ್ನಾಲಜಿ, ಬ್ಯೂಟಿ ಆ್ಯಂಡ್ ವೆಲ್ನೆಸ್ ಮುಂತಾದವು ಅವಶ್ಯಕ ಎಂದರು.
ಎಂಎಸ್ಡಿಸಿಯ ರಿಜಿಸ್ಟ್ರಾರ್ ಡಾ. ಅಂಜಯ್ಯ ದೇವಿನೇನಿ, ಪ್ರವೇಶ ಮತ್ತು ಸಂಪರ್ಕಾಧಿಕಾರಿ ಡಾ. ನಾರಾಯಣ ಶೆಣೈ ಕೆ., ಕಾಲೇಜಿನ ಶೈಕ್ಷಣಿಕ ಸಲಹೆಗಾರ ಡಾ.ಶ್ರೀಧರ ಭಟ್, ಪದವಿ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರಶಾಂತ ಎನ್., ಐಕ್ಯುಎಸಿ ಸಂಚಾಲಕಿ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು.
ಒಡಂಬಡಿಕೆ ಪ್ರಕ್ರಿಯೆಯಲ್ಲಿ ಕಾಲೇಜಿನ ಪ್ಲೇಸ್ಮೆಂಟ್ ಆಫೀಸರ್ ದಿನೇಶ ಎಂ. ಮತ್ತು ಎಂಎಸ್ಡಿಸಿಯ ಅನೂಷಾ ಸಹಕರಿಸಿದರು.
ತೆಂಕನಿಡಿಯೂರು ಕಾಲೇಜಿನಲ್ಲಿ ಬ್ಯಾಂಕಿಂಗ್, ಫೈನಾನ್ಸ್, ಇನ್ಶೂರೆನ್ಸ್ ಸರ್ವಿಸಸ್ ವಲಯಗಳಲ್ಲಿ ಉದ್ಯೋಗ ಲಭಿಸುವಂತಾಗಲು ಕಾಲೇಜಿನಲ್ಲಿ ಹೊಸ ಬಿಕಾಂ ಕೋರ್ಸ್, ಎಇಡಿಪಿ ಈ ವರ್ಷ ಪ್ರಾರಂಭಿಸಲಾಗಿದೆ. ಕಲಿಕೆಯೊಂದಿಗೆ ಗಳಿಕೆಯನ್ನೂ ಮಾಡಲು ಅಪ್ರೆಂಟೈಸ್ಶಿಪ್ನ ಅವಕಾಶ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳಿಗೆ ಕಲಿಕೆಯ ಸಮಯದಲ್ಲಿ ಕೈಗಾರಿಕಾ ಪೂರಕ ಮತ್ತು ಉದ್ಯೋಗ ದೊರಕುವಂತಹ ಕೌಶಲ ತರಬೇತಿ ನೀಡಲಾಗುವುದು. ಪದವಿ ಮುಗಿಯುತ್ತಿದ್ದಂತೆ ಅವರನ್ನು ಉದ್ಯೋಗಕ್ಕೆ ಅಣಿಗೊಳಿಸುವುದು ಈ ಒಡಂಬಡಿಕೆಯ ಉದ್ದೇಶವಾಗಿದೆ. | ನಿತ್ಯಾನಂದ ವಿ. ಗಾಂವಕರ. ಕಾಲೇಜಿನ ಪ್ರಾಂಶುಪಾಲ.